ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಥರಸ್‌ ಕಾಲ್ತುಳಿತ | ಅವ್ಯವಸ್ಥೆ ಸೃಷ್ಟಿಸಿದವರನ್ನು ಬಿಡುವುದಿಲ್ಲ: ಭೋಲೆ ಬಾಬಾ

Published 6 ಜುಲೈ 2024, 3:17 IST
Last Updated 6 ಜುಲೈ 2024, 3:17 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಕಾಲ್ತುಳಿತ ಅವಘಡದಲ್ಲಿ 121 ಮಂದಿ ಮೃತಪಟ್ಟಿದ್ದರು. ಇದೀಗ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಸೂರಜ್‌ ಪಾಲ್ ಅಲಿಯಾಸ್ ನಾರಾಯಣ ಸಾಕರ್ ಹರಿ ಅಲಿಯಾಸ್ ಭೋಲೆ ಬಾಬಾ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಜುಲೈ 2ರಂದು ನಡೆದ ಕಾಲ್ತುಳಿತ ದುರಂತದಿಂದಾಗಿ ನಾನು ತುಂಬಾ ದುಃಖಿತನಾಗಿದ್ದೇನೆ. ದೇವರು ನಮಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ರಾಜ್ಯ ಸರ್ಕಾರವು ಅವ್ಯವಸ್ಥೆಯನ್ನು ಸೃಷ್ಟಿಸಿದ ಯಾರನ್ನೂ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಸಂತ್ರಸ್ತ ಕುಟುಂಬಗಳ ಜತೆ ನಿಂತು ಜೀವನದುದ್ದಕ್ಕೂ ಸಹಾಯ ಮಾಡುವಂತೆ ಸತ್ಸಂಗ ಆಯೋಜನೆ ಸಮಿತಿ ಸದಸ್ಯರಲ್ಲಿ ವಿನಂತಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಮಧ್ಯೆ, ಉತ್ತರಪ್ರದೇಶ ರಾಜ್ಯ ಪೊಲೀಸರು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು, ‘ಭೋಲೆ ಬಾಬಾ’ನ ಪತ್ತೆಗಾಗಿಯೂ ಜಾಲ ಬೀಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ತನಿಖಾ ತಂಡಗಳು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿವೆ’ ಎಂದು ತಿಳಿಸಿದ್ದಾರೆ. ‘ಸತ್ಸಂಗ’ ಕಾರ್ಯಕ್ರಮದ ‘ಮುಖ್ಯ ಸೇವಾದಾರ’ ಮಧುಕರ್‌ ಜೊತೆಗೆ ‘ಹಲವು ಅಪರಿಚಿತ ಸಂಘಟಕರ’ ವಿರುದ್ಧವೂ ಸಿಕಂದ್ರಾ ರಾವ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಖ್ಯ ಆರೋಪಿ ಪೊಲೀಸರಿಗೆ ಶರಣು

ಹಾಥರಸ್‌ನಲ್ಲಿ ನಡೆದಿದ್ದ ಕಾಲ್ತುಳಿತ ಅವಘಡದ ಮುಖ್ಯ ಆರೋಪಿ ದೇವ್‌ಪ್ರಕಾಶ್‌ ಮಧುಕರ್ ಶುಕ್ರವಾರ ರಾತ್ರಿ ದೆಹಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.

ಮಧುಕರ್ ಆ ದಿನ ಸತ್ಸಂಗ ಕಾರ್ಯಕ್ರಮದ ‘ಮುಖ್ಯ ಸೇವಾದಾರ’ನಾಗಿದ್ದನು. ಸಿಕಂದ್ರಾ ರಾವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿಯೂ ಈತನೊಬ್ಬನ ಹೆಸರನ್ನೇ ಉಲ್ಲೇಖಿಸಲಾಗಿತ್ತು.

ಮಧುಕರ್‌ ಪರ ವಕೀಲ ಎ.ಪಿ.ಸಿಂಗ್ ಅವರು, ‘ನನ್ನ ಕಕ್ಷಿದಾರ ದೆಹಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಅವರಿ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ವಿಡಿಯೊ ಸಂದೇಶ ನೀಡಿದ್ದಾರೆ. ‘ಮುಖ್ಯ ಸೇವಾದಾರನ ಸುಳಿವು ನೀಡಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು’ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT