ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಜಾರ್ಖಂಡ್‌ ಸಿ.ಎಂ ಸೊರೇನ್‌ ವಿಚಾರಣೆ ಇಂದು

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಶೋಧದ ಹಿನ್ನೆಲೆಯಲ್ಲಿ ‘ಗೋಪ್ಯವಾಗಿ ಉಳಿದಿದ್ದ’ ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್‌ ಸೊರೇನ್, ಮಂಗಳವಾರ ರಾಂಚಿಯಲ್ಲಿನ ತಮ್ಮ ಅಧಿಕೃತ ನಿವಾಸವನ್ನು ತಲುಪಿದ್ದು, ಆಡಳಿತರೂಢ ಮೈತ್ರಿಪಕ್ಷಗಳ ಶಾಸಕರ ಸಭೆ ನಡೆಸಿದರು.

ಅಲ್ಲದೆ, ಇ.ಡಿ ಅಧಿಕಾರಿಗಳಿಗೆ ಇ–ಮೇಲ್‌ ಕಳುಹಿಸಿದ್ದು, ಬುಧವಾರ (ಜ. 31) ಮಧ್ಯಾಹ್ನ 1 ಗಂಟೆಗೆ ತಮ್ಮ
ಕಚೇರಿಯಲ್ಲೇ ವಿಚಾರಣೆ ಎದುರಿಸುವುದಾಗಿ ತಿಳಿಸಿದ್ದಾರೆ. ಸೋಮವಾರ ಮಧ್ಯರಾತ್ರಿ ಸೊರೇನ್‌ ಅವರು ಅಧಿಕೃತ ನಿವಾಸಕ್ಕೆ ಬಂದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮೀನು ಅಕ್ರಮ ವಹಿವಾಟು ಹಗರಣ ಕುರಿತ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ. ಅಧಿಕಾರಿಗಳು ಸೋಮವಾರ ಸೊರೇನ್ ಅವರ ದೆಹಲಿ ನಿವಾಸದಲ್ಲಿ ಶೋಧ ನಡೆಸಿದ್ದರು. ಆದರೆ, ಶೋಧ ನಡೆದ ಅವಧಿಯಲ್ಲಿ ಸೊರೇನ್ ಇರಲಿಲ್ಲ. ಎಲ್ಲಿದ್ದಾರೆ ಎಂಬುದು ಗೋಪ್ಯವಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿತ್ತು. 

ಸೊರೇನ್‌ ಅವರು ಮಂಗಳವಾರ ಬೆಳಿಗ್ಗೆ ರಾಂಚಿಯ ನಿವಾಸದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಪಕ್ಷಗಳ ಶಾಸಕರ ಸಭೆಯನ್ನು ನಡೆಸಿದರು. ಮುಖ್ಯಮಂತ್ರಿ ಅವರ ಪತ್ನಿ ಕಲ್ಪನಾ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.

‘ರಾಜಧಾನಿಯನ್ನು ಬಿಟ್ಟು ತೆರಳದಂತೆ ಎಲ್ಲ ಶಾಸಕರಿಗೂ ಸೂಚನೆನೀಡಲಾಗಿದೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ 31ರಂದು ಮುಖ್ಯಮಂತ್ರಿಯವರು ಇ.ಡಿ. ವಿಚಾರಣೆಗೆ ಹಾಜರಾಗುವ ಹಿನ್ನೆಲೆ
ಯಲ್ಲಿ ಒಟ್ಟು ಪರಿಸ್ಥಿತಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಶಾಸಕರೊಬ್ಬರು ತಿಳಿಸಿದರು.

ಜಾರ್ಖಂಡ್‌ ಮುಕ್ತಿ ಮೋರ್ಚಾ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಮೈತ್ರಿಕೂಟದ ಭಾಗವಾಗಿವೆ. ‘ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಯಿತು’ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ, ವಕ್ತಾರ ವಿನೋದ್‌ ಕುಮಾರ್ ಪಾಂಡೆ ನಂತರ ತಿಳಿಸಿದರು. 

ಭೂಮಿಯ ಮಾಲೀಕತ್ವದ ಬದಲಾವಣೆ ವಹಿವಾಟು ಹಿಂದೆ ದೊಡ್ಡ ಮಾಫಿಯಾ ಇದ್ದು, ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪ ಕುರಿತಂತೆ ತನಿಖೆ ನಡೆಯುತ್ತಿದೆ.

ಈ ಹಗರಣದ ಸಂಬಂಧ ಇ.ಡಿ ಅಧಿಕಾರಿಗಳು ಸದ್ಯ 2011ನೇ ತಂಡದ ಐಎಎಸ್‌ ಅಧಿಕಾರಿ ಛಾವಿ ರಂಜನ್‌,  ಜಾರ್ಖಂಡ್‌ನ ಕಂದಾಯ ಇಲಾಖೆಯ ಸಿಬ್ಬಂದಿ ಭಾನುಪ್ರಸಾದ್‌ ಪ್ರಸಾದ್‌ ಸೇರಿ 14 ಜನರನ್ನು ಬಂಧಿಸಿದ್ದಾರೆ. ಬಂಧಿತ ಐಎಎಸ್ ಅಧಿಕಾರಿ ರಾಂಚಿಯಲ್ಲಿ ಜಿಲ್ಲಾಧಿಕಾರಿಯಾಗಿ, ರಾಜ್ಯ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.  

ಅಧಿಕೃತ ಭೂ ದಾಖಲೆಗಳನ್ನು ತಿರುಚಿ ಭೂಮಿಯ ಮಾರಾಟಗಾರರು, ಖರೀದಿದಾರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಸ್ವಾಧೀನ ಪಡೆಯಲಾಗಿದೆ ಎಂಬುದು ತನಿಖಾ ಸಂಸ್ಥೆ ಇ.ಡಿ ಆರೋಪವಾಗಿದೆ.

₹ 36 ಲಕ್ಷ ನಗದು, ಕಾರು, ದಾಖಲೆಗಳ ಜಪ್ತಿ

ನವದೆಹಲಿ (ಪಿಟಿಐ): ಹೇಮಂತ್‌ ಸೊರೇನ್ ಅವರ ದೆಹಲಿಯ ನಿವಾಸದಲ್ಲಿ ಶೋಧ ನಡೆಸಿರುವ ಇ.ಡಿ. ಅಧಿಕಾರಿಗಳು ₹ 36 ಲಕ್ಷ ನಗದು, ಬಿಎಂಡಬ್ಲ್ಯೂ ಎಸ್‌ಯುವಿ ಕಾರು ಮತ್ತು ಅಕ್ರಮಕ್ಕೆ ‘ಪೂರಕವಾಗಿರುವ’ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಶಾಂತಿನಿಕೇತನ ಕಟ್ಟಡದಲ್ಲಿನ 5/1 ನಿವಾಸದಲ್ಲಿ ಶೋಧ ನಡೆಯಿತು. ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಅವರನ್ನು ವಿಚಾರಣೆಗೆ ಒಳಪಡಿಸಲು ಸುಮಾರು 14 ಗಂಟೆ ದೆಹಲಿಯಲ್ಲಿಯೇ ಅಧಿಕಾರಿಗಳು ಉಳಿಸಿದ್ದರು.

ಇ.ಡಿ. ಮರಂಡಿ ಸಂಚು –ಜೆಎಂಎಂ ಆರೋಪ

ಮುಖ್ಯಮಂತ್ರಿಯವರ ದೆಹಲಿ ನಿವಾಸದಲ್ಲಿ ಶೋಧ ನಡೆಸಿದ ಇ.ಡಿ ಕ್ರಮವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಪ್ರಶ್ನಿಸಿದೆ.

‘ಮುಖ್ಯಮಂತ್ರಿಯವರೇ 31ರಂದು ವಿಚಾರಣೆಗೆ ಒಪ್ಪಿದ್ದರು. ಆದರೂ, ಅಧಿಕಾರಿಗಳು ದೆಹಲಿ ನಿವಾಸಕ್ಕೆ ಹೋಗಿದ್ದೇಕೆ? ಇದು, ಇ.ಡಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್‌ ಮರಂಡಿ ಅವರ ಯೋಜನೆಯೇ. ಮುಖ್ಯಮಂತ್ರಿ ಅವರನ್ನು ಕ್ರಿಮಿನಲ್‌ನಂತೆ ನೋಡಲಾಗುತ್ತಿದೆ. ನಮ್ಮ ಮುಖ್ಯಮಂತ್ರಿ ಯಾರಿಗೂ ಹೆದರುವವರಲ್ಲ’ ಎಂದು ಜೆಎಂಎಂ ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ ಹೇಳಿದ್ದಾರೆ.

ವಸ್ತುಸ್ಥಿತಿ ವಿವರ ಪಡೆದ ರಾಜ್ಯಪಾಲರು

ರಾಂಚಿ (ಪಿಟಿಐ): ಮುಖ್ಯಮಂತ್ರಿಯವರ ದೆಹಲಿ ನಿವಾಸದಲ್ಲಿ ಇ.ಡಿ ಅಧಿಕಾರಿಗಳ ಶೋಧ ಹಿಂದೆಯೇ, ಜಾರ್ಖಂಡ್‌ನ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌ ಅವರು ಮಂಗಳವಾರ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಕುರಿತು ಮಾಹಿತಿ ಪಡೆದರು.

ಮುಖ್ಯ ಕಾರ್ಯದರ್ಶಿ ಲಾಲ್ಬಿಯಾಕ್ಟ್ಲುಂಗಾ ಖಿಯಾಂಗ್ಟೆ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್‌ ಕುಮಾರ್ ಮತ್ತು ಇತರೆ ಅಧಿಕಾರಿಗಳನ್ನು ರಾಜಭವನಕ್ಕೆ ಕರೆಸಿಕೊಂಡು ಮಾಹಿತಿ ಪಡೆದರು ಎಂದು ಡಿಜಿಪಿ ಅಜಯ್‌ ಕುಮಾರ್ ಸಿಂಗ್ ತಿಳಿಸಿದರು. 

ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮಾಡಿದ್ದು, ರಾಜಧಾನಿಯಲ್ಲಿ ಹೆಚ್ಚುವರಿಯಾಗಿ 7,000 ಪೊಲೀಸರನ್ನು ನಿಯೋಜಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮುಖ್ಯಮಂತ್ರಿ ನಿವಾಸ, ರಾಜಭವನ, ಇ.ಡಿ ಕಚೇರಿಯ 100 ಮೀಟರ್‌ ವ್ಯಾಪ್ತಿಯಲ್ಲಿ ಪ್ರತಿಭಟನೆಯನ್ನು ನಿರ್ಬಂಧಿಸಲಾಗಿದೆ.

ನಾನು ಜನರ ಹೃದಯದಲ್ಲಿ ನೆಲೆಸಿದ್ದೇನೆ. ನಾವೆಲ್ಲರೂ ರಾಷ್ಟ್ರಪಿತನ ಚಿಂತನೆ, ಸಿದ್ಧಾಂತಗಳನ್ನು ಅನುಸರಿಸಲು ಬದ್ಧರಾಗಿದ್ದೇವೆ. (ಅನುಪಸ್ಥಿತಿ ಕುರಿತ ಪ್ರಶ್ನೆಗೆ) 
–ಹೇಮಂತ್ ಸೊರೇನ್, ಮುಖ್ಯಮಂತ್ರಿ, ಜಾರ್ಖಂಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT