ನವದೆಹಲಿ: ‘ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ರಾಜೀನಾಮೆ ನೀಡಬೇಕು ಹಾಗೂ ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ನೀಡಬೇಕು. ಇಲ್ಲವಾದಲ್ಲಿ ಆಗಸ್ಟ್ 22ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಕಾಂಗ್ರೆಸ್ ಮಂಗಳವಾರ ಘೋಷಿಸಿದೆ. ಹಿಂಡೆನ್‌ಬರ್ಗ್ ವರದಿ ಬಿಡುಗಡೆ ಬಳಿಕ ಎದ್ದಿರುವ ವಿವಾದ ಬೆನ್ನಲ್ಲೇ ಪಕ್ಷ ಈ ನಿರ್ಧಾರ ಪ್ರಕಟಿಸಿದೆ.
ಮುಂಬರುವ ವಿವಿಧ ವಿಧಾನಸಭೆ ಚುನಾವಣೆಗಳ ಸಂಬಂಧ ಪಕ್ಷವನ್ನು ಅಣಿಗೊಳಿಸುವುದು, ಪ್ರಚಾರದ ವೇಳೆ ರಾಷ್ಟ್ರದ ಹಿತವನ್ನು ಕುರಿತ ಯಾವೆಲ್ಲಾ ವಿಚಾರಗಳನ್ನು ಜನರ ಮುಂದಿಡಬೇಕು ಎನ್ನುವುದರ ಬಗ್ಗೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮೇಲಿನ ನಿರ್ಣಯವನ್ನು ಕೈಗೊಳ್ಳಲಾಗಿದೆ.
‘ಪ್ರತಿಭಟನೆ ನಡೆಸುವ ಕುರಿತು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸಭೆಯ ಬಳಿಕ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಪತ್ರಕರ್ತರಿಗೆ ತಿಳಿಸಿದರು. ಸಭೆಯಲ್ಲಿ ಎಲ್ಲ ಪ್ರಧಾನ ಕಾರ್ಯದರ್ಶಿಗಳು, ಎಲ್ಲ ರಾಜ್ಯ ಘಟಕದ ಅಧ್ಯಕ್ಷರು, ರಾಜ್ಯದ ಉಸ್ತುವಾರಿ ನಾಯಕರು ಭಾಗವಹಿಸಿದ್ದರು.