ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಥರಸ್‌ ಕಾಲ್ತುಳಿತ | ಸರ್ಕಾರದಿಂದಲೂ ಲೋಪಗಳಾಗಿವೆ: ರಾಹುಲ್‌ ಗಾಂಧಿ

ಸಂತ್ರಸ್ತ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ವಿತರಣೆಗೆ ಆಗ್ರಹ
Published 5 ಜುಲೈ 2024, 13:48 IST
Last Updated 5 ಜುಲೈ 2024, 13:48 IST
ಅಕ್ಷರ ಗಾತ್ರ

ಹಾಥರಸ್‌/ಅಲಿಗಢ(ಉತ್ತರ ಪ್ರದೇಶ): ‘ಹಾಥರಸ್‌ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದಲೂ ಲೋಪಗಳಾಗಿವೆ. ಆದರೆ, ಈ ವಿಷಯವನ್ನು ನಾನು ರಾಜಕೀಯಗೊಳಿಸಲು ಬಯಸುವುದಿಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಈ ದುರ್ಘಟನೆಯಲ್ಲಿ ಸಂತ್ರಸ್ತರಿಗೆ ಆದಷ್ಟು ಶೀಘ್ರವೇ ಗರಿಷ್ಠ ಮೊತ್ತದ ಪರಿಹಾರ ವಿತರಿಸಬೇಕು ಎಂದು ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಆಗ್ರಹಿಸಿದ್ದಾರೆ.

ಕಾಲ್ತುಳಿತದಲ್ಲಿ ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳ ಸದಸ್ಯರು ಹಾಗೂ ಗಾಯಗೊಂಡರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಘಟನೆ ಕುರಿತಂತೆ ನಾನು ರಾಜಕೀಯ ದೃಷ್ಟಿಕೋನದಿಂದ ಮಾತನಾಡಲು ಬಯಸುವುದಿಲ್ಲ. ಈ ವಿಷಯದಲ್ಲಿ ಆಡಳಿತಾತ್ಮಕ ಲೋಪಗಳು ಇವೆ. ಹಲವು ಪ್ರಮಾದಗಳೂ ಇದ್ದು, ಅವುಗಳನ್ನು ಗುರುತಿಸಬೇಕಿದೆ’ ಎಂದು ಹೇಳಿದರು.

‘ಸಂತ್ರಸ್ತರಿಗೆ ಇದು ಕಠಿಣ ಸಮಯ. ಅವರೆಲ್ಲರೂ ಬಡವರು. ಹಾಗಾಗಿ, ಅವರಿಗೆ ಆದಷ್ಟು ಬೇಗನೆ ಪರಿಹಾರ ನೀಡಬೇಕು. ಆರು ತಿಂಗಳು ಇಲ್ಲವೇ ವರ್ಷದ ನಂತರ ಪರಿಹಾರ ನೀಡಿದರೆ ಯಾರಿಗೂ ಪ್ರಯೋಜನವಾಗುವುದಿಲ್ಲ’ ಎಂದರು.

ಅಲಿಗಢಕ್ಕೆ ಭೇಟಿ: ಹಾಥರಸ್‌ಗೆ ತೆರಳುವುದಕ್ಕೂ ಮುನ್ನ ರಾಹುಲ್‌ ಗಾಂಧಿ ಅವರು ಅಲಿಗಢಕ್ಕೆ ಹೋಗಿ, ಜಿಲ್ಲೆಯಲ್ಲಿರುವ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಅವರೊಂದಿಗೆ ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಅಜಯ್‌ ರಾಯ್, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಅವಿನಾಶ್ ಪಾಂಡೆ, ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಇದ್ದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರನ್ನು ಹಾಥರಸ್‌ದಲ್ಲಿ ಭೇಟಿ ಮಾಡಿದರು  –ಪಿಟಿಐ ಚಿತ್ರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರನ್ನು ಹಾಥರಸ್‌ದಲ್ಲಿ ಭೇಟಿ ಮಾಡಿದರು  –ಪಿಟಿಐ ಚಿತ್ರ 

ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರನ್ನು ಅಲಿಗಢ ಸಮೀಪದ ಪಿಲ್ಖನಾ ಗ್ರಾಮದಲ್ಲಿ ಭೇಟಿ ಮಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಾಂತ್ವನ ಹೇಳಿದರು –ಪಿಟಿಐ ಚಿತ್ರ

ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರನ್ನು ಅಲಿಗಢ ಸಮೀಪದ ಪಿಲ್ಖನಾ ಗ್ರಾಮದಲ್ಲಿ ಭೇಟಿ ಮಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಾಂತ್ವನ ಹೇಳಿದರು –ಪಿಟಿಐ ಚಿತ್ರ 

‘ಹೆಚ್ಚಿನ ಪರಿಹಾರಕ್ಕೆ ಯತ್ನ: ರಾಹುಲ್‌ ಭರವಸೆ’

‘ನಮಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವುದಕ್ಕೆ ಪ್ರಯತ್ನಿಸುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ’ ಎಂದು  ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಶುಕ್ರವಾರ ಹೇಳಿದ್ದಾರೆ. ಕಾಲ್ತುಳಿತ ಕುರಿತು ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿಯೂ ರಾಹುಲ್‌ ಗಾಂಧಿ ತಿಳಿಸಿದ್ದಾಗಿ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರು ಅಲಿಗಢ ಬಳಿಯ ಪಿಲ್ಖನಾ ಗ್ರಾಮ ಹಾಗೂ ಹಾಥರಸ್‌ನ ವಿಭವ ನಗರಕ್ಕೆ ಭೇಟಿ ನೀಡಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು. ‘ರಾಹುಲ್‌ ಗಾಂಧಿ ನಮ್ಮ ಜೊತೆ ಮಾತನಾಡಿ ಸಾಂತ್ವನ ಹೇಳಿದರು. ಪರಿಹಾರ ಮೊತ್ತ ಹೆಚ್ಚಿಸುವುದಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು’ ಎಂದು ಕಾಲ್ತುಳಿತದಲ್ಲಿ ತನ್ನ ಸೋದರತ್ತೆಯನ್ನು ಕಳೆದುಕೊಂಡಿರುವ ಹಾಥರಸ್‌ ನಿವಾಸಿ ಹರಿಮೋಹನ್‌ ಹೇಳಿದರು. ‘ಕಾಂಗ್ರೆಸ್‌ ಪಕ್ಷದ ವತಿಯಿಂದಲೂ ನೆರವು ನೀಡುವುದಾಗಿ ರಾಹುಲ್‌ ಗಾಂಧಿ ತಿಳಿಸಿದರು. ಕಾಲ್ತುಳಿತ ಹೇಗೆ ಸಂಭವಿಸಿತು ಎಂಬ ಬಗ್ಗೆಯೂ ಅವರು ಮಾಹಿತಿ ಪಡೆದರು’ ಎಂದು ಮಹಿಳೆಯೊಬ್ಬರು ತಿಳಿಸಿದರು. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT