ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಶಾಂತಿ ಮಾತುಕತೆ ಬೆನ್ನಲ್ಲೇ ಮನೆಗೆ ಬೆಂಕಿ

Published 3 ಆಗಸ್ಟ್ 2024, 5:56 IST
Last Updated 3 ಆಗಸ್ಟ್ 2024, 5:56 IST
ಅಕ್ಷರ ಗಾತ್ರ

ಇಂಫಾಲ: ಜಿರಿಬಾಮ್‌ ಜಿಲ್ಲೆಯಲ್ಲಿ ಸಹಜ ಸ್ಥಿತಿ ನಿರ್ಮಿಸುವ ಪ್ರಯತ್ನದ ಭಾಗವಾಗಿ ಮೈತೇಯಿ ಮತ್ತು ಹಮಾರ್‌ ಸಮುದಾಯಗಳು ಗುರುವಾರ ಮಾತುಕತೆ ನಡೆಸಿದ್ದವು. ಆದರೆ, ಒಂದು ದಿನ ಕಳೆಯುವುದರೊಳಗೆ ಗುಂಡಿನ ದಾಳಿ ಮತ್ತು ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಲಾಲ್‌ಪಾನಿ ಗ್ರಾಮದಲ್ಲಿ ಸದ್ಯ ಯಾರೂ ವಾಸವಿಲ್ಲದ ಮನೆಗೆ ಶುಕ್ರವಾರ ರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

'ಈ ಪ್ರದೇಶದಲ್ಲಿ ಕೆಲವು ಮೈತೇಯಿ ಕುಟುಂಬಗಳು ವಾಸವಿದ್ದವು. ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಅವರೆಲ್ಲ, ಮನೆಗಳನ್ನು ತೊರೆದಿದ್ದರು. ಭದ್ರತಾ ವ್ಯವಸ್ಥೆಯಲ್ಲಿ ಲೋಪ ಉಂಟಾಗಿರುವುದರಿಂದ ಕಿಡಿಗೇಡಿಗಳು  ಪರಿಸ್ಥಿತಿಯ ಲಾಭ ಪಡೆದು ಮನೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಗ್ರಾಮವನ್ನು ಗುರಿಯಾಗಿಸಿ ಹಲವು ಸುತ್ತಿನ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ. ಅವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ' ಎಂದಿದ್ದಾರೆ. 

ಮೈತೇಯಿ ಮತ್ತು ಹಮಾರ್‌ ಸಮುದಾಯಗಳ ಮುಖಂಡರು ಅಸ್ಸಾಂನ ಚಛರ್‌ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಶಿಬಿರದಲ್ಲಿ ಗುರುವಾರ ಸಭೆ ಸೇರಿದ್ದರು.

ಜಿರಿಬಾಮ್‌ ಜಿಲ್ಲಾಡಳಿತ, ಅಸ್ಸಾಂ ರೈಫಲ್ಸ್‌, ಸಿಆರ್‌ಪಿಎಫ್‌ ಸಿಬ್ಬಂದಿ, ಥಾಡೌ, ಪೈತೇ ಮತ್ತು ಮಿಜೊ ಸಮುದಾಯಗಳ ಪ್ರತಿನಿಧಿಗಳೂ ಈ ವೇಳೆ ಉಪಸ್ಥಿತರಿದ್ದರು.

ಯಾವುದೇ ರೀತಿಯ ಹಿಂಸಾಕೃತ್ಯಗಳು ನಡೆಯದಂತೆ ಹಾಗೂ ಜಿಲ್ಲೆಯಲ್ಲಿ ಸಹಜ ಸ್ಥಿತಿ ನಿರ್ಮಾಣಕ್ಕೆ ಪ್ರಯತ್ನಿಸುವಂತೆ ಮಾತುಕತೆ ನಡೆಸಲಾಗಿತ್ತು. ಅದಕ್ಕೆ ಸಹಕಾರ ನೀಡುವುದಾಗಿ ಎಲ್ಲ ಸಮುದಾಯಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದವು. ಆಗಸ್ಟ್‌ 15ರಂದು ಮುಂದಿನ ಸಭೆ ನಡೆಸಲು ನಿಗದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT