ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಯುಷ್ಮಾನ್‌ ಆರೋಗ್ಯ ಮಂದಿರಗಳಲ್ಲಿ ಯೋಗ ದಿನಾಚರಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ಕರೆ

Published 20 ಜೂನ್ 2024, 14:16 IST
Last Updated 20 ಜೂನ್ 2024, 14:16 IST
ಅಕ್ಷರ ಗಾತ್ರ

ನವದೆಹಲಿ: ಪ್ರಸ್ತುತ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲ ಆಯುಷ್ಮಾನ್‌ ಆರೋಗ್ಯ ಮಂದಿರಗಳಲ್ಲಿ(ಎಎಎಮ್‌) ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಮನವಿ ಮಾಡಿದೆ.

ಅಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರನ್ನು ಪ್ರೇರೇಪಿಸುವ ಸಲುವಾಗಿ ಜನಪ್ರಿಯ ವ್ಯಕ್ತಿಗಳನ್ನು ಯೋಗ ರಾಯಭಾರಿಗಳಾಗಿ ಆಹ್ವಾನಿಸುವಂತೆಯೂ ಸಲಹೆ ನೀಡಿದೆ.

‘ಕುಟುಂಬದೊಂದಿಗೆ ಯೋಗ’ ಅಭಿಯಾನವನ್ನು ಬೆಂಬಲಿಸುವ ಮೂಲಕ ಇದೇ 21ರಂದು ಎಲ್ಲ ಎಎಎಮ್‌ ಕೇಂದ್ರಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

ದೇಶದ ಎಲ್ಲ ಎಎಎಮ್‌, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳು ನಡೆಯಲಿವೆ. ಇವು ದೇಶಾದ್ಯಂತ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ಪಾಲಿಸಲಿದ್ದು, ವಿವಿಧ ಆಸನಗಳನ್ನೊಳಗೊಂಡ 45 ನಿಮಿಷದ ಕಾರ್ಯಕ್ರಮ ಇದಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರಗಳು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಆಶಾ ಕಾರ್ಯಕರ್ತೆಯರು, ಸ್ವಯಂಸೇವಾ ಸಂಸ್ಥೆಗಳು, ಶಾಲಾ–ಕಾಲೇಜುಗಳು ಹಾಗೂ ಯುವಕರನ್ನು ಒಳಗೊಂಡಂತೆ ಪರಿಣಾಮಕಾರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಈ ಮೂಲಕ ದೇಶದ ಗ್ರಾಮೀಣ ಮತ್ತು ನಗರ ಸಮುದಾಯದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಮುಂದಾಗಬೇಕು ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌(ವಸ್ತು ವಿಷಯ) ‘ನಮಗಾಗಿ ಮತ್ತು ಸಮಾಜಕ್ಕಾಗಿ ಯೋಗ’ ಎಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT