ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವ ಪ್ರತಿನಿಧಿಗಳಿಂದ ಪ್ರತಿಭಟನೆ

ಗೋವಾ: ಅಧಿಕೃತ ಟಿಕೆಟ್‌ ಪಡೆದಿದ್ದರೂ ಪ್ರವೇಶ ನಿರಾಕರಣೆಗೆ ಆಕ್ರೋಶ
Last Updated 22 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಪಣಜಿ: ಇಲ್ಲಿ ನಡೆಯುತ್ತಿರುವ 49ನೆಯ ಭಾರತದ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದ ಸಂಘಟಕರು ಚಿತ್ರೋತ್ಸವದ ಪ್ರತಿನಿಧಿಗಳಿಂದ ಗುರುವಾರ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

ಇಂದು ಮಧ್ಯಾಹ್ನ ಡೆನ್ಮಾರ್ಕ್‌ ದೇಶದ ‘ದಿ ಗಿಲ್ಟಿ’ ಚಿತ್ರದ ವೀಕ್ಷಣೆಗೆ ಅಧಿಕೃತ ಟಿಕೆಟ್‌ ಪಡೆದಿದ್ದ ಕೆಲವರಿಗೆ ಪ್ರವೇಶ ನಿರಾಕರಿಸಿದ್ದನ್ನು ಪ್ರತಿಭಟಿಸಿ ಸುಮಾರು ನೂರಕ್ಕೂ ಹೆಚ್ಚು ಜನರು ಕಲಾ ಅಕಾಡೆಮಿಯ ಆವರಣದಲ್ಲಿ ಹತ್ತು ನಿಮಿಷಗಳ ಕಾಲ ಸತತ ಘೋಷಣೆ ಕೂಗಿ ತಮ್ಮ ಅತೃಪ್ತಿ ಹೊರಹಾಕಿದರು. ಪ್ರದರ್ಶನಕಾರರನ್ನು ಸಮಾಧಾನಗೊಳಿಸಲು ಸ್ಥಳಕ್ಕೆ ಧಾವಿಸಿದ ಗೋವಾ ಎಂಟರ್‌ಟೈನ್‌ಮೆಂಟ್‌ ಸೊಸೈಟಿಯ ಉಪಾಧ್ಯಕ್ಷ ರಾಜೇಂದ್ರ ತಲಾತ್‌ ಅವರಿಗೆ ಮುತ್ತಿಗೆ ಹಾಕಿ ಅವರೊಂದಿಗೆ ಮಾತಿನ ಚಕಮಕಿಯನ್ನೂ ನಡೆಸಿದರು.

ಪ್ರದರ್ಶನಕಾರರನ್ನು ಸಮಾಧಾನಗೊಳಿಸುವ ಬದಲು ಕುಪಿತರಾದ ತಲಾತ್‌ ವಾದಕ್ಕಿಳಿದರು. ಮಾತಿನ ನಡುವೆ ಮಲಯಾಳಂ ಸಿನಿಮಾ ತಂತ್ರಜ್ಞರೊಬ್ಬರನ್ನು ಅವಮಾನಿಸಿದರೆಂದು ಆರೋಪಿಸಿ ಕೆಲವರು ತಲಾತ್‌ ಅವರ ಕಾರಿಗೆ ಅಡ್ಡವಾಗಿ ಮಲಗಿ ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದ ಪ್ರಸಂಗವೂ ನಡೆಯಿತು.

ಅಧಿಕೃತ ಟಿಕೆಟ್‌ ಪಡೆದವರನ್ನು ಕಡೆಗಣಿಸಿ ಟಿಕೆಟ್‌ ಇಲ್ಲದವರಿಗೆ ಹೇಗೆ ಅವಕಾಶ ಕೊಡುತ್ತೀರಿ ಎಂದು ತಲಾತ್‌ ಅವರನ್ನು ಏರು ಧ್ವನಿಯಲ್ಲಿ ಪ್ರಶ್ನಿಸಿದರಲ್ಲದೆ ಜನರ ತೆರಿಗೆ ಹಣದಲ್ಲಿ ನಡೆಯುವ ಚಿತ್ರೋತ್ಸವ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆ ಜೋರಾದಾಗ ರಾಜೇಂದ್ರ ತಲಾತ್‌ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದರಲ್ಲದೆ ‘ದಿ ಗಿಲ್ಟಿ’ ಚಿತ್ರವನ್ನು ಮತ್ತೊಮ್ಮೆ ಪ್ರದರ್ಶನ ಮಾಡುವ ಭರವಸೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.

ಸಂಜೆ ಐನಾಕ್ಸ್‌ ಚಿತ್ರಮಂದಿರದ ಬಳಿಯೂ ಪೊಲಂಡ್‌ ದೇಶದ ‘ಪ್ಯಾನಿಕ್‌ ಅಟ್ಯಾಕ್‌’ ಚಿತ್ರದ ವೀಕ್ಷಣೆಗೆ ಟಿಕೆಟ್‌ ಪಡೆದವರಿಗೆ ಪ್ರವೇಶ ನಿರಾಕರಿಸಲಾಯಿತೆಂದು ಆರೋಪಿಸಿ ಕೆಲವರು ಘೋಷಣೆ ಕೂಗಿದರು.

ಈ ಎರಡು ಘಟನೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಚಿತ್ರೋತ್ಸವ ನಿರಾತಂಕವಾಗಿ ನಡೆಯುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸಿನಿಮಾಸಕ್ತರ ಸಂಖ್ಯೆ ಕ್ಷೀಣಿಸಿದಂತೆ ಕಾಣುತ್ತಿದೆ. ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳ ಗುಣಮಟ್ಟದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಪನೋರಮಾ ವಿಭಾಗದಲ್ಲಿ ಮಲಯಾಳಂ ಮತ್ತು ಬೆಂಗಾಳಿ ಚಿತ್ರಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿರುವುದೂ ಟೀಕೆಗೆ ಒಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT