ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ವಿರೋಧ ಪಕ್ಷಗಳ ಒಕ್ಕೂಟಕ್ಕೆ I.N.D.I.A ಹೆಸರು ಬಂದಿದ್ದು ಹೇಗೆ?

Published 19 ಜುಲೈ 2023, 4:31 IST
Last Updated 19 ಜುಲೈ 2023, 4:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಸಭೆ ನಡೆಸಿದ ವಿರೋಧ ಪಕ್ಷಗಳು ಅಳೆದು ತೂಗಿ ತಮ್ಮ ಒಕ್ಕೂಟಕ್ಕೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ( I.N.D.I.A) ಎಂದು ಹೆಸರಿಟ್ಟಿವೆ.

ಅಂದಹಾಗೆ, ಈ ಹೆಸರು ಅಂತಿಮಗೊಳ್ಳುವುದಕ್ಕೂ ಮುನ್ನ, ನಾಯಕರ ನಡುವೆ ಭಾರಿ ಚರ್ಚೆ ನಡೆದಿದೆ. ಸೋಮವಾರ ರಾತ್ರಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್‌ನ ಮಧ್ಯವರ್ತಿಗಳ ನಡುವೆ ವಾಟ್ಸಾಪ್ ಸಂದೇಶಗಳು ಮತ್ತು ಮೊಬೈಲ್ ಕರೆಗಳಲ್ಲೇ ಚರ್ಚೆ ನಡೆದು ಪ್ರತಿಪಕ್ಷಗಳು I.N.D.I.A ಅನ್ನು ತಮ್ಮ ಒಕ್ಕೂಟದ ಹೆಸರಾಗಿ ಅಳವಡಿಸಿಕೊಳ್ಳಲು ವೇದಿಕೆಯನ್ನು ಸಿದ್ಧಪಡಿಸಿತು.

I.N.D.I.A ಪರ ರಾಹುಲ್ ಬಲವಾದ ವಕಾಲತ್ತು

ಕೆಲವು ಪಕ್ಷಗಳು ಈ ಹೆಸರನ್ನು ಸಂಪೂರ್ಣ ಒಪ್ಪಿಕೊಂಡರೆ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಹಲವರಿಗೆ ಇದರ ಬಗ್ಗೆ ಆಕ್ಷೇಪವಿತ್ತು. ಈ ಹೆಸರು ರಾಜಕೀಯ ಪಕ್ಷಗಳ ಒಕ್ಕೂಟಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆದರೂ, 26 ಪಕ್ಷಗಳ ಸಭೆಯಲ್ಲಿ ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ I.N.D.I.A ಎಂಬ ಒಕ್ಕೂಟದ ಹೆಸರಿನ ಪರವಾಗಿ ರಾಹುಲ್ ಗಾಂಧಿಯವರ ಬಲವಾದ ವಕಾಲತ್ತು ಎಲ್ಲರ ಸಮ್ಮತಕ್ಕೆ ಕಾರಣವಾಯಿತು. ‘ಮೋದಿಯವರು ಇಂಡಿಯಾವನ್ನು ಹೇಗೆ ವಿರೋಧಿಸುತ್ತಾರೆ. ಎನ್‌ಡಿಎಯನ್ನು ವಿರೋಧಿಸುವವರು ಐಎನ್‌ಡಿಐಎ ಜೊತೆಗಿದ್ದಾರೆ’ಎಂದು ರಾಹುಲ್ ಗಾಂಧಿ ಭಾವೋದ್ರಿಕ್ತವಾಗಿ ಸಮರ್ಥಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಪ್ರೋಗ್ರೆಸ್ಸಿವ್ ಪೀಪಲ್ ಆಫ್ ಇಂಡಿಯಾ, ಪ್ರೋಗ್ರೆಸ್ಸಿವ್ ಪೀಪಲ್ಸ್ ಫ್ರಂಟ್, ಇಂಡಿಯನ್ ಪೀಪಲ್ಸ್ ಫ್ರಂಟ್, ಪ್ರೋಗ್ರೆಸ್ಸಿವ್ ಪೀಪಲ್ಸ್ ಅಲೈಯನ್ಸ್ ಮತ್ತು ಪೀಪಲ್ಸ್ ಅಲೈಯನ್ಸ್ ಫಾರ್ ಇಂಡಿಯಾ ಮುಂತಾದ ಹಲವು ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತಾದರೂ I.N.D.I.A ಹೆಸರಿಗೆ ಮನ್ನಣೆ ಸಿಕ್ಕಿದೆ.

I.N.D.I.A ಸೇರಿದಂತೆ ತಮ್ಮ ಎರಡು-ಮೂರು ಸಲಹೆಗಳನ್ನು ಬೆಂಬಲಿಗರ ಮೂಲಕ ಮಮತಾ ಬ್ಯಾನರ್ಜಿಯವರಿಗೆ ತಲುಪಿಸಿದ್ದ ರಾಹುಲ್ ಗಾಂಧಿ, ಹೆಸರು ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಹುಲ್ ಸಂದೇಶದ ಜೊತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಮೊದಲು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಅವರನ್ನು ಸಂಪರ್ಕಿಸಿದ್ದರು. ಇಬ್ಬರೂ ನಾಯಕರ ನಡುವೆ ಸಂದೇಶಗಳ ವಿನಿಮಯ ನಡೆದು ರಾಹುಲ್ ಗಾಂಧಿ ಮತ್ತು ಮಮತಾ ಇಬ್ಬರಿಗೂ I.N.D.I.A ಬಗ್ಗೆ ಒಲವು ಮೂಡಿತ್ತು. ಆದರ‌ಲ್ಲಿ ‘ನ್ಯಾಷನಲ್’ ಅಥವಾ ‘ನ್ಯೂ’ ಮತ್ತು ‘ಡೆಮಾಕ್ರಟಿಕ್ ಅಥವಾ ಡೆವಲಪ್‌ಮೆಂಟಲ್’ಎಂಬುದನ್ನು ಸೇರಿಸಬೇಕೆ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ತಡರಾತ್ರಿ, ಇಬ್ಬರೂ ನಾಯಕರು ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ’ಕ್ಕೆ ಒಪ್ಪಿಗೆ ಸೂಚಿಸಿದರು. ಹೊಸ ಹೆಸರು ಪ್ರತಿಸ್ಪರ್ಧಿ ಎನ್‌ಡಿಎ ರೀತಿ ಧ್ವನಿಸದಂತೆ ನೋಡಿಕೊಳ್ಳಲು ನಾಯಕರು ಹೆಚ್ಚಿನ ಕಾಳಜಿ ವಹಿಸಿದ್ದರು.

ಮುಂದಿನ ಹಂತವಾಗಿ 26 ಪಕ್ಷಗಳ ಸಭೆಯಲ್ಲಿ ಹೆಸರನ್ನು ಪ್ರಸ್ತುತಪಡಿಸಬೇಕಿತ್ತು. ಆದರೆ, ಅದನ್ನು ಕಾಂಗ್ರೆಸ್ ಕಲ್ಪನೆ ಎಂದು ಬಿಂಬಿಸಲು ರಾಹುಲ್ ಬಯಸದ ಕಾರಣ ಮಮತಾ ಬ್ಯಾನರ್ಜಿ ಅವರಿಗೆ ಈ ವಿಚಾರವನ್ನು ಮಂಡಿಸಲು ವಿನಂತಿಸಲಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಆರಂಭಿಕ ಭಾಷಣದ ನಂತರ ಮಮತಾ ಅವರನ್ನು ಆಹ್ವಾನಿಸಿದರು. ಈ ಸಂದರ್ಭ ಹೊಸ ಹೆಸರಿನ ಅಗತ್ಯತೆ ಬಗ್ಗೆ ವಿವರಣೆಯೊಂದಿಗೆ ಮಮತಾ ಪ್ರಸ್ತಾಪಿಸಿದರು.

ನಿತೀಶ್ ಕುಮಾರ್, ಎಎಪಿ ವಿರೋಧ

ಹಲವು ನಾಯಕರು ಈ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು, ಆದರೆ, ನಿತೀಶ್ ಅವರು ಈ ಹೆಸರಿನಿಂದ ಅಷ್ಟು ತೃಪ್ತರಾಗಲಿಲ್ಲ. ಇದು ರಾಜಕೀಯ ಮೈತ್ರಿಯ ಹೆಸರು ಹೇಗೆ ಮತ್ತು ಅಂತಹ ಸಂಕ್ಷಿಪ್ತ ರೂಪವನ್ನು ಬಳಸುವುದು ಸೂಕ್ತವೇ ಎಂದು ಪ್ರಶ್ನಿಸಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಹ ಇಂಡಿಯಾ ಹೆಸರನ್ನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ. ಸೀಟು ಹಂಚಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಸ್ಪಷ್ಟವಾಗಿ ದೆಹಲಿ ಮತ್ತು ಪಂಜಾಬ್‌ನಲ್ಲಿನ ಭವಿಷ್ಯದ ರಾಜಕಾರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಈ ಮಧ್ಯೆ, ನಾವೆಲ್ಲರೂ ಸೈದ್ಧಾಂತಿಕ ಯುದ್ಧದಲ್ಲಿ ಹೋರಾಡುತ್ತಿದ್ದೇವೆ. ಅದನ್ನು ಗೆಲ್ಲಲು, ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದು ರಾಹುಲ್ ಗಾಂಧಿ ಅವರು ಎಎಪಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ವಿ 4 ಇಂಡಿಯಾ' ಪ್ರಸ್ತಾಪ

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು 'ವಿ ಫಾರ್ ಇಂಡಿಯಾ' ಅಥವಾ 'ವಿ 4 ಇಂಡಿಯಾ' ಅನ್ನು ಬಳಸಬಹುದೆಂದು ಸಲಹೆ ನೀಡಿದರು, ಅಲ್ಲಿ 'ವಿ' ಗೆಲುವನ್ನು ಬಿಂಬಿಸುತ್ತದೆ. ಇದು ಯುವಕರು ಮತ್ತು ಸಹಸ್ರಾರು ಜನರನ್ನು ಆಕರ್ಷಿಸಬಹುದೆಂದು ತಾರ್ಕಿಕ ವಾದ ಮುಂದಿಟ್ಟರು, ಆದರೆ, ಕೆಲವರು ಇದು ಮೈತ್ರಿಯ ಹೆಸರಿಗಿಂತ ಹೆಚ್ಚು ಘೋಷಣೆಯಾಗಬಹುದು ಎಂದು ಭಾವಿಸಿದರು.

ಯುಪಿಎ-3 ಏಕೆ ಆಗಬಾರದು?

ಇತ್ತ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮೈತ್ರಿಗೆ ಯುಪಿಎ ಅಥವಾ ಯುಪಿಎ-3 ಎಂದು ಏಕೆ ಹೆಸರಿಡಬಾರದು ಎಂದು ಸಲಹೆ ನೀಡಿದರು. ಆದರೆ, ಅದಕ್ಕೆ ನಾಯಕರಿಂದ ಒಮ್ಮತ ಸಿಗಲಿಲ್ಲ, ಅಸ್ತಿತ್ವದಲ್ಲಿರುವ ಯುಪಿಎ ಸಾಕಷ್ಟು ಬದಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟರು. ಈ ನಡುವೆ, ರಾಹುಲ್ ಅವರ ಭಾರತ್ ಜೋಡೊ ಯಾತ್ರೆಯು ಅದ್ಭುತವಾದ ಯಶಸ್ಸು ಕಂಡಿದೆ. ಹಾಗಾಗಿ, 'ಭಾರತ್ ಜೋಡೊ ಅಲಯನ್ಸ್' ಎಂಬ ಹೆಸರನ್ನು ಒಕ್ಕೂಟಕ್ಕೆ ಇಡಬಹುದಲ್ಲವೇ ಎಂದು ಹೇಳುವ ಮೂಲಕ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕಾಂಗ್ರೆಸ್ ನಾಯಕರನ್ನು ಅಚ್ಚರಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT