ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 Summit | ಪ್ರಧಾನಿ ನರೇಂದ್ರ ಮೋದಿಗೆ ಬಾಲಿವುಡ್‌ ನಟರ ಅಭಿನಂದನೆಗಳ ಮಹಾಪೂರ

Published 12 ಸೆಪ್ಟೆಂಬರ್ 2023, 5:23 IST
Last Updated 12 ಸೆಪ್ಟೆಂಬರ್ 2023, 5:23 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 18ನೇ ಜಿ20 ಶೃಂಗಸಭೆಯು ಯಶಸ್ವಿಯಾಗಿ ನೆರವೇರಿದೆ. ಶೃಂಗಸಭೆಯ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಿವುಡ್ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಅಕ್ಷಯ್‌ ಕುಮಾರ್‌ ಸೇರಿದಂತೆ ಬಾಲಿವುಡ್‌ನ ಹಲವು ನಟರು ಅಭಿನಂದನೆ ತಿಳಿಸಿದ್ದು, ಇದು ಪ್ರತಿಯೊಬ್ಬ ಭಾರತೀಯನ ಗೌರವ ಮತ್ತು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

ಜಿ–20 ಶೃಂಗಸಭೆಯ ಯಶಸ್ಸು ಜಗತ್ತಿನ ಮುಂದೆ ಭಾರತದ ಘನತೆಯನ್ನು ಹೆಚ್ಚಿಸಿದೆ. ನಮ್ಮ ದೇಶದ ಅಧ್ಯಕ್ಷತೆಯಲ್ಲಿ ನಡೆದ ಶೃಂಗಸಭೆಯಲ್ಲಿ ವಸುದೈವ ಕುಟುಂಬಕಂ, ಒಂದು ದೇಶ, ಒಂದು ಕುಟುಂಬ, ಒಂದು ಭವಿಷ್ಯ ಪರಿಕಲ್ಪನೆಯನ್ನು ಎತ್ತಿ ತೋರಿಸಲಾಗಿದೆ ಎಂದು ಅಮಿತಾಬ್ ಶ್ಲಾಘಿಸಿದ್ದಾರೆ.

‌ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ‘ಏಕತೆ’ಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತದೆಯೇ ಹೊರತು ಪ್ರತ್ಯೇಕತೆಯಲ್ಲಿ ಅಲ್ಲ ಎಂದು ಹೇಳಿರುವ ಶಾರುಖ್‌ ಖಾನ್‌ ಅವರು ಭಾರತದ ಜಿ20 ಶೃಂಗಸಭೆಯ ಅಧ್ಯಕ್ಷತೆಯ ಯಶಸ್ಸಿಗೆ ಹಾಗೂ ಪ್ರಪಂಚದ ಜನರಿಗೆ ಉತ್ತಮ ಭವಿಷ್ಯವನ್ನು ನೀಡುವುದಕ್ಕೆ ರಾಷ್ಟ್ರಗಳ ನಡುವೆ ಏಕತೆಯನ್ನು ಬೆಳೆಸುತ್ತಿರುವುದಕ್ಕೆ ನಿಮಗೆ (ನರೇಂದ್ರ ಮೋದಿ) ಅಭಿನಂದನೆಗಳು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದಾರೆ.

‘ಇದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಗೌರವ ಮತ್ತು ಹೆಮ್ಮೆಯ ಭಾವವನ್ನು ತಂದಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಪರಿಕಲ್ಪನೆಯ ನಿಮ್ಮ ನಾಯಕತ್ವದಲ್ಲಿ, ನಾವು ಏಕತೆಯಲ್ಲಿ ಏಳಿಗೆಯನ್ನು ಹೊಂದುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ. ಐತಿಹಾಸಿಕ ಜಿ20 ಶೃಂಗಸಭೆಯನ್ನು ಗುರುತಿಸಲು ಎಂತಹ ಅದ್ಭತವಾದ ಮಾರ್ಗವಾಗಿದೆ. ವಸುಧೈವ ಕುಟುಂಬಕಂ ಎಂಬುವುದು ಹೊಸ ಯುಗದ ವಾಸ್ತವ ಎಂಬುದನ್ನು ಭಾರತದ ನಾಯಕತ್ವ ಸಾಬೀತುಪಡಿಸಿದೆ’. ನಾವು ಇಂದು ಭಾರತೀಯರು ಎಂಬುದಕ್ಕೆ ಹೆಮ್ಮೆಪಟ್ಟುಕೊಳ್ಳುತ್ತೇವೆ. ನಮ್ಮನ್ನು ವಿಶ್ವ ಅಗ್ರಸ್ಥಾನದಲ್ಲಿರುವಂತೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ನಟ ಅಕ್ಷಯ್‌ ಕುಮಾರ್‌ ಅಭಿನಂದಿಸಿದ್ದಾರೆ.

ಜಿ20 ಶೃಂಗಸಭೆಯನ್ನು ಯಶಸ್ವಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅಭಿನಂದಿಸಿದ್ದಾರೆ. ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ನಾಯಕತ್ವವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಒಟ್ಟಿಗೆ ತರುವಲ್ಲಿ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಭಾರತದ ನಾಯಕತ್ವವು ಅದ್ಭುತ ಯಶಸ್ಸನ್ನು ಕಂಡಿದೆ. ಜನರಿಗೆ ಉಜ್ವಲ ಭವಿಷ್ಯ ನೀಡುವ ಅನ್ವೇಷಣೆಯಲ್ಲಿ ದಣಿವರಿಯದೆ ಮಾಡುತ್ತಿರುವ ಪ್ರಯತ್ನಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದಿಸುತ್ತೇನೆ ಎಂದು ನಟ ಅನಿಲ್‌ ಕಪೂರ್ ತಿಳಿಸಿದ್ದಾರೆ.

ಭಾರತದ ಜಿ20 ಅಧ್ಯಕ್ಷತೆಯು ‘ಜಾಗತಿಕ ಸಾಮರಸ್ಯ ಮತ್ತು ಪ್ರಗತಿಗೆ ನಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ. ಜಗತ್ತು ಇಂದು ಒಗ್ಗಟ್ಟಿನಿಂದ ನಿಂತಿದೆ, ಭಾರತ ಮುಂಚೂಣಿಯಲ್ಲಿದೆ ಎಂದು ಸಂಜಯ್‌ ದತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT