ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ

ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹100 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಬಂಧನ
Published 9 ಸೆಪ್ಟೆಂಬರ್ 2023, 2:32 IST
Last Updated 9 ಸೆಪ್ಟೆಂಬರ್ 2023, 2:32 IST
ಅಕ್ಷರ ಗಾತ್ರ

ಅಮರಾವತಿ: ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಅಂದಾಜು ₹550 ಕೋಟಿ ಹಣ ದುರುಪಯೋಗ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಮತ್ತು ಟಿಡಿಪಿ ಫಲಾನುಭವಿಗಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ’ ಎಂದು ಆಂಧ್ರಪ್ರದೇಶದ ಸಿಐಡಿ ಎಡಿಜಿಪಿ ಎನ್‌. ಸಂಜಯ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದಾಜು ₹3,300 ಕೋಟಿ ಯೋಜನಾ ವೆಚ್ಚದ, ಉತ್ಕೃಷ್ಟತಾ ಕೇಂದ್ರಗಳ (ಸಿಒಇಎಸ್‌) ಕ್ಲಸ್ಟರ್‌ ಸ್ಥಾಪನೆಗೆ ಸಂಬಂಧಿಸಿರುವ ಈ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರದಿಂದಾಗಿ ರಾಜ್ಯ ಸರ್ಕಾರಕ್ಕೆ ₹300 ಕೋಟಿ ನಷ್ಟ ಉಂಟಾಗಿತ್ತು ಎಂದು ಅವರು ವಿವರಿಸಿದ್ದಾರೆ.

‘ಚಂದ್ರಬಾಬು ನಾಯ್ಡು ಅವರೇ ಈ ಪ್ರಕರಣದ ಪ್ರಮುಖ ಸಂಚುಕೋರರಾಗಿದ್ದು, ಅವರ ಅರಿವಿನಲ್ಲೇ ಸಾರ್ವಜನಿಕರ ಹಣವನ್ನು ಖಾಸಗಿ ಸಂಸ್ಥೆಗಳಿಗೆ ಶೆಲ್‌ ಕಂಪನಿಗಳ ಮೂಲಕ ವರ್ಗಾಯಿಸಲಾಗಿತ್ತು’ ಎಂದು ಸಂಜಯ್‌ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಡಿಸೈನ್ ಟೆಕ್ ಸಿಸ್ಟಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಖಾನ್ವೇಲ್ಕರ್ ಮೊದಲಾದವರನ್ನು ಹೆಚ್ಚಿನ ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ನಾಪತ್ತೆಯಾಗಿದ್ದು, ಇದರ ಹಿಂದೆ ಚಂದ್ರಬಾಬು ನಾಯ್ಡು ಮತ್ತು ಇತರರ ಕೈವಾಡ ಇರುವುದಾಗಿ ಶಂಕಿಸಲಾಗಿದೆ ಎಂದು ವಿವರಿಸಿದ್ದಾರೆ.

ಜಾರಿ ನಿರ್ದೇಶನಾಲಯ ಮತ್ತು ಜಿಎಸ್‌ಟಿ ಅಧಿಕಾರಿಗಳು ಈ ಹಿಂದೆಯೇ ಪ್ರಕರಣದ ಕುರಿತು ತನಿಖೆ ನಡೆಸಿದ್ದರು ಎಂದೂ ತಿಳಿಸಿದ್ದಾರೆ.

ಪ್ರಕರಣದ ಆರೋಪಿ ಮನೋಜ್‌ ವಾಸುದೇವ್‌ ದುಬೈಗೆ ಹಾಗೂ ಮತ್ತೊಬ್ಬ ಆರೋಪಿ ಪೆಂಡ್ಯಾಲ ಶ್ರೀನಿವಾಸ ಅವರು ಅಮೆರಿಕಕ್ಕೆ ಪರಾರಿಯಾಗಿದ್ದು, ಅವರ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿ ಆ ದೇಶಗಳಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಅಂತಿಮವಾಗಿ ಸತ್ಯ ಮತ್ತು ಧರ್ಮಕ್ಕೆ ಜಯ ಲಭಿಸಲಿದೆ. ಅವರು ನನಗೆ ಏನು ಮಾಡಿದರೂ ನಾನು ಜನರಿಗಾಗಿ ಮುನ್ನಡೆಯುತ್ತೇನೆ

-ಚಂದ್ರಬಾಬು ನಾಯ್ಡು ಟಿಡಿಪಿ ಮುಖ್ಯಸ್ಥ

‘ಜನರ ಸೇವೆ ಮಾಡುವುದನ್ನು ತಡೆಯಲಾಗದು’

‘ಕಳೆದ 45 ವರ್ಷಗಳಿಂದ ನಾನು ತೆಲುಗು ಜನರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ತೆಲುಗು ಜನರ ಹಿತಾಸಕ್ತಿಯನ್ನು ಕಾಪಾಡಲು ಪ್ರಾಣ ತ್ಯಾಗಕ್ಕೂ ಸಿದ್ಧನಿದ್ದೇನೆ. ಇಲ್ಲಿನ ಜನರ ಸೇವೆ ಮಾಡುವುದನ್ನು ತಡೆಯಲು ಭೂಮಿಯ ಮೇಲಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ನನ್ನ ಆಂಧ್ರಪ್ರದೇಶ ನನ್ನ ತಾಯ್ನಾಡು’ ಎಂದು ಬಂಧನದ ಬಳಿಕ ಚಂದ್ರಬಾಬು ನಾಯ್ಡು ಅವರು ‘ಎಕ್ಸ್‌’(ಟ್ವಿಟರ್‌) ವೇದಿಕೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಂಯಮ ಪಾಲಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಮತ್ತು ಜನರಿಗೆ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT