ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನೂನಿನಂತೆ ಪ್ರಕರಣದ ಡೈರಿ ನಿರ್ವಹಿಸದ ಪೊಲೀಸರು: ಹೈಕೋರ್ಟ್ ಗರಂ

Published 14 ಜೂನ್ 2024, 9:46 IST
Last Updated 14 ಜೂನ್ 2024, 9:46 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಪೊಲೀಸ್‌ ಮಹಾ ನಿರ್ದೇಶಕರ (ಡಿಜಿಪಿ) ನಿರ್ದೇಶನದ ಹೊರತಾಗಿಯೂ ಪೊಲೀಸ್‌ ಅಧಿಕಾರಿಗಳು ಕೇಸ್‌ ಡೈರಿಗಳನ್ನು ನಿರ್ವಹಿಸದೇ ಇರುವ ನಿದರ್ಶನಗಳು ಪುನರಾವರ್ತನೆಯಾಗುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ.

ಪ್ರಕರಣವೊಂದನ್ನು ರದ್ದುಪಡಿಸುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ.ಎಸ್‌.ಗಡ್ಕರಿ ಮತ್ತು ನೀಳಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ಗುರುವಾರ ತನ್ನ ಅಭಿಪ್ರಾಯ ವ್ಯಕ್ತಪಡಿಸಿತು.

ಪೊಲೀಸ್ ಅಧಿಕಾರಿಯು ನಿರ್ದಿಷ್ಟ ಪ್ರಕರಣದಲ್ಲಿ ಪ್ರತಿ ದಿನ ಮಾಡಿದ ತನಿಖೆಯ ವಿವರಗಳನ್ನು ಕೇಸ್‌ ಡೈರಿಯಲ್ಲಿ ಬರೆದಿಟ್ಟುಕೊಳ್ಳಬೇಕು ಎಂದು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) 172(1–ಬಿ) ಸೆಕ್ಷನ್‌ ಹೇಳುತ್ತದೆ. ಆದರೆ ಪೊಲೀಸರು ಈ ಸೆಕ್ಷನ್‌ ಅನ್ನು ಧಿಕ್ಕರಿಸಿರುವುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ ಎಂದು ಪೀಠ ಹೇಳಿತು.

ಈ ವರ್ಷದ ಜನವರಿ ತಿಂಗಳಲ್ಲೂ ಪ್ರಕರಣವೊಂದರ ವಿಚಾರಣೆ ವೇಳೆ ಪೀಠವು ಇದೇ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ, ಪ್ರತಿಯೊಂದು ಪ್ರಕರಣದ ಕೇಸ್ ಡೈರಿಗಳನ್ನು ಕಾನೂನಿನ ಪ್ರಕಾರವೇ ನಿರ್ವಹಿಸುವಂತೆ ಮಹಾರಾಷ್ಟ್ರ ಡಿಜಿಪಿ, ಸುತ್ತೋಲೆ ಮೂಲಕ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಕೇಸ್‌ ಡೈರಿಯನ್ನು ತನ್ನ ಮುಂದಿಡುವಂತೆ ಪೀಠವು ಗುರುವಾರ ಸೂಚಿಸಿದೆ. ಆ ಕೇಸ್‌ ಡೈರಿಯನ್ನು ‘ಅತ್ಯಂತ ಕಳಪೆ ರೀತಿಯಲ್ಲಿ’ ನಿರ್ವಹಿಸಲಾಗಿದೆ ಎಂಬುದನ್ನು ಪೀಠ ಗಮನಿಸಿದೆ. ಡಿಜಿಪಿ ಹೊರಡಿಸಿದ ಸುತ್ತೋಲೆ ಕೆಳ ಹಂತದ ಪೊಲೀಸ್‌ ಅಧಿಕಾರಿಗಳಿಗೆ ತಲುಪದಂತೆ ತೋರುತ್ತಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿತು. 

‘ಪೊಲೀಸ್‌ ಸಿಬ್ಬಂದಿಗೆ ಈ ಬಗ್ಗೆ ತಿಳಿದಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳಬಹುದು. ಆದರೆ ಡಿಜಿಪಿ ಹೊರಡಿಸಿದ ಸುತ್ತೋಲೆ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೂ ಮಾಹಿತಿಯಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದೂ ಹೇಳಿತು.

ಖೇರ್ವಾಡಿ ಪೊಲೀಸ್ ಠಾಣೆಯ ತನಿಖಾಧಿಕಾರಿಯ ಪ್ರಕರಣದ ಡೈರಿಯನ್ನು ಡಿಜಿಪಿಗೆ ಕಳುಹಿಸುವಂತೆ ಹಾಗೂ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಪೀಠ ನಿರ್ದೇಶಿಸಿತು. ಇಲಾಖೆ ಹೊರಡಿಸಿರುವ ಸುತ್ತೋಲೆಯ ಜಾರಿ ಕುರಿತು ಪರಿಶೀಲನೆ ನಡೆಸಿ, ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಎಲ್ಲದರ ಕುರಿತು ಜೂನ್ 28ರೊಳಗೆ ವಿವರವಾದ ವರದಿಯೊಂದನ್ನು ಸಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT