ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿವೃಷ್ಟಿ: ರೈತರಿಗೆ ₹350 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ ಗುಜರಾತ್‌ ಸರ್ಕಾರ

Published 23 ಆಗಸ್ಟ್ 2024, 13:49 IST
Last Updated 23 ಆಗಸ್ಟ್ 2024, 13:49 IST
ಅಕ್ಷರ ಗಾತ್ರ

ಗಾಂಧಿನಗರ: ಈ ವರ್ಷದ ಜುಲೈನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರಿಗೆ ಗುಜರಾತ್‌ ಸರ್ಕಾರ ₹350 ಕೋಟಿ ಪರಿಹಾರ ಪ್ಯಾಕೇಜ್‌ ಘೋಷಿಸಿದೆ.

ರಾಜ್ಯದ ಜುನಾಗಢ, ಪೋರಬಂದರ್, ದೇವಭೂಮಿ ದ್ವಾರಕಾ, ರಾಜ್‌ಕೋಟ್, ಆನಂದ್, ಭರೂಚ್, ಸೂರತ್, ನವಸಾರಿ ಮತ್ತು ತಾಪಿ ಜಿಲ್ಲೆಗಳ 45 ತಾಲ್ಲೂಕುಗಳಲ್ಲಿ ನಷ್ಟ ಮೌಲ್ಯಮಾಪನ ಸಮೀಕ್ಷೆ ನಡೆಸಿದ ಬಳಿಕ ರಾಜ್ಯ ಕೃಷಿ ಸಚಿವ ರಾಘವ್‌ಜಿ ಪಟೇಲ್‌ ಅವರು ವಿಧಾನಸಭೆಯಲ್ಲಿ ಪರಿಹಾರ ಪ್ಯಾಕೇಜ್‌ ಘೋಷಿಸಿದ್ದಾರೆ.

ಜುಲೈ 18 ರಿಂದ 24ರ ನಡುವೆ ಈ ಒಂಬತ್ತು ಜಿಲ್ಲೆಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಇದರಿಂದಾಗಿ ಸುಮಾರು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆಗಳು, ತೋಟಗಾರಿಕೆ ಉತ್ಪನ್ನಗಳು ಮತ್ತು ಹಣ್ಣಿನ ಮರಗಳಿಗೆ ಹಾನಿಯಾಗಿದೆ ಎಂದು ಪಟೇಲ್‌ ಹೇಳಿದ್ದಾರೆ.

ಪರಿಹಾರ ಪ್ಯಾಕೇಜ್ ಅಡಿಯಲ್ಲಿ, ಒಟ್ಟು ನೀರಾವರಿ ರಹಿತ ಖಾರಿಫ್ ಬೆಳೆಯಲ್ಲಿ ಶೇ 33 ಅಥವಾ ಅದಕ್ಕಿಂತ ಹೆಚ್ಚಿನ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎರಡು ಹೆಕ್ಟೇರ್‌ಗಳ ಮಿತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ₹11,000 ಪರಿಹಾರ ನೀಡಲಾಗುತ್ತದೆ. ನೀರಾವರಿ ಪ್ರದೇಶದಲ್ಲಿ ಹಾನಿಯಾದ ಬೆಳೆಗಳಿಗೆ ಎರಡು ಹೆಕ್ಟೇರ್ ಮಿತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ₹22 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ಎರಡು ಹೆಕ್ಟೇರ್‌ ಮಿತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ₹22,000 ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಹೊಂದಿರುವ ದೀರ್ಘಕಾಲಿಕ ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ಪ್ರತಿ ಹೆಕ್ಟೇರ್‌ಗೆ ₹22,500 ಪರಿಹಾರ ನೀಡಲಾಗುತ್ತದೆ ಎಂದು ಪಟೇಲ್‌ ತಿಳಿಸಿದ್ದಾರೆ.

ಬಹುವಾರ್ಷಿಕ ವರ್ಗದ ಹಣ್ಣಿನ ಮರಗಳು ಸಂಪೂರ್ಣ ಹಾನಿಯಾದರೆ ಅಥವಾ ಬೇರುಸಹಿತ ಕಿತ್ತು ಹೋದರೆ, ಶೇ 33ಕ್ಕಿಂತ ಹೆಚ್ಚು ಮರಗಳು ಹಾನಿಗೊಳಗಾದರೆ ರೈತರು ಪ್ರತಿ ಹೆಕ್ಟೇರ್‌ಗೆ ₹1.02 ಲಕ್ಷ ಹೆಚ್ಚುವರಿ ಪರಿಹಾರವನ್ನು ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT