ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರದ ಆರು ಜಿಲ್ಲೆಗಳಲ್ಲಿ ಕಾಳ್ಗಿಚ್ಚು

Published 3 ಜೂನ್ 2024, 16:06 IST
Last Updated 3 ಜೂನ್ 2024, 16:06 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆರು ಜಿಲ್ಲೆಗಳಲ್ಲಿ ಕಾಳ್ಗಿಚ್ಚು ಹೊತ್ತಿಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಭಾರಿ ಪ್ರಮಾಣದ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ. ನಗರ ಪ್ರದೇಶದ ಹಲವು ಭಾಗಗಳೂ ಬೆಂಕಿ ಹರಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಜಮ್ಮು, ಉಧಂಪುರ, ರಿಯಾಸಿ, ಕಠುವಾ ಮತ್ತು ಪೂಂಛ್‌ ಜಿಲ್ಲೆಗಳಲ್ಲಿ ಕಾಳ್ಗಿಚ್ಚಿನ ಪ್ರಕರಣಗಳು ವರದಿಯಾಗಿವೆ. ಈ ವೇಳೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪೂಂಛ್‌ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಆದ್ಯಂತ ಭಾನುವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಸಲೋತ್ರಿ ಪ್ರದೇಶದ ಹಲವು ಗಣಿಗಳಲ್ಲಿ ಸ್ಫೋಟ ಸಂಭವಿಸಿತು. ಸದ್ಯ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಿಯಾಸಿ ಜಿಲ್ಲೆಯ ಅರ್ಧ್‌ಕುವಾರಿ, ಬಿದ್ದಾ ಮತ್ತು ಮರ್ದಿ ಎಂಬ ಮೂರು ಪ್ರತ್ಯೇಕ ಕಡೆಗಳಲ್ಲಿ ಕಾಳ್ಗಿಚ್ಚು ಹೊತ್ತಿಕೊಂಡಿರುವುದು ವರದಿಯಾಗಿದೆ. ಬೆಂಕಿ ನಂದಿಸಲಾಗಿದೆ. ಲಂಬಿ ಕೇರಿ ಮತ್ತು ಅರ್ಧ್‌ಕುವಾರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಮಾತಾ ವೈಷ್ಣೋದೇವಿ ಯಾತ್ರೆಗೆ ಸ್ವಲ್ಪಕಾಲ ವಿರಾಮ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಜೌರಿ ಜಿಲ್ಲೆಯ ಆರು ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಸಂಭವಿಸಿದೆ. ಜಲ್ಲಾಸ್‌ ಪ್ರದೇಶದ ಶಾಲೆಗೂ ಬೆಂಕಿಯಿಂದ ಹಾನಿಯಾಗಿದೆ. ಅಗ್ನಿ ಮತ್ತು ತುರ್ತು ಸೇವಾ ಘಟಕವು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಠುವಾ ಜಿಲ್ಲೆಯ ರಾಮಕೋಟೆ ಮತ್ತು ಬಾಶೋಲಿ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಉಧಂಪುರ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜಮ್ಮು ನಗರದ ಹೊರವಲಯ ರಗೂರ ಅರಣ್ಯ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಇದು ವಿಸ್ತಾರ ಭೂಪ್ರದೇಶಕ್ಕೆ ಹರಡಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT