ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ | ಹೋರ್ಡಿಂಗ್ ದುರಂತ; ಅವಶೇಷಗಳಡಿ ಸಿಲುಕಿ 73 ವಾಹನಗಳು ಜಖಂ

Published 17 ಮೇ 2024, 4:29 IST
Last Updated 17 ಮೇ 2024, 4:29 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಘಾಟ್ಕೊಪರ್‌ನಲ್ಲಿ ಪೆಟ್ರೋಲ್ ಪಂಪ್ ಮೇಲೆ ಹೋರ್ಡಿಂಗ್ ಬಿದ್ದು ದುರಂತ ಸಂಭವಿಸಿದ ಸ್ಥಳದಿಂದ ಕಾರುಗಳು ಸೇರಿ ಸುಮಾರು 70 ವಾಹನಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ. ಅಲ್ಲಿರುವ ಲೋಹಗಳ ಅವಶೇಷಗಳು ದುರಂತದ ಕರಾಳತೆಯನ್ನು ಸಾರುತ್ತಿವೆ.

ಘಟನೆ ನಡೆದ ಸ್ಥಳದಲ್ಲಿ 66 ಗಂಟೆಗಳ ಕಾರ್ಯಾಚರಣೆ ಅಂತ್ಯವಾಗಿದೆ. ಸ್ಥಳದಲ್ಲಿರುವ ಅವಶೇಷಗಳನ್ನು ತೆರವುಗೊಳಿಸಲು ಯಂತ್ರಗಳು 4 ದಿನಗಳಿಂದ ಆಹೋರಾತ್ರಿ ಕಾರ್ಯನಿರ್ವಹಿಸಿವೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆಯ ಆಯಕ್ತ ಭೂಷಣ್ ಗಗ್ರಾಣಿ ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ 10.30ಕ್ಕೆ ಕಾರ್ಯಾಚರಣೆ ಅಂತ್ಯಗೊಂಡಿದ್ದು, ಜೆಸಿಬಿ, ಡಂಪರ್‌ ಹಾಗೂ ಕ್ರೇನ್‌ಗಳನ್ನು ಬಳಸಿ ಅವಶೇಷಗಳನ್ನು ತೆರವು ಮಾಡುವ ಕೆಲಸ ರಾತ್ರಿವರೆಗೂ ನಡೆದಿದೆ. ಬುಧವಾರ ತಡರಾತ್ರಿ ಕಾರಿನೊಳಗಿದ್ದ ಎರಡು ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.

30 ದ್ವಿಚಕ್ರ ವಾಹನಗಳು, 31 ನಾಲ್ಕು ಚಕ್ರದ ಗಾಡಿಗಳು, 8 ಆಟೊ ರಿಕ್ಷಾಗಳು, 2 ಭಾರಿ ವಾಹನಗಳು ಸೇರಿ ಒಟ್ಟು 73 ವಾಹನಗಳು ಅವಘಡದಲ್ಲಿ ಸಿಲುಕಿ ಹಾನಿಗೀಡಾಗಿವೆ. ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 2 ತಂಡ ಸೋಮವಾರ ರಾತ್ರಿವರೆಗೂ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿದೆ. 12 ಅಗ್ನಿ ಶಾಮದ ವಾಹನ ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳದಲ್ಲಿದ್ದವು ಈಗ ಮುನ್ನೆಚ್ಚರಿಕಾ ಕ್ರಮವಾಗಿ 3 ಅಗ್ನಿಶಾಮಕ ವಾಹನ ಸ್ಥಳದಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದಾಗಿ 120*120 ಅಡಿಯ ಬೃಹತ್‌ ಹೋರ್ಡಿಂಗ್ ಒಂದು ಸಮೀಪದಲ್ಲಿದ್ದ ಪೆಟ್ರೋಲ್ ಪಂಪ್‌ ಮೇಲೆ ಬಿದ್ದಿತ್ತು. ಹಲವು ಜನರು ಹಾಗೂ ಹಾಗೂ ವಾಹನಗಳು ಇದರಡಿ ಸಿಲುಕಿದ್ದವು. ಘಟನೆಯಲ್ಲಿ 16 ಮಂದಿ ಸಾವಿಗೀಡಾಗಿ, 75 ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT