ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಾಯು ಪಡೆ ಸೇರಿದ ಸಿ–295 ಯುದ್ಧ ಸಾರಿಗೆ ವಿಮಾನ

Published 25 ಸೆಪ್ಟೆಂಬರ್ 2023, 11:11 IST
Last Updated 25 ಸೆಪ್ಟೆಂಬರ್ 2023, 11:11 IST
ಅಕ್ಷರ ಗಾತ್ರ

ಘಾಜಿಯಾಬಾದ್: ಮಧ್ಯಮ ಗಾತ್ರದ ಯುದ್ಧ ಸಾರಿಗೆ ವಿಮಾನ ಸಿ–295 ಸೋಮವಾರ ಭಾರತೀಯ ವಾಯುಪಡೆ ಸೇರಿದೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಹಿಂಡನ್ ವಾಯುನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ–295 ವಿಮಾನವನ್ನು ವಾಯು ಸೇನೆಗೆ ಸೇರಿಸಿಕೊಳ್ಳಲಾಯಿತು. ನಂತರ ಸರ್ವ ಧರ್ಮ ಪೂಜೆಯನ್ನು ರಾಜನಾಥ ಸಿಂಗ್ ನೆರವೇರಿಸಿದರು.

ಈ ಸಂದರ್ಭದಲ್ಲಿ ವಾಯುಸೇನೆ ಮುಖ್ಯಸ್ಥ ವಿ.ಆರ್.ಚೌಧರಿ ಹಾಗೂ ಇತರ ಹಿರಿಯ ಅಧಿಕಾರಿಗಳು ಇದ್ದರು.

ಸಿ–295ರ ಮೊದಲ ವಿಮಾನವು ವಡೋದರದಲ್ಲಿರುವ ಭಾರತೀಯ ವಾಯು ಸೇನೆಯ ಅತ್ಯಂತ ಹಳೆಯ ಸ್ಕ್ವಾಡ್ರನ್‌ 11 ಅನ್ನು ಸೇರಿದೆ. ಕಾರ್ಯಕ್ರಮದಲ್ಲಿ ರಾಜನಾಥ ಸಿಂಗ್ ಅವರು ವಿಮಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸ್ಕ್ವಾಡ್ರನ್‌ನ ಲಾಂಛನವಾದ ಘೇಂಡಾಮೃಗದ ಚಿತ್ರದ ಬೃಹತ್ ಫಲಕ ಹಾಕಲಾಗಿತ್ತು. 

ಈ ವಿಮಾನ ಖರೀದಿಗೆ ಸಂಬಂಧಿಸಿದಂತೆ ಏರ್‌ಬಸ್‌ ಡಿಫೆನ್ಸ್‌ ಮತ್ತು ಬಾಹ್ಯಾಕಾಶ ಸಂಸ್ಥೆಯೊಂದಿಗೆ ಎರಡು ವರ್ಷಗಳ ಹಿಂದೆ ₹21,935 ಕೋಟಿಯ ಒಪ್ಪಂದವನ್ನ ಭಾರತ ಮಾಡಿಕೊಂಡಿತ್ತು. ಇವು ಸದ್ಯ ಇರುವ ಅವ್ರೊ–748 ಸಾರಿಗೆ ವಿಮಾನಗಳನ್ನು ಬದಲಿಸಿವೆ. ಸೆ. 13ರಂದು ಸಿ–295 ಸರಣಿಯ ಕೆಲ ವಿಮಾನವನ್ನು ವಾಯು ಸೇನೆಯ ಮುಖ್ಯಸ್ಥ ಬರಮಾಡಿಕೊಂಡಿದ್ದರು. ಸ್ಪೇನ್‌ನಿಂದ ಹೊರಟ ಈ ವಿಮಾನಗಳು ಭಾರತದ ವಡೋದರಕ್ಕೆ ಸೆ. 20ರಂದು ಬಂದಿಳಿದವು. 

16 ವಿಮಾನಗಳನ್ನು ಏರ್‌ಬಸ್ ಕಂಪನಿ ಸಿದ್ಧಪಡಿಸಿ ನೀಡಿದೆ. ಉಳಿದ 40 ವಿಮಾನಗಳು ಏರ್‌ಬಸ್‌ನ ಒಪ್ಪಂದದಂತೆ ಹೈದರಾಬಾದ್‌ನಲ್ಲಿರುವ ಟಾಟಾ ಅಡ್ವಾನ್ಸ್‌ ಸಿಸ್ಟಮ್‌ನ ತಯಾರಿಕಾ ಘಟಕದಲ್ಲಿ ಸಿದ್ಧಗೊಳ್ಳಲಿವೆ. ವಡೋದರದಲ್ಲಿರುವ ಬಿಡಿಭಾಗ ಜೋಡಣಾ ಘಟಕದಲ್ಲಿ ವಿಮಾನ ಅಂತಿಮ ಸ್ವರೂಪ ಪಡೆಯಲಿದೆ. ಇದು ನ. 2024ರ ಹೊತ್ತಿಗೆ ಪೂರ್ಣಗೊಳ್ಳಲಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಡೋದರದ ಈ ಘಟಕ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕಿದ್ದರು. ಖಾಸಗಿ ಸಹಭಾಗಿತ್ವದಲ್ಲಿ ಭಾರತದಲ್ಲಿ ತಯಾರಾಗುತ್ತಿರುವ ಮೊದಲ ವಿಮಾನ ಇದಾಗಿದೆ. ಸಿ–295 ಸೇರ್ಪಡೆಯಿಂದಾಗಿ ಕಳೆದ ಆರು ದಶಕಗಳಿಂದ ಬಳಕೆಯಲ್ಲಿದ್ದ ಅವ್ರೊ–748 ವಿಮಾನಗಳು ನೇಪತ್ಯಕ್ಕೆ ಸರಿದಂತಾಗಿವೆ.

ಸಿ–295 ವಿಮಾನಗಳು ಸೇನಾ ತುಕಡಿಗಳನ್ನು ಸ್ಥಳದಿಂದ ಸ್ಥಳಕ್ಕೆ ಕರೆದೊಯ್ಯುವ ಸಾಮರ್ಥ್ಯ ಹೊಂದಿವೆ. 71 ತುಕಡಿ ಅಥವಾ 50 ಅರೆ ಸೇನಾ ತುಕಡಿಗಳು ಹಾಗೂ ಅವರ ಯುದ್ಧ ಸಾಮಗ್ರಿಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. ಸಿ–295 ಅತ್ಯಂತ ಕಡಿಮೆ ಸ್ಥಳಾವಕಾಶ ಇರುವ ಪ್ರದೇಶಗಳಲ್ಲೂ ಇಳಿಯುವ ಸಾಮರ್ಥ್ಯ ಹೊಂದಿದೆ. ಆದರೆ ಸದ್ಯ ಇರುವ ಭಾರೀ ಗಾತ್ರದ ವಿಮಾನಕ್ಕೆ ಇದು ಅಸಾಧ್ಯ. ವಿಮಾನದಿಂದ ನೆಲಕ್ಕೆ ಸೈನಿಕರು ಧುಮುಕುವ ಹಾಗೂ ಹಾರಾಟ ಸಂದರ್ಭದಲ್ಲೇ ಸಾಮಗ್ರಿಗಳನ್ನು ಕಳುಹಿಸುವ ಸಾಮರ್ಥ್ಯವಿದೆ. ಜತೆಗೆ ಗಾಯಾಳುಗಳನ್ನು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸುವ ಸೌಕರ್ಯವೂ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT