ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಚೀನಾ ಗಡಿಯಲ್ಲಿ ಶಾಂತಿ: ದ್ವಿಪಕ್ಷೀಯ ಮಾತುಕತೆಯಿಂದ ಸಾಧ್ಯ–ನರೇಂದ್ರ ಮೋದಿ

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಚೀನಾ ಜತೆಗಿನ ಸ್ಥಿರ ಮತ್ತು ಶಾಂತಿಯುತ ಸಂಬಂಧವು ಇಡೀ ಪ್ರದೇಶ ಮತ್ತು ಜಗತ್ತಿಗೆ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ರಾಜತಾಂತ್ರಿಕ, ಮಿಲಿಟರಿ ಮಟ್ಟದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ಸಂಬಂಧದ ಮೂಲಕ ಉಭಯ ದೇಶಗಳ ಗಡಿಯಲ್ಲಿ ಶಾಂತಿ, ನೆಮ್ಮದಿ ಪುನರ್‌ ಸ್ಥಾಪಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ. 

ಅವರು ಅಮೆರಿಕದ ನ್ಯೂಸ್‌ವೀಕ್‌ ಮ್ಯಾಗ್‌ಜಿನ್‌ಗೆ ನೀಡಿರುವ ಸಂದರ್ಶನದಲ್ಲಿ, ಭಾರತ– ಚೀನಾ ನಡುವಿನ ಸಂಬಂಧದ ಕುರಿತು ಪ್ರಮುಖವಾಗಿ ಮಾತನಾಡಿದ್ದಾರೆ.

‘ಎರಡು ದೇಶಗಳ ಗಡಿಯಲ್ಲಿನ ದೀರ್ಘಕಾಲದ ಸಮಸ್ಯೆಗಳನ್ನು ನಾವು ತುರ್ತಾಗಿ ಪರಿಹರಿಸಬೇಕಿದೆ. ನಮ್ಮ ದ್ವಿಪಕ್ಷೀಯ ಸಂವಹನದಲ್ಲಿ ಯಾವುದೇ ತೊಡಕು ಆಗದಂತೆ ಎಚ್ಚರವಹಿಸಬೇಕು’ ಎಂದಿರುವ ಅವರು, ‘ಎರಡೂ ದೇಶಗಳ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧಗಳು ಉಭಯ ದೇಶಗಳಿಗೆ ಮಾತ್ರವಲ್ಲದೇ, ಈ ಪ್ರದೇಶ ಮತ್ತು ವಿಶ್ವಕ್ಕೆ ಪ್ರಮುಖವಾಗಿದೆ’ ಎಂದಿದ್ದಾರೆ. 

ಸಂದರ್ಶನದಲ್ಲಿ ಪ್ರಧಾನಿ ಅವರು ಮುಂಬರುವ ಲೋಕಸಭೆ ಚುನಾವಣೆ, ಪಾಕಿಸ್ತಾನದ ಜತೆಗಿನ ಸಂಬಂಧ, ‘ಕ್ವಾಡ್‌’, ರಾಮಮಂದಿರ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. 

ಪಾಕ್‌ ಬಾಂಧವ್ಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಅಧಿಕಾರ ವಹಿಸಿಕೊಂಡ ಪಾಕ್‌ ಪ್ರಧಾನಿಯನ್ನು ಅಭಿನಂದಿಸುತ್ತೇನೆ. ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣದಿಂದ ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿ ಮೂಡುತ್ತದೆ ಎಂದು ಭಾರತ ಯಾವಾಗಲು ಪ್ರತಿಪಾದಿಸುತ್ತಿದೆ’ ಎಂದಿದ್ದಾರೆ.

ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಜೈಲುವಾಸದ ಕುರಿತು ಕೇಳಲಾದ ಪ್ರಶ್ನೆಗೆ, ‘ಪಾಕಿಸ್ತಾನದ ಆಂತರಿಕ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಗಳನ್ನು ನೀವೇ ಖುದ್ದಾಗಿ ಭೇಟಿ ನೀಡಿ ವೀಕ್ಷಿಸಿ. ಇಲ್ಲಿನ ಜನರ ಜೀವನದಲ್ಲಿ ಹೊಸ ಭರವಸೆ ಮೂಡಿದೆ’ ಎಂದು ಹೇಳಿದ್ದಾರೆ.  

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸರ್ಕಾರ ಅತ್ಯುತ್ತಮ ದಾಖಲೆ ಮುಂದುವರಿಸಲಿದೆ. ಸಾಮಾನ್ಯವಾಗಿ ಎರಡನೇ ಅವಧಿಯ ಕೊನೆಯ ವೇಳೆಗೆ ಅತ್ಯಂತ ಜನಪ್ರಿಯ ಸರ್ಕಾರಗಳೂ ಬೆಂಬಲ ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ವಿಶ್ವದ ಕೆಲವೆಡೆ ಕೆಲ ವರ್ಷಗಳಲ್ಲಿ ಸರ್ಕಾರಗಳ ಬಗ್ಗೆ ಜನರ ಅಸಮಾಧಾನ ಹೆಚ್ಚಾಗಿರುವುದನ್ನು ಗಮನಿಸಿದ್ದೇವೆ. ಆದರೆ ಇದಕ್ಕೆ ಭಾರತ ಅಪವಾದ. ಇಲ್ಲಿ ನಮ್ಮ ಸರ್ಕಾರಕ್ಕೆ ಜನಬೆಂಬಲ ಹೆಚ್ಚುತ್ತಿದೆ’ ಎಂದು ಅವರು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT