ನವದೆಹಲಿ: ಜಿ–20 ಶೃಂಗ ಸಭೆ ನಡೆಯುವ ವೇಳೆ ಔಷಧಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅನ್‌ಲೈನ್ ಡೆಲಿವರಿ ಸೇವೆಗಳನ್ನು ನವದೆಹಲಿ ಜಿಲ್ಲೆಯಲ್ಲಿ ನಿರ್ಬಂಧಿಸಲಾಗುತ್ತದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಸ್‌ಎಸ್ ಯಾದವ್, ‘ಅಗತ್ಯ ಸೇವೆಗಳಾದ ಅಂಚೆ, ವೈದ್ಯಕೀಯ ಸೇವೆ ಹಾಗೂ ಲ್ಯಾಬ್‌ಗಳಿಂದ ಸ್ಯಾಂಪಲ್ ಸಂಗ್ರಹಣೆಗೆ ದೆಹಲಿಯಾದ್ಯಂತ ಅವಕಾಶ ಇರಲಿದೆ. ನವದೆಹಲಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಔಷಧಿ ಡೆಲಿವರಿ ಹೊರತುಪಡಿಸಿ ಉಳಿದೆಲ್ಲಾ ಆನ್‌ಲೈನ್ ಡೆಲಿವರಿ ಸೇವೆಗಳಿಗೆ ನಿರ್ಬಂಧ ಇರಲಿದೆ’ ಎಂದು ಹೇಳಿದ್ದಾರೆ.
ಅಲ್ಲದೆ ಆ. 25 ರಂದು ಬಿಡುಗಡೆ ಮಾಡಿದ್ದ ಸಂಚಾರ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿರುವ ಅವರು, ಮೆಟ್ರೊ ಸಂಚಾರ ಎಂದಿನಂತೆಯೇ ಇರಲಿದೆ ಎಂದು ತಿಳಿಸಿದ್ದಾರೆ.
‘ವಿಐಪಿ ಸಂಚಾರ ಹಾಗೂ ಭದ್ರತಾ ಕಾರಣಗಳಿಂದಾಗಿ ಎಲ್ಲಾ ಮೆಟ್ರೊ ನಿಲ್ದಾಣಗಳ ಗೇಟುಗಳು 10–15 ನಿಮಿಷ ಬಂದ್ ಆಗಿರಬಹುದು. ಪ್ರಗತಿ ಮೈದಾನ್ (ಸುಪ್ರೀಂ ಕೋರ್ಟ್) ನಿಲ್ದಾಣ ಹೊರತುಪಡಿಸಿ ಉಳಿದೆಡೆ ಸೇವೆಗಳು ಎಂದಿನಂತೆ ಇರಲಿವೆ’ ಎಂದು ಅವರು ಹೇಳಿದ್ದಾರೆ.
ಪ್ರಗತಿ ಮೈದಾನದ ಭಾರತ್ ಮಂಡಪಮ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಅಂತರರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರದಲ್ಲಿ ಸೆ.9 ಹಾಗೂ 10 ರಂದು ಜಿ–20 ನಾಯಕರ ಸಭೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.