ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ನಾಲ್ವರು ಉಗ್ರರ ಬಂಧನ

Published 20 ಮೇ 2024, 15:54 IST
Last Updated 20 ಮೇ 2024, 15:54 IST
ಅಕ್ಷರ ಗಾತ್ರ

ಅಹಮದಾಬಾದ್‌: ಇಲ್ಲಿನ ಸರದಾರ್‌ ವಲ್ಲಭಭಾಯ್‌ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐ.ಎಸ್‌ ಉಗ್ರರನ್ನು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಸೋಮವಾರ ಬಂಧಿಸಿದೆ.
 
ಶಂಕಿತ ಉಗ್ರರೆಲ್ಲರೂ ಶ್ರೀಲಂಕಾ ಪ್ರಜೆಗಳು. ಇವರು ‘ಮುಸ್ಲಿಮರ ವಿರುದ್ಧದ ದೌರ್ಜನ್ಯ’ಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಗುರಿಯಾಗಿಸಿ, ಪಾಕಿಸ್ತಾನದ ಅಬು ಎಂಬುವನ ನೆರವಿನಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಯಸಿದ್ದರು ಎಂದು ಎಟಿಎಸ್‌ ಹೇಳಿದೆ. 

ಬಂಧಿತರನ್ನು ಮೊಹಮ್ಮದ್ ನುಸ್ರತ್ ಗನಿ (33), ಮೊಹಮ್ಮದ್ ನಫ್ರಾನ್ (27), ಮೊಹಮ್ಮದ್ ಫಾರಿಸ್ (35) ಮತ್ತು ಮೊಹಮ್ಮದ್ ರಸ್ದಿನ್ (43) ಎಂದು ಗುರುತಿಸಲಾಗಿದೆ. ಶಂಕಿತರು ನಿಷೇಧಿತ ಐ.ಎಸ್‌ ಉಗ್ರ ಸಂಘಟನೆಯ ಸಕ್ರಿಯ ಸದಸ್ಯರು ಎಂದು ಗುಜರಾತ್‌ ಡಿಜಿಪಿ ವಿಕಾಸ್‌ ಸಹಾಯ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ನಾಲ್ವರು ಭಯೋತ್ಪಾದಕರು ಮೇ 18 ಅಥವಾ 19 ರಂದು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ರೈಲು ಅಥವಾ ವಿಮಾನದ ಮೂಲಕ ಅಹಮದಾಬಾದ್ ತಲುಪುವ ಸಾಧ್ಯತೆಯಿದೆ’ ಎಂಬ ಗುಪ್ತಚರ ಮಾಹಿತಿ ಎಟಿಎಸ್‌ನ ಡಿಎಸ್‌ಪಿ ಹರ್ಷ ಉಪಾಧ್ಯಾಯ ಅವರಿಗೆ ಲಭಿಸಿತ್ತು. ಹೀಗಾಗಿ, ಎಟಿಎಸ್ ಅಧಿಕಾರಿಗಳ ತಂಡಗಳು ನಿಗಾ ಇರಿಸಿದ್ದವು. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರಿಗೆ ಪಾಕಿಸ್ತಾನದ ಅಬು ಎಂಬಾತ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಶ್ರೀಲಂಕಾದ ಕರೆನ್ಸಿಯಲ್ಲಿ 4 ಲಕ್ಷ ರೂಪಾಯಿ ನೀಡಿರುವ ಮಾಹಿತಿ ಲಭಿಸಿತು. ಶಂಕಿತರ ಮೊಬೈಲ್‌ ಫೋನ್‌ಗಳಲ್ಲಿ ಅಹಮದಾಬಾದ್‌ನ ನಾನಾ ಚಿಲೋಡಾ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ಅನೇಕ ಚಿತ್ರಗಳು ಪತ್ತೆಯಾದವು ಎಂದು ಸಹಾಯ್‌ ಮಾಹಿತಿ ನೀಡಿದರು.

ಶಂಕಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು 120 ಬಿ (ಅಪರಾಧ ಪಿತೂರಿ), 121 (ಎ) (ಭಾರತ ಸರ್ಕಾರದ ವಿರುದ್ಧ ಸಮರ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT