ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
2023 ಮರೆಯುವ ಮುನ್ನ | ಗಣ್ಯರ ಅಗಲಿಕೆ: ಮಿಡಿದ ಹೃದಯಗಳು
2023 ಮರೆಯುವ ಮುನ್ನ | ಗಣ್ಯರ ಅಗಲಿಕೆ: ಮಿಡಿದ ಹೃದಯಗಳು
Published 27 ಡಿಸೆಂಬರ್ 2023, 0:20 IST
Last Updated 27 ಡಿಸೆಂಬರ್ 2023, 0:20 IST
ಅಕ್ಷರ ಗಾತ್ರ
ದೇಶದಲ್ಲಿ ರಾಜಕೀಯ, ಸಾಹಿತ್ಯ, ಆಧ್ಯಾತ್ಮ, ಸಂಸ್ಕೃತಿ, ಕಲೆ, ಕೈಗಾರಿಕೆ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಲವು ಗಣ್ಯರು 2023ನೇ ಸಾಲಿನಲ್ಲಿ ನಮ್ಮನ್ನು ಅಗಲಿದ್ದಾರೆ. ಅವರಲ್ಲಿ ಕೆಲವರು ಮಾಡಿರುವ ಸಾಧನೆಗಳಿಗಾಗಿ ದೇಶದ ಜನರು ಸದಾ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅಂಥವರಲ್ಲಿ ಕೆಲವರನ್ನು ಇಲ್ಲಿ ಸ್ಮರಿಸಲಾಗಿದೆ.

‘ಜ್ಞಾನಯೋಗಿ’ ಸಿದ್ಧೇಶ್ವರ ಸ್ವಾಮೀಜಿ:

ಸಿದ್ಧೇಶ್ವರ ಸ್ವಾಮೀಜಿ
ಸಿದ್ಧೇಶ್ವರ ಸ್ವಾಮೀಜಿ

ಕನ್ನಡ ನಾಡು ಕಂಡ ಅಪರೂಪದ ಸಂತ, ಭಕ್ತರ ಪಾಲಿನ ‘ನಡೆದಾಡುವ ದೇವರು’ ಎಂದು ಪ್ರಸಿದ್ಧರಾಗಿದ್ದ ಪ್ರವಚನಕಾರ, ವಿಜಯನಗರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ಅವರು 2023ನೇ ಸಾಲಿನ ಆರಂಭದಲ್ಲಿಯೇ ಅಂದರೆ, ಜನವರಿ 2ರಂದು ಅಸ್ತಂಗತರಾದರು.

ಸರಳ ಸಜ್ಜನರಾಗಿದ್ದ ಸಿದ್ಧೇಶ್ವರ ಸ್ವಾಮೀಜಿಯವರ ನಿಧನಕ್ಕೆ ನಾಡಿನುದ್ದಗಲಕ್ಕೂ ಜನರು ಕಂಬನಿ ಮಿಡಿದರು. ಕರ್ನಾಟಕದ ಮೂಲೆ ಮೂಲೆಯಿಂದ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಂದಲೂ ಅಪಾರ ಸಂಖ್ಯೆಯ ಜನರು ಸ್ವಾಮೀಜಿಯ ಅಂತಿಮ ದರ್ಶನ ಪಡೆದು, ಸ್ವಾಮೀಜಿಯ ಮಾತುಗಳನ್ನು ಸ್ಮರಿಸಿದರು.

ಮಾಜಿ ಸಚಿವ ಶರದ್‌ ಯಾದವ್ :

ಶರದ್‌ ಯಾದವ್
ಶರದ್‌ ಯಾದವ್

ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕಾರಣಿ, ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಶರದ್ ಯಾದವ್‌ (75) ಅವರು ಜನವರಿ 12ರಂದು ನವದೆಹಲಿಯಲ್ಲಿ ನಿಧನರಾದರು. ಮಧ್ಯಪ್ರದೇಶದವರಾಗಿದ್ದ ಅವರು ಲೋಹಿಯಾವಾದಿ ಆಗಿದ್ದರು.  ನಾಲ್ಕು ದಶಕಗಳ ತಮ್ಮ ರಾಜಕೀಯ ಬದುಕಿನಲ್ಲಿ ಅವರು ಹೋರಾಟದಿಂದಲೇ ಗಮನ ಸೆಳೆದಿದ್ದರು. ಲೋಕಸಭೆಗೆ ಏಳು ಬಾರಿ, ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದ ಅವರು, ಜನತಾದಳ ಪಕ್ಷದ ರಾಷ್ಟ್ರೀಯ ಸ್ಥಾಪಕ ಅಧ್ಯಕ್ಷರೂ ಆಗಿದ್ದರು. 2003ರಿಂದ 2016ರವರೆಗೆ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು.

ಜನತಾದಳ ಅಸ್ತಿತ್ವಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾಗಿದ್ದ ಶರದ್‌ ಯಾದವ್, 1989ರಲ್ಲಿ ವಿ.ಪಿ.ಸಿಂಗ್‌ ನೇತೃತ್ವದಲ್ಲಿ ಕೇಂದ್ರದಲ್ಲಿ ರಚನೆಯಾದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಂಡಲ್‌ ವರದಿ ಜಾರಿ ಪ್ರಕ್ರಿಯೆಯ ಪ್ರಮುಖರಲ್ಲಿ ಇವರೂ ಒಬ್ಬರು.  ಅಟಲ್‌ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿಯೂ ಸಚಿವರಾಗಿದ್ದ ಶರದ್ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಂಚಾಲಕರಾಗಿದ್ದರು. 2013ರಲ್ಲಿ ನಿತೀಶ್‌ ಕುಮಾರ್‌ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಾಗ ಶರದ್‌ ಯಾದವ್‌ ಮೈತ್ರಿಯಿಂದ ಹೊರಬಿದ್ದರು.

ಕವಿ ಕೆ.ವಿ. ತಿರುಮಲೇಶ್:

ಕೆ.ವಿ. ತಿರುಮಲೇಶ್‌
ಕೆ.ವಿ. ತಿರುಮಲೇಶ್‌

ಕನ್ನಡ ಪ್ರಸಿದ್ಧ ಕವಿ, ವಿಮರ್ಶಕ, ಭಾಷಾ ಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ (82) ಅವರು ಜನವರಿ 30ರಂದು ಹೈದರಾಬಾದ್‌ನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ನಿಧನರಾದರು. ಅಕ್ಷಯ ಕಾವ್ಯ, ಅರಬ್ಬಿ, ಪಾಪಿಯೂ, ಮುಖವಾಡಗಳು, ವಠಾರ ಸೇರಿ ಹಲವು ಕವನ ಸಂಕಲನಗಳನ್ನು ಅವರು ಹೊರತಂದಿದ್ದರು. ಆರೋಪ, ಅನೇಕ, ಮುಸುಗು ಕಾದಂಬರಿಗಳನ್ನು ರಚಿಸಿದ್ದರು. ಬೇಂದ್ರೆಯವರ ಕಾವ್ಯಶೈಲಿ, ಸಮ್ಮುಖ, ಉಲ್ಲೇಖ, ಕಾವ್ಯಕಾರಣ ವಿಮರ್ಶಾ ಕೃತಿಗಳನ್ನು ರಚಿಸಿದ್ದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು 60ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಬಂದಿದ್ದವು.  

ಮಾಜಿ ಸಚಿವ ಶಾಂತಿಭೂಷಣ್‌:

ಶಾಂತಿಭೂಷಣ್‌
ಶಾಂತಿಭೂಷಣ್‌

ಕೇಂದ್ರದ ಮಾಜಿ ಕಾನೂನು ಸಚಿವ, ಕಾನೂನು ತಜ್ಞ ಶಾಂತಿಭೂಷಣ್‌ (97) ಜನವರಿ 31ರಂದು ನಿಧನರಾದರು.  ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ 1977ರಿಂದ 1979ರವರೆಗೂ ಅವರು ಕಾನೂನು ಸಚಿವರಾಗಿದ್ದರು. ಸಾರ್ವಜನಿಕ ಮಹತ್ವದ ಹಲವು ಪ್ರಕರಣಗಳಲ್ಲಿ ವಕಾಲತ್ತು ವಹಿಸಿದ್ದರು.  ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧವನ್ನು ಹೇರಿದ್ದ ಅಲಹಾಬಾದ್‌ ಹೈಕೋರ್ಟ್‌ನ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ರಾಜ್‌ ನಾರಾಯಣ್‌ ಪರವಾಗಿ ಶಾಂತಿಭೂಷಣ್‌ ವಾದ ಮಂಡಿಸಿದ್ದರು.

ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್ ಬಾದಲ್‌:

ಪ್ರಕಾಶ್‌ ಸಿಂಗ್‌ ಬಾದಲ್‌
ಪ್ರಕಾಶ್‌ ಸಿಂಗ್‌ ಬಾದಲ್‌

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್‌ ಸಿಂಗ್ ಬಾದಲ್‌ (95) ಅವರು ಏಪ್ರಿಲ್ 25ರಂದು ನಿಧನರಾದರು. 43ನೇ ವಯಸ್ಸಿಗೇ ಮುಖ್ಯಮಂತ್ರಿ ಹುದ್ದಗೇರಿದ್ದ ಬಾದಲ್‌ ಅವರು ಒಟ್ಟು ಐದು ಬಾರಿ ಪಂಜಾಬ್‌ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.

ಉದ್ಯಮಿ ಶ್ರೀಚಂದ್ ಹಿಂದುಜಾ:

ಶ್ರೀಚಂದ್ ಹಿಂದುಜಾ

ಶ್ರೀಚಂದ್ ಹಿಂದುಜಾ

ಭಾರತ ಮೂಲದ ಕೋಟ್ಯಧಿಪತಿ, ಬ್ರಿಟನ್‌ನ ಶ್ರೀಮಂತ ಕುಟುಂಬದ ಶ್ರೀಚಂದ್ ಪರಮಾನಂದ ಹಿಂದುಜಾ (87) ಅವರು ಮೇ 17ರಂದು ನಿಧನರಾದರು. ಶ್ರೀಚಂದ್‌ ಹಾಗೂ ಅವರ ತಮ್ಮ ಗೋಪಿಚಂದ್ ಅವರು 2022ರಲ್ಲಿ ಸಂಡೆ ಟೈಮ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಸತತ 4ನೇ ಬಾರಿಗೆ ಅಗ್ರಸ್ಥಾನ ಪಡೆದಿದ್ದರು. ಅವರು ಹಲವಾರು ಕಂಪನಿಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ವಾಹನಗಳ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳನ್ನು ಮುನ್ನಡೆಸಿದ್ದರು.

ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬೊಫೋರ್ಸ್‌ ಹಗರಣದಲ್ಲಿ ಶ್ರೀಚಂದ್, ಅವರ ಇಬ್ಬರು ತಮ್ಮಂದಿರಾದ ಗೋಪಿಚಂದ್‌, ಪ್ರಕಾಶ್ ವಿರುದ್ಧ ಆರೋಪ ಕೇಳಿಬಂದಿತ್ತು. ಹಿಂದುಜಾ ಸಹೋದರರು ಸೇರಿದಂತೆ ಎಲ್ಲ ಆರೋಪಿಗಳನ್ನು ದೆಹಲಿ ಹೈಕೋರ್ಟ್ 2005ರಲ್ಲಿ ಖುಲಾಸೆಗೊಳಿಸಿತ್ತು.

ಗಾಂಧಿ ಮೊಮ್ಮಗ ಅರುಣ್‌ ಗಾಂಧಿ:

ಅರುಣ್‌ ಗಾಂಧಿ
ಅರುಣ್‌ ಗಾಂಧಿ

ಮಹಾತ್ಮ ಗಾಂಧಿ ಅವರ ಮೊಮ್ಮಗ ಅರುಣ್‌ ಗಾಂಧಿ (89) ಅವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮೇ 23ರಂದು ನಿಧನರಾದರು. ಲೇಖಕರಾಗಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ತುಳಿತಕ್ಕೊಳಗಾದ ಮತ್ತು ವಲಸೆ ಕಾರ್ಮಿಕರ ಮಕ್ಕಳ ಜೀವನ ಸುಧಾರಣೆಗಾಗಿ ಇರುವ ‘ಅವನಿ’ ಸಂಸ್ಥೆಯಲ್ಲಿ ಮೂರು ದಶಕ ಅವರು ಸೇವೆ ಸಲ್ಲಿಸಿದ್ದರು.

ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ:

ಉಮ್ಮನ್‌ ಚಾಂಡಿ
ಉಮ್ಮನ್‌ ಚಾಂಡಿ

ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಉಮ್ಮನ್‌ ಚಾಂಡಿ (79) ಅವರು ಬೆಂಗಳೂರಿನಲ್ಲಿ ಜುಲೈ 18ರಂದು ನಿಧನರಾದರು. ಕೇರಳದ ಪುದುಪಳ್ಳಿ ವಿಧಾನಸಭಾ ಕ್ಷೇತ್ರದಿಂದ ಸತತ 12 ಬಾರಿ ಗೆದ್ದಿದ್ದ ಚಾಂಡಿ ಅವರು ಎರಡು ಅವಧಿಗೆ (2004–2006 ಹಾಗೂ 2011–2016) ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, 2006ರಿಂದ 2011ರವರೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

ಎಂ.ಎಸ್. ಸ್ವಾಮಿನಾಥನ್:

ಎಂ.ಎಸ್‌. ಸ್ವಾಮಿನಾಥನ್

ಎಂ.ಎಸ್‌. ಸ್ವಾಮಿನಾಥನ್

ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ (98) ಅವರು ಸೆಪ್ಟೆಂಬರ್ 28ರಂದು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾದರು. ಸ್ವಾಮಿನಾಥನ್ ಮುಂದಾಳತ್ವದಲ್ಲಿ ಆರು ದಶಕಗಳ ಹಿಂದೆ ದೇಶದಲ್ಲಿ ನಡೆದ ‘ಹಸಿರು ಕ್ರಾಂತಿ’ಯು ದೇಶವು ಆಹಾರ ಕ್ಷಾಮವನ್ನು ಮೆಟ್ಟಿ ನಿಲ್ಲಲು ನೆರವಾಯಿತು. ಗೋಧಿಯ ಉತ್ಪಾದನೆಯಲ್ಲಿ ದೇಶ, ವಿಶ್ವದ ಮುಂಚೂಣಿ ಸ್ಥಾನಕ್ಕೆ ಬಂದು ನಿಂತಿತು. ದೇಶ ಬಹುಕಾಲದಿಂದ ಎದುರಿಸುತ್ತಿದ್ದ ಆಹಾರದ ಕೊರತೆಯು ‘ಹಸಿರು ಕ್ರಾಂತಿ’ಯ ಕಾರಣದಿಂದಾಗಿ ನಿವಾರಣೆ ಆಯಿತು.

ಏಷ್ಯಾದ ನೊಬೆಲ್ ಎಂದೇ ಪ್ರಸಿದ್ಧವಾಗಿರುವ ‘ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ’ 1971ರಲ್ಲಿ ಅವರಿಗೆ ದೊರೆತಿತ್ತು. ಭಾರತ ಸರ್ಕಾರ ಅವರಿಗೆ 1989ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಅವರು 84 ಗೌರವ ಡಾಕ್ಟರೇಟ್‌ಗಳಿಗೆ ಪಾತ್ರರಾಗಿದ್ದರು. 2007ರಿಂದ 2013ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT