ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಹೈಕೋರ್ಟ್‌ ಅನುಮತಿ

Last Updated 1 ಜುಲೈ 2020, 8:31 IST
ಅಕ್ಷರ ಗಾತ್ರ

ಮುಂಬೈ: ಅತ್ಯಾಚಾರ ಸಂತ್ರಸ್ತ ಬಾಲಕಿಗೆ ವೈದ್ಯಕೀಯ ಮಂಡಳಿಯ ಸಲಹೆಯ ಹೊರತಾಗಿಯೂ ಗರ್ಭಪಾತ ಮಾಡಿಸಿಕೊಳ್ಳಲು ಬಾಂಬೆ ಹೈಕೋರ್ಟ್‌ ಅನುಮತಿ ನೀಡಿ ಆದೇಶಿಸಿದೆ. 17 ವರ್ಷದ ಬಾಲಕಿ ಈಗ 25 ವಾರಗಳ ಗರ್ಭಿಣಿ.

ಗರ್ಭಪಾತಕ್ಕೆ ಅನುಮತಿ ಕೋರಿ ಬಾಲಕಿಯು ತನ್ನ ತಂದೆ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಕೆ. ತಾತೆಡ್‌ ಮತ್ತು ಮಿಲಿಂದ್‌ ಜಾಧವ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಕುರಿತ ಪ್ರಕರಣ ಮುಂಬೈನ ವಕೋಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

‘ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ ಕಾಯ್ದೆ’ ಪ್ರಕಾರ ಗರ್ಭ ಧರಿಸಿ 20 ವಾರಗಳ ಅವಧಿ ಮೀರಿದ್ದರೆ ಗರ್ಭಪಾತಕ್ಕೆ ಅವಕಾಶ ಇಲ್ಲ. ಆದರೆ ಹೈಕೋರ್ಟ್‌ ಅನುಮತಿ ಪಡೆದು ಗರ್ಭಪಾತ ಮಾಡಿಸಲು ಅವಕಾಶ ಇದೆ. ತನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಹಿತದೃಷ್ಟಿಯಿಂದ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಬಾಲಕಿ ಅರ್ಜಿಯಲ್ಲಿ ಕೋರಿದ್ದರು.

ವೈದ್ಯಕೀಯ ಪರೀಕ್ಷೆಗಾಗಿ ಮುಂಬೈನ ಕೆಇಎಂ ಆಸ್ಪತ್ರೆಯ ವೈದ್ಯಕೀಯ ಮಂಡಳಿ ಮುಂದೆ ಹಾಜರಾಗುವಂತೆ ಅರ್ಜಿದಾರರಿಗೆ ತಿಳಿಸಿದ್ದ ನ್ಯಾಯಾಲಯವು, ಈ ಕುರಿತ ವರದಿ ಸಲ್ಲಿಸುವಂತೆ ಮಂಡಳಿಗೆ ಸೂಚಿಸಿತ್ತು.

‘ಗರ್ಭಧಾರಣೆಯನ್ನು ಮುಂದುವರೆಸಿದರೆ, ಆರೋಗ್ಯವಂತ ಮಗು ಜನಿಸುತ್ತದೆ. ಅರ್ಜಿದಾರ ಮತ್ತು ಅವರ ಕುಟುಂಬದವರು ಮಗುವನ್ನು ನೋಡಿಕೊಳ್ಳಬೇಕೇ ಅಥವಾ ಅದನ್ನು ದತ್ತು ನೀಡಬಹುದೇ ಎಂಬುದನ್ನು ಆ ಬಳಿಕ ನಿರ್ಧರಿಸಬಹುದು’ ಎಂದು ವೈದ್ಯಕೀಯ ಮಂಡಳಿಯು ಸಲಹೆ ನೀಡಿತ್ತು. ಕೌನ್ಸೆಲಿಂಗ್‌ ಮೂಲಕ ಅರ್ಜಿದಾರರಿಗೆ ಮಾನಸಿಕ ಬೆಂಬಲ ನೀಡಿದರೆ, ಮಗುವಿನ ಪಾಲನೆಯೂ ಸಾಧ್ಯವಾಗುತ್ತದೆ ಎಂದೂ ಮಂಡಳಿ ವರದಿಯಲ್ಲಿ ತಿಳಿಸಿತ್ತು.

ಅದಾಗ್ಯೂ, ಈ ಪ್ರಕರಣದಲ್ಲಿ ಅತ್ಯಾಚಾರದಿಂದಾಗಿ ಗರ್ಭಧಾರಣೆ ಆಗಿರುವುದರಿಂದ, ಸಂತ್ರಸ್ತೆಯ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಿ ಆದೇಶಿಸಿತು.

‘ಒಂದು ವೇಳೆ, ಗರ್ಭಪಾತ ಪ್ರಕ್ರಿಯೆ ಸಂದರ್ಭದಲ್ಲಿ ಮಗು ಜೀವಂತವಾಗಿ ಜನಿಸಿದರೆ, ಆ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅರ್ಜಿದಾರರು ಮತ್ತು ಅವರ ಪೋಷಕರಿಗೆ ಅವಕಾಶ ನೀಡಬೇಕು. ಅವರು ನಿರಾಕರಿಸಿದರೆ, ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಸಂಸ್ಥೆ ಆ ಮಗುವಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ನ್ಯಾಯಾಲಯ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT