ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿ: ರಾಜ್ಯಪಾಲರ ಭೇಟಿ

ಮುಂದುವರಿದ ಪ್ರತಿಭಟನೆ; ಬಿಜೆಪಿಯ 6 ಶಾಸಕರ ಅಮಾನತು
Published 12 ಫೆಬ್ರುವರಿ 2024, 16:07 IST
Last Updated 12 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ಕೋಲ್ಕತ್ತ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಶೇಖ್ ಶಹಜಹಾನ್ ಮತ್ತು ಅವರ ತಂಡವು ಮಹಿಳೆಯರಿಗೆ ಕಿರುಕುಳ ನೀಡಿದೆ ಎನ್ನಲಾದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರದೇಶಕ್ಕೆ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಸೋಮವಾರ ತರಾತುರಿಯ ಭೇಟಿ ನೀಡಿ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದರು.

ಇನ್ನೊಂದೆಡೆ, ಇದೇ ವಿಚಾರವಾಗಿ ನಡೆದ ಗದ್ದಲದ ಸಂಬಂಧ ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಬಿಜೆಪಿಯ ಆರು ಶಾಸಕರನ್ನು ಅಮಾನತು ಮಾಡಲಾಗಿದೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿಯುವ ಮೂಲಕ ಸಂದೇಶ್‌ಖಾಲಿಯಲ್ಲಿ ಸತತ ಐದನೆಯ ದಿನವೂ ಪ್ರತಿಭಟನೆ ಮುಂದುವರೆಯಿತು. ಭೂ ಕಬಳಿಕೆ ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಹಜಹಾನ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಕರಣದ ಸಂಬಂಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಬೇಕೆಂದು ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಘೋಷಣೆ ಕೂಗಿದರು. ಈ ವೇಳೆ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾಧ್ಯಕ್ಷರ ಮನವಿಯ ನಂತರವೂ ಅವರು ಪ್ರತಿಭಟನೆ ಮುಂದುವರೆಸಿದರು. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಆರು ಮಂದಿ ಬಿಜೆ‍ಪಿ ಶಾಸಕರನ್ನು ಪ್ರಸ್ತುತ ಅಧಿವೇಶನದ ಉಳಿದ ಅವಧಿ ಅಥವಾ 30 ದಿನದ ಅವಧಿ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಮಾನತು ಮಾಡಲಾಯಿತು.  

ಪಡಿತರ ಹಗರಣದ ಆರೋಪಿ ಶಹಜಹಾನ್ ಮನೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ತಿಂಗಳು ಶೋಧ ನಡೆಸಿದ್ದರು.  ಆಗ ಅಧಿಕಾರಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಘಟನೆಯ ನಂತರ ಶಹಜಹಾನ್ ನಾಪತ್ತೆಯಾಗಿದ್ದಾರೆ.

‘ಸಂದೇಶ್‌ಖಾಲಿಯಲ್ಲಿ ನಡೆದಿರುವುದು ಘೋರ, ಆಘಾತಕಾರಿ ಘಟನೆ. ರವೀಂದ್ರನಾಥ ಠಾಗೋರ್‌ ಅವರ ನಾಡಿನಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಭೇಟಿಯ ಬಳಿಕ ರಾಜ್ಯಪಾಲರು ಸುದ್ದಿಗಾರರಿಗೆ ತಿಳಿಸಿದರು.

ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರ ಭೇಟಿಗೆ ಹೆಚ್ಚಿನ ಮಹತ್ವ ಕಲ್ಪಿಸಿಲ್ಲ. ‘ಯಾರ ವಿರುದ್ಧ ಆರೋಪ ಕೇಳಿಬಂದಿದೆಯೋ, ಅವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT