ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಭವನದ ಆವರಣದಿಂದ ಗಾಂಧಿ, ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ: ಕಾಂಗ್ರೆಸ್ ಕಿಡಿ

Published 7 ಜೂನ್ 2024, 7:04 IST
Last Updated 7 ಜೂನ್ 2024, 7:04 IST
ಅಕ್ಷರ ಗಾತ್ರ

ನವದೆಹಲಿ: ವಿಪಕ್ಷಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಾಡುವ ಪ್ರತಿಭಟನೆಗಳನ್ನು ತಡೆಯುವ ಉದ್ದೇಶದಿಂದ ಸಂಸತ್ ಭವನದ ಆವರಣದಿಂದ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಶಿವಾಜಿ ಸೇರಿದಂತೆ ಮಹನೀಯರ ಪ್ರತಿಮೆಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ರೀತಿಯ ಸ್ಟಂಟ್‌ಗಳು ಪ್ರಧಾನಿ ನರೇಂದ್ರ ಮೋದಿಯವರ ಅಸ್ಥಿರ ಸರ್ಕಾರ ಉರುಳುವುದನ್ನು ತಡೆಯಲಾಗುವುದಿಲ್ಲ ಎಂದಿದೆ.

ಪ್ರತಿಮೆಗಳ ಸ್ಥಳಾಂತರ ಕುರಿತಂತೆ ಲೋಕಸಭಾ ಕಾರ್ಯಾಲಯ ನೀಡಿರುವ ವಿವರಣೆ ಸಂಪೂರ್ಣ ಬೋಗಸ್ ಆಗಿದ್ದು, ಈ ವಿಚಾರದ ಬಗ್ಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಚರ್ಚೆ ನಡೆಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ದೂರಿದ್ದಾರೆ.

ಸಂಸತ್ ಭವನದ ಬೇರೆ ಬೇರೆ ಕಡೆ ಪುತ್ಥಳಿಗಳಿದ್ದ ಕಾರಣ ಸಂಸತ್ತಿಗೆ ಭೇಟಿ ನೀಡುವವರು ಅವುಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಲೋಕಸಭಾ ಕಾರ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು

'ಈ ಕಾರಣಕ್ಕಾಗಿ ಎಲ್ಲ ಪ್ರತಿಮೆಗಳನ್ನು ಸಂಸತ್ ಭವನದ ಆವರಣದಲ್ಲಿರುವ ‘ಪ್ರೇರಣಾ ಸ್ಥಳ’ಕ್ಕೆ ಗೌರವಯುತವಾಗಿ ಸ್ಥಳಾಂತರ ಮಾಡಲಾಗಿದೆ. ಸಂಸತ್ತಿನ ಸಂಕೀರ್ಣಕ್ಕೆ ಬರುವ ಸಂದರ್ಶಕರು ಈ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ವೀಕ್ಷಿಸಲು ಮತ್ತು ಅವರ ಜೀವನ ಅನುಭವದಿಂದ ಸ್ಫೂರ್ತಿ ಪಡೆಯುವ ರೀತಿಯಲ್ಲಿ ಅನುಕೂಲವಾಗಲೆಂದು ಈ 'ಪ್ರೇರಣಾ ಸ್ಥಳ'ವನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಸಂಸತ್ ಭವನದ ಸಂಕೀರ್ಣವು ಲೋಕಸಭಾ ಸ್ಪೀಕರ್ ಅವರ ಅಧೀನದಲ್ಲಿದ್ದು, ಅವರ ಅನುಮತಿ ಪಡೆದೇ ಪ್ರತಿಮೆಗಳ ಸ್ಥಳಾಂತರ ನಡೆದಿದೆ ಎಂದು ಕಾರ್ಯಾಲಯ ತಿಳಿಸಿತ್ತು.

‘ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ಮೋದಿ ಸರ್ಕಾರವು ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಪುತ್ಥಳಿಗಳನ್ನು ಸಂಸತ್ ಭವನದ ಎದುರಿನ ಪ್ರಮುಖ ಸ್ಥಳದಿಂದ ಹೇಗೆ ಸ್ಥಳಾಂತರ ಮಾಡುತ್ತಿವೆ ಎಂಬುದನ್ನು ನಾನು ಹೈಲೆಟ್ ಮಾಡಿದ್ದೆ’ ಎಂದು ರಮೇಶ್ ಹೇಳಿದ್ದಾರೆ.

ನಿನ್ನೆ ರಾತ್ರಿ ಪ್ರತಿಮೆಗಳ ಸ್ಥಳಾಂತರಕ್ಕೆ ಲೋಕಸಭೆ ಕಾರ್ಯಾಲಯ ನೀಡಿರುವ ಕಾರಣ ಬೋಗಸ್. ಈಗ ಅದರ ಕಾರಣ ತಿಳಿದುಬಂದಿದೆ. ಮೋದಿ ಆಡಳಿತದ ಈ 10 ವರ್ಷಗಳಲ್ಲಿ ಪುತ್ಥಳಿಗಳ ಎದುರು ಟಿಡಿಪಿ, ಜೆಡಿಯು ಸೇರಿದಂತೆ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಅಂತಹ ಪ್ರತಿಭಟನೆಗಳಿಗೆ ತಡೆ ಹಾಕಲು ಮೋದಿ ಸರ್ಕಾರ ಈ ಕೆಲಸ ಮಾಡಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಈ ಮೂಲಕ ಪ್ರಧಾನಿ ಮೋದಿ ವಿರೋಧ ಪಕ್ಷಗಳು ಸಂವಿಧಾನಬದ್ಧವಾಗಿ ಪ್ರತಿಭಟನೆ ನಡೆಸಲು ಸ್ಥಳಾವಕಾಶ ಇಲ್ಲದಂತೆ ಮಾಡಿದ್ದಾರೆ ಎಂದು ಜೈರಾಮ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT