ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಥರಸ್‌ ಕಾಲ್ತುಳಿತ: ಸ್ವಯಂಘೋಷಿತ ದೇವಮಾನವ ಭೋಲೆಬಾಬಾ ಪರ ವಕೀಲ ಹೇಳಿದ್ದೇನು?

Published 7 ಜುಲೈ 2024, 13:59 IST
Last Updated 7 ಜುಲೈ 2024, 13:59 IST
ಅಕ್ಷರ ಗಾತ್ರ

ನವದೆಹಲಿ: ಹಾಥರಸ್‌ ಜಿಲ್ಲೆಯಲ್ಲಿ ಆಯೋಜಿಸಿದ್ದ ‘ಸತ್ಸಂಗ’ ಕಾರ್ಯಕ್ರಮದಲ್ಲಿ ಭಕ್ತರ ಗುಂಪಿನಲ್ಲಿದ್ದ ಕೆಲವರು ವಿಷಯುಕ್ತ ಡಬ್ಬಿಗಳನ್ನು ತೆರೆದಿದ್ದರಿಂದ ಕಾಲ್ತುಳಿತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಸ್ವಯಂಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ ನಾರಾಯಣ ಸಾಕರ್ ಹರಿ ಅಲಿಯಾಸ್ ಭೋಲೆಬಾಬಾ ಪರ ವಕೀಲ ಎ.ಪಿ. ಸಿಂಗ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ‘ಭೋಲೆ ಬಾಬಾ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ಕೆಲವರು ಪಿತೂರಿ ನಡೆಸಿದ್ದಾರೆ. ಹಾಗಾಗಿ ‘ಸತ್ಸಂಗ’ದಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರಿದ್ದ ವೇಳೆ ಕಾಲ್ತುಳಿತ ಸಂಭವಿಸುವಂತೆ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಭಕ್ತರ ಗುಂಪಿನಲ್ಲಿದ್ದ 15 ಮಂದಿ ವಿಷಯುಕ್ತ ಪದಾರ್ಥವುಳ್ಳ ಡಬ್ಬಿಗಳನ್ನು ಹೊತ್ತೊಯ್ಯುತ್ತಿದ್ದರು. ಬಳಿಕ ಅವರು ಡಬ್ಬಿಗಳನ್ನು ತೆರೆದಿದ್ದರಿಂದ ಉಸಿರುಗಟ್ಟುವಿಕೆಯಿಂದ ಕಾಲ್ತುಳಿತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದೇ ವಿಚಾರವನ್ನು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಘಟನಾ ಸ್ಥಳದಿಂದ ಪುರುಷರು ತಪ್ಪಿಸಿಕೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಕಾಲ್ತುಳಿತದ ಹಿಂದೆ ಪಿತೂರಿ ಇದೆ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ನಾವು ಅದನ್ನು ಕೋರ್ಟ್‌ಗೆ ಸಲ್ಲಿಸುತ್ತೇವೆ’ ಎಂದಿದ್ದಾರೆ.

ಜುಲೈ 2ರಂದು ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ನಡೆದ ‘ಸತ್ಸಂಗ’ದ ವೇಳೆ ಕಾಲ್ತುಳಿತ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮಹಿಳೆಯರು ಸೇರಿದಂತೆ 121 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಕಾಲ್ತುಳಿತ ಅವಘಡದ ಮುಖ್ಯ ಆರೋಪಿ ದೇವ್‌ಪ್ರಕಾಶ್‌ ಮಧುಕರ್ ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT