ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಥರಸ್‌ ಕಾಲ್ತುಳಿತ ಪ್ರಕರಣ: ರಾಜಕೀಯ ಪಕ್ಷಗಳೊಂದಿಗೆ ಪ್ರಮುಖ ಆರೋಪಿ ಸಂಪರ್ಕ

Published 6 ಜುಲೈ 2024, 14:52 IST
Last Updated 6 ಜುಲೈ 2024, 14:52 IST
ಅಕ್ಷರ ಗಾತ್ರ

ನೋಯ್ಡಾ (ಪಿಟಿಐ): ಹಾಥರಸ್‌ ಜಿಲ್ಲೆಯಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣದಲ್ಲಿ ಶುಕ್ರವಾರ ತಡರಾತ್ರಿ ಬಂಧಿಸಲಾಗಿರುವ ಪ್ರಮುಖ ಆರೋಪಿ ದೇವ್‌ಪ್ರಕಾಶ್‌ ಮಧುಕರ್‌ ಅವರನ್ನು ಕೆಲ ರಾಜಕೀಯ ಪಕ್ಷಗಳು ಇತ್ತೀಚೆಗೆ ಸಂಪರ್ಕಿಸಿದ್ದವು ಎಂದು ಹಾಥರಸ್‌ ಪೊಲೀಸ್ ವರಿಷ್ಠಾಧಿಕಾರಿ ನಿಪುನ್‌ ಅಗರ್ವಾಲ್‌ ತಿಳಿಸಿದರು.

ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ಜುಲೈ 2ರಂದು ನಡೆದಿದ್ದ ಅವಘಡದಲ್ಲಿ 121 ಜನರು ಮೃತಪಟ್ಟಿದ್ದರು.

ಮಧುಕರ್‌ ಅವರು ಸೂರಜ್‌ಪಾಲ್‌ ಅಲಿಯಾಸ್‌ ನಾರಾಯಣ ಸಾಕರ್‌ ಹರಿ ಅಲಿಯಾಸ್‌ ಬೋಲೆ ಬಾಬಾ ಅವರ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹಗಾರರಾಗಿದ್ದರು ಮತ್ತು ಅದಕ್ಕಾಗಿ ದೇಣಿಗೆ ಸಂಗ್ರಹಿಸಿದ್ದರು. ಅವರ ಹಣಕಾಸಿನ ವಹಿವಾಟುಗಳು ಮತ್ತು ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಮಧಕರ್‌ ಅವರನ್ನು ಹಾಥರಸ್‌ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಬಂಧಿಸಿತ್ತು. ಅವರನ್ನು ಶನಿವಾರ ಮಧ್ಯಾಹ್ನ 2.15 ಗಂಟೆಗೆ ಹಾಥರಸ್‌ನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು.

‌14 ದಿನ ನ್ಯಾಯಾಂಗ ಬಂಧನ:

ಪ್ರಮುಖ ಆರೋಪಿ ದೇವಪ್ರಕಾಶ್‌ ಮಧುಕರ್‌ ಮತ್ತು ಬಂಧಿತ ಸಂಜು ಯಾದವ್‌ ಅವರನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಶನಿವಾರ ಆದೇಶಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಮತ್ತೊಬ್ಬ ಬಂಧಿತ ಆರೋಪಿ ರಾಮಪ್ರಕಾಶ್‌ ಶಾಕ್ಯಾ ಅವರನ್ನು ನ್ಯಾಯಾಲಯದ ಮುಂದೆ ಭಾನುವಾರ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಧುಕರ್‌, ಆ ದಿನ ಸತ್ಸಂಗದ ಕಾರ್ಯಕ್ರಮದ ‘ಮುಖ್ಯ ಸೇವಾದಾರ’ ಆಗಿದ್ದರು. ಸಿಕಂದ್ರಾರಾವ್‌ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿಯೂ ಇವರೊಬ್ಬರ ಹೆಸರನ್ನು ಉಲ್ಲೇಖಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಪ್ರತ್ಯಕ್ಷದರ್ಶಿಗಳು, ಅಧಿಕಾರಿಗಳು ಮತ್ತು ಸಂತ್ರಸ್ತರ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. 

‘ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಬಂದಿದ್ದ ಮಧುಕರ್‌ ಅವರು, ಅಲ್ಲಿಯೇ  ಪೊಲೀಸರಿಗೆ ಶರಣಾಗಿದ್ದಾರೆ’ ಎಂದು ಅವರ ವಕೀಲ ಎ.ಪಿ.ಸಿಂಗ್‌ ಹೇಳಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿರಲಿಲ್ಲ:

‘ಮಧುಕರ್‌ ಅವರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಅಷ್ಟಕ್ಕೂ ಅವರ ಅಪರಾಧವೇನು? ಅವರು ಎಂಜಿನಿಯರ್‌. ಅವರು ಹೃದ್ರೋಗಿಯಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಪೊಲೀಸರಿಗೆ ಶರಣಾಗಿದ್ದಾರೆ’ ಎಂದು ವಕೀಲ ಸಿಂಗ್‌ ತಿಳಿಸಿದ್ದಾರೆ.

‘ಪೊಲೀಸರು ಅವರನ್ನು ಪ್ರಶ್ನಿಸಿ, ಹೇಳಿಕೆಯನ್ನು ದಾಖಲಿಸಿಕೊಳ್ಳಬಹುದು. ಅವರು ತನಿಖೆಗೆ ಸಹಕರಿಸುತ್ತಾರೆ. ಕಾರ್ಯಕ್ರಮದಲ್ಲಿನ ಸಮಾಜ ವಿರೋಧಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಆದರೆ ಇವುಗಳ ಜತೆಗೆ ಅವರ ಆರೋಗ್ಯ ಸ್ಥಿತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು’ ಎಂದಿದ್ದಾರೆ. 

ಸೂರಜ್‌ಪಾಲ್ ಅವರು ಸರ್ಕಾರ ಮತ್ತು ಪೊಲೀಸರೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ. ಅವರು ಇಡೀ ಪ್ರಕರಣದ ಸಮಗ್ರ ತನಿಖೆಗೆ ಕೋರಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ.

ಘಟನೆಯಿಂದ ತೀವ್ರ ದುಃಖವಾಗಿದೆ: ಭೋಲೆ ಬಾಬಾ

ಲಖನೌ: ಹಾಥರಸ್‌ ಜಿಲ್ಲೆಯಲ್ಲಿನ ಕಾಲ್ತುಳಿತ ಘಟನೆಯಿಂದ ತೀವ್ರ ದುಃಖವಾಗಿದ್ದು ಸಂತ್ರಸ್ತರ ಕುಟುಂಬಗಳ ಜತೆ ನಿಲ್ಲುವಂತೆ ಸ್ವಯಂ ಘೋಷಿತ ದೇವಮಾನವ ಸೂರಜ್‌ಪಾಲ್‌ ಅಲಿಯಾಸ್‌ ನಾರಾಯಣ ಸಾಕರ್‌ ಹರಿ ಅಲಿಯಾಸ್‌ ಭೋಲೆ ಬಾಬಾ ತನ್ನ ಅನುಯಾಯಿಗಳಿಗೆ ತಿಳಿಸಿದ್ದಾರೆ. ಈ ಸಂಬಂಧ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು ‘ಈ ಸಾವುಗಳಿಂದ ನನಗೆ ದುಃಖವಾಗಿದೆ. ಅದರಿಂದ ಹೊರಬರಲು ಶಕ್ತಿ ನೀಡುವಂತೆ ದೇವರನ್ನು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.  ಸಂತ್ರಸ್ತರ ಕುಟುಂಬದವರು ಸರ್ಕಾರ ಮತ್ತು ಆಡಳಿತದ ಮೇಲೆ ನಂಬಿಕೆ ಇಡಬೇಕು ಎಂದಿರುವ ಅವರು ಘಟನೆಗೆ ಕಾರಣರಾದ ಯಾರನ್ನು ಬಿಡಲಾಗುವುದಿಲ್ಲ ಎಂದಿದ್ದಾರೆ. ಘಟನೆಯ ನಂತರ ಕಣ್ಮರೆಯಾಗಿರುವ ಬಾಬಾ ಅವರು ‘ಸಂತ್ರಸ್ತ ಕುಟುಂಬಗಳಿಗೆ ಮತ್ತು ಗಾಯಾಗಳುಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವಂತೆ’ ತಮ್ಮ ಅನುಯಾಯಿಗಳನ್ನು ಕೇಳಿಕೊಂಡಿದ್ದಾರೆ. ಭೋಲೆ ಬಾಬಾ ದೇಶ ತೊರೆದಿರಬಹುದು ಎಂಬ ವದಂತಿಗಳಿವೆ. ಆದರೆ ಇದನ್ನು ಅವರ ವಕೀಲ ಎ.ಪಿ.ಸಿಂಗ್‌ ಅಲ್ಲಗಳೆದಿದ್ದಾರೆ. ‘ಅವರು ತಲೆಮರೆಸಿಕೊಂಡಿಲ್ಲ ಉತ್ತರ ಪ್ರದೇಶದಲ್ಲಿಯೇ ಇದ್ದು ಪೊಲೀಸ್‌ ತನಿಖೆಗೆ ಸಹಕರಿಸುತ್ತಿದ್ದಾರೆ. ಪೊಲೀಸರು ಯಾವಾಗ ಕರೆದರೂ ಹಾಜರಾಗುತ್ತಾರೆ’ ಎಂದು ಸಿಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT