ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ: ಬೃಂದಾ ಕಾರಟ್‌ ಅರ್ಜಿಯ ವಿಚಾರಣೆ ಅ. 3ಕ್ಕೆ ಮುಂದೂಡಿಕೆ

Published 4 ಸೆಪ್ಟೆಂಬರ್ 2023, 13:38 IST
Last Updated 4 ಸೆಪ್ಟೆಂಬರ್ 2023, 13:38 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಸಂಸದರಾದ ಅನುರಾಗ್‌ ಠಾಕೂರ್‌ ಹಾಗೂ ಪ್ರವೇಶ್‌ ವರ್ಮಾ ವಿರುದ್ಧದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಎಂ ನಾಯಕಿ ಬೃಂದಾ ಕಾರಟ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ಅಕ್ಟೋಬರ್‌ 3ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್‌. ಓಕಾ ಮತ್ತು ಪಂಕಜ್‌ ಮಿಥಾಲ್‌ ಅವರಿದ್ದ ವಿಭಾಗೀಯ ಪೀಠವು ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿತು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರು, ವಿಚಾರಣೆ ಮುಂದೂಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ವಿಚಾರಣೆಯನ್ನು ಮತ್ತೆ ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಏನಿದು ಪ್ರಕರಣ?: 

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ 2020ರ ಜನವರಿ 27ರಂದು ದೆಹಲಿಯ ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಬೃಂದಾ ಕಾರಟ್‌ ಕೂಡ ಇದರಲ್ಲಿ ಪಾಲ್ಗೊಂಡಿದ್ದರು.

ಅದೇ ದಿನದಂದು ರಿಥಾಲಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಠಾಕೂರ್‌, ‘ದೇಶದ್ರೋಹಿಗಳಿಗೆ ಗುಂಡಿಕ್ಕಿ’ ಎಂದು ಹೇಳಿದ್ದರು. ಮಾರನೇ ದಿನ ವರ್ಮಾ ಕೂಡ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನನಿರತರ ವಿರುದ್ಧ ದ್ವೇಷ ಪ್ರೇರಿತ ಮಾತುಗಳನ್ನಾಡಿದ್ದರು.

ಬಿಜೆಪಿಯ ಈ ಇಬ್ಬರು ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, 2021ರ ಆಗಸ್ಟ್‌ 26ರಂದು ವಿಚಾರಣಾ ನ್ಯಾಯಾಲಯವು, ದೂರು ದಾಖಲಿಸುವುದಕ್ಕೂ ಮೊದಲು ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆದಿಲ್ಲ ಎಂದು ಹೇಳಿ ದೂರನ್ನು ವಜಾಗೊಳಿಸಿತ್ತು.

ಕಳೆದ ವರ್ಷದ ಜೂನ್‌ 13ರಂದು ದೆಹಲಿ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿ ಬೃಂದಾ ಮತ್ತು ಕೆ.ಎಂ. ತಿವಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಈ ಇಬ್ಬರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT