ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 Summit | ‘ನವದೆಹಲಿ ಘೋಷಣೆ’ಗೆ ಒಮ್ಮತ: ಭಾರತ ವಿಶ್ವಾಸ

Published 8 ಸೆಪ್ಟೆಂಬರ್ 2023, 15:51 IST
Last Updated 8 ಸೆಪ್ಟೆಂಬರ್ 2023, 15:51 IST
ಅಕ್ಷರ ಗಾತ್ರ

ನವದೆಹಲಿ: ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ, ಈ ಸಮಾವೇಶದ ಕೊನೆ ದಿನವಾದ ಭಾನುವಾರ ಅಂಗೀಕರಿಸಲಿರುವ ಉದ್ದೇಶಿತ ‘ನವದೆಹಲಿ ಘೋಷಣೆ’ ಕುರಿತು ವಿಶ್ವ ನಾಯಕರಲ್ಲಿ ಒಮ್ಮತ ಮೂಡಲಿದೆ ಎಂಬ ವಿಶ್ವಾಸವನ್ನು ಭಾರತ ಶುಕ್ರವಾರ ವ್ಯಕ್ತಪಡಿಸಿದೆ.

ರಷ್ಯಾ–ಉಕ್ರೇನ್‌ ಬಿಕ್ಕಟ್ಟು, ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳು ‘ನವದೆಹಲಿ ಘೋಷಣೆ’ಯ ಭಾಗವಾಗಿರಲಿವೆ ಎಂಬ ನಿರೀಕ್ಷೆ ಇದೆ. ಆದರೆ, ಈ ಕುರಿತು ನಿರ್ದಿಷ್ಟ ಉತ್ತರ ನೀಡಲು ಜಿ20ಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳು ನಿರಾಕರಿಸಿದ್ದಾರೆ.

‘ನವದೆಹಲಿ ಘೋಷಣೆ’ ಬಹುತೇಕ ಸಿದ್ಧವಾಗಿದ್ದು, ಶೃಂಗಸಭೆಯಲ್ಲಿ ಭಾಗವಹಿಸಲಿರುವ ವಿಶ್ವ ನಾಯಕರಿಗೆ ಸಲ್ಲಿಸಲಾಗುತ್ತದೆ’ ಎಂದಿರುವ ಜಿ20ರ ಭಾರತದ ಶೆರ್ಪಾ ಅಮಿತಾಭ್‌ ಕಾಂತ್‌, ಯಾವೆಲ್ಲ ಅಂಶಗಳನ್ನು ಈ ಘೋಷಣೆಯು ಒಳಗೊಂಡಿರಲಿದೆ ಎಂಬ ವಿವರ ನೀಡಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಘೋಷಣೆ ಬಗ್ಗೆ ಜಿ20 ಸದಸ್ಯ ರಾಷ್ಟ್ರಗಳ ನಾಯಕರು ಒಮ್ಮತ ವ್ಯಕ್ತಪಡಿಸಿದ ಬಳಿಕ ಅಧಿಕೃತ ಹೇಳಿಕೆ ಹೊರಬೀಳುವ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.

‘ನವದೆಹಲಿ ಘೋಷಣೆ’ಯು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹಾಗೂ ಭೌಗೋಳಿಕವಾಗಿ  ದಕ್ಷಿಣದಲ್ಲಿರುವ ರಾಷ್ಟ್ರಗಳ ಧ್ವನಿಯಾಗಿರಲಿದೆ. ಭಾರತದ ಅಧ್ಯಕ್ಷತೆಯು ಒಳ್ಳಗೊಳ್ಳುವಿಕೆ, ಮಹತ್ವಾಕಾಂಕ್ಷಿ, ನಿರ್ಣಾಯಕವಾಗಿರಲಿದೆ ಎಂಬುದಾಗಿ ಪ್ರಧಾನಿ ಮೋದಿ ಅವರು ಸ್ಪಷ್ಟಮಾತುಗಳಲ್ಲಿ ಹೇಳಿದ್ದಾರೆ’ ಎಂದು ಕಾಂತ್‌ ತಿಳಿಸಿದ್ದಾರೆ.

‘ನವದೆಹಲಿ ಘೋಷಣೆ ಕುರಿತ ಒಮ್ಮತಕ್ಕೆ ರಷ್ಯಾ–ಉಕ್ರೇನ್‌ ಬಿಕ್ಕಟ್ಟು ಅಡ್ಡಿಯಾಗಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈ ಘೋಷಣೆ ಬಗ್ಗೆ ಜಿ20ರ ಎಲ್ಲ ಸದಸ್ಯ ರಾಷ್ಟ್ರಗಳಿಂದ ಒಮ್ಮತ ಮೂಡುವುದು ಹಾಗೂ ಅಧಿಕೃತ ಪ್ರಕಟಣೆ ಹೊರಬೀಳುವ ಬಗ್ಗೆ ಭಾರತ ವಿಶ್ವಾಸ ಹೊಂದಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯಮೋಹನ್‌ ಕ್ವಾತ್ರಾ ಪ್ರತಿಕ್ರಿಯಿಸಿದ್ದಾರೆ.

‘ಆಫ್ರಿಕಾ ಒಕ್ಕೂಟವನ್ನು ಜಿ20ಕ್ಕೆ ಸೇರಿಸಿಕೊಳ್ಳುವ ಕುರಿತು ಶನಿವಾರ ನಡೆಯುವ ಕಲಾಪಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

‘ನವದೆಹಲಿ ಘೋಷಣೆಗೆ ಸಂಬಂಧಿಸಿ ಒಮ್ಮತ ಮೂಡಲಿದೆಯೇ ಎಂಬುದನ್ನು ಊಹಿಸುವುದು ಕಷ್ಟ. ಆದರೆ, ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳಿಗೆ ಆಯೋಗ ಬೆಂಬಲ ನೀಡುವುದು’ ಎಂದು ಐರೋಪ್ಯ ಆಯೋಗದ ಅಧ್ಯಕ್ಷ ಚಾರ್ಲ್ಸ್ ಮಿಷೆಲ್‌ ಅಭಿಪ್ರಾಯಪಟ್ಟಿದ್ದಾರೆ.

ಐರೋಪ್ಯ ಆಯೋಗವು ಐರೋಪ್ಯ ಒಕ್ಕೂಟದ (ಇಯು) ಅಂಗಸಂಸ್ಥೆ. ಒಕ್ಕೂಟದ ರಾಜಕೀಯ ನಿಲುವುಗಳು ಹಾಗೂ ಆದ್ಯತೆಗಳನ್ನು ಗುರುತಿಸುವ ಕಾರ್ಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT