ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮೊದಲ ಲೋಕಪಾಲರಾಗಿ ಪಿ.ಸಿ.ಘೋಷ್ ನೇಮಕ ಸಾಧ್ಯತೆ

Last Updated 17 ಮಾರ್ಚ್ 2019, 19:18 IST
ಅಕ್ಷರ ಗಾತ್ರ

ನವದೆಹಲಿ:ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌(66) ಅವರನ್ನು ನೇಮಿಸುವ ಸಾಧ್ಯತೆ ಇದೆ.

2017ರ ಮೇನಲ್ಲಿ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾಗಿದ್ದ ಅವರು ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಸದಸ್ಯರಾಗಿದ್ದಾರೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಘೋಷ್‌ ಹೆಸರನ್ನು ಲೋಕಪಾಲ ಹುದ್ದೆಗೆ ಪರಿಗಣಿಸಲಾಗಿದೆ ಎನ್ನಲಾಗಿದೆ. ಸರ್ಕಾರ ಘೋಷ್‌ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಲೋಕಪಾಲರ ಆಯ್ಕೆ ಸಮಿತಿ ಸಭೆಯನ್ನು ಲೋಕಸಭೆಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಹಿಷ್ಕರಿಸಿದ್ದರು. ಹೀಗಾಗಿ, ಘೋಷ್‌ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರೆ ರಾಜಕೀಯ ವಿವಾದಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ತಮ್ಮನ್ನು ವಿಶೇಷ ಆಹ್ವಾನಿತರನ್ನಾಗಿ ಪರಿಗಣಿಸಿದ್ದನ್ನು ವಿರೋಧಿಸಿದ ಖರ್ಗೆ, ಕಳೆದ ವರ್ಷ ಫೆಬ್ರುವರಿಯಿಂದ ಆಯ್ಕೆ ಸಮಿತಿ ಸಭೆಗಳಿಗೆ ಹಾಜರಾಗಿಲ್ಲ.

ಇಂತಹ ಮಹತ್ವದ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು ಅವರು ಬಹಿಷ್ಕರಿಸಿದ್ದರು.

ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದವರು ಮಾತ್ರ ಲೋಕಪಾಲ ಹುದ್ದೆಗೆ ಅರ್ಹರು. ಲೋಕಪಾಲ ಸಮಿತಿಯಲ್ಲಿ ಅಧ್ಯಕ್ಷರು ಮತ್ತು ಗರಿಷ್ಠ ಎಂಟು ಸದಸ್ಯರಿರಬೇಕು. ಇವರಲ್ಲಿ ನಾಲ್ವರು ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿರಬೇಕು. ಸಮಿತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಮಹಿಳಾ ಸದಸ್ಯರು ಶೇ 50ಕ್ಕಿಂತ ಕಡಿಮೆ ಇರಬಾರದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ಲೋಕಸಭೆಯಲ್ಲಿ ಅತಿ ದೊಡ್ಡ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಸಮಿತಿಯಲ್ಲಿ ಸದಸ್ಯರನ್ನಾಗಿ ನೇಮಿಸುವ ಕುರಿತು ಲೋಕಪಾಲ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಖರ್ಗೆ ಅವರು ಪ್ರಧಾನಿ ಅವರನ್ನು ಒತ್ತಾಯಿಸಿದ್ದರು.

ಆಯ್ಕೆ ಹೇಗೆ?

ಲೋಕಪಾಲ ಆಯ್ಕೆ ಸಮಿತಿಗೆ ಪ್ರಧಾನಿ ಅಧ್ಯಕ್ಷರಾಗಿದ್ದಾರೆ. ಲೋಕಸಭಾ ಸ್ಪೀಕರ್‌, ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನಾಮನಿರ್ದೇಶನ ಮಾಡಿದ ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಕಾನೂನು ತಜ್ಞ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿಯು ಲೋಕಪಾಲರನ್ನು ಆಯ್ಕೆ ಮಾಡುತ್ತದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಟಾರ್ನಿ ಜನರಲ್‌ ಮುಕುಲ್‌ ರೋಹ್ಟಗಿ ಅವರನ್ನು ಕಾನೂನು ತಜ್ಞರ ಕೋಟಾದಡಿಯಲ್ಲಿ ಸದಸ್ಯರನ್ನಾಗಿ ನೇಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT