ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | 5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಹತ್ಯೆ

ಕೇರಳದಲ್ಲಿ ಘಟನೆ: ಆರೋಪಿಯನ್ನು ಗಲ್ಲಿಗೇರಿಸಲು ಆಗ್ರಹ
Published 31 ಜುಲೈ 2023, 0:28 IST
Last Updated 31 ಜುಲೈ 2023, 0:28 IST
ಅಕ್ಷರ ಗಾತ್ರ

ಕೊಚ್ಚಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವ ಪ್ರಕರಣ ಕೊಚ್ಚಿ ಸಮೀಪದಲ್ಲಿ ವರದಿಯಾಗಿದೆ.

ಈ ಕುರಿತು ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿ, ಬಿಹಾರದ ವಲಸೆ ಕಾರ್ಮಿಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತ ಮಗುವಿನ ತಾಯಿ, ಪೋಷಕರು ಒತ್ತಾಯಿಸಿದ್ದಾರೆ.

ಘಟನೆಯ ವಿವರ:

ಬಾಲಕಿ ಶುಕ್ರವಾರ ನಾಪತ್ತೆಯಾಗಿದ್ದಳು. ಬಾಲಕಿಯ ಕುಟುಂಬ ವಾಸಿಸುತ್ತಿದ್ದ ಕಟ್ಟಡದಲ್ಲೇ ಇದ್ದ ಬಿಹಾರದ ವಲಸೆ ಕಾರ್ಮಿಕ ಆಕೆಗೆ ಆಮಿಷವೊಡ್ಡಿ ಬೇರೆಡೆಗೆ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಾಲಕಿಯ ಕುಟುಂಬದವರು ಕೂಡಾ ಬಿಹಾರ ರಾಜ್ಯದವರೇ. 

ಆಲುವಾ ಪ್ರದೇಶದ ಸ್ಥಳೀಯ ಮಾರುಕಟ್ಟೆಯ ಬಳಿ ಶನಿವಾರ ಬಾಲಕಿಯ ಮೃತದೇಹವು ಕಟ್ಟಿದ್ದ
ಗೋಣಿಚೀಲವೊಂದರಲ್ಲಿ ಪತ್ತೆಯಾ
ಗಿತ್ತು. ಆರೋಪಿಯನ್ನು ಶುಕ್ರವಾರವೇ ಬಂಧಿಸಲಾಗಿತ್ತು. ಆದರೆ, ಪಾನಮತ್ತನಾ
ಗಿದ್ದರಿಂದ ಆತನಿಂದ ಯಾವುದೇ ವಿಷಯ ಬಾಯಿಬಿಡಿಸಲು ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಶಾಸಕ ಪ್ರತಿಕ್ರಿಯೆ:

‘ಆರೋಪಿಗೆ ಮರಣದಂಡನೆಯಂಥ ಗರಿಷ್ಠ ಶಿಕ್ಷೆ ಆಗುವಂತೆ ಪೊಲೀಸರು ಮತ್ತು ಸರ್ಕಾರ ನೋಡಿಕೊಳ್ಳಬೇಕು’ ಎಂದು ಕಾಂಗ್ರೆಸ್ ಶಾಸಕ ಅನ್ವರ್ ಸಾದಾತ್ ಹೇಳಿದ್ದಾರೆ. 

‘ಜನಪ್ರತಿನಿಧಿಯಾಗಿ ಹಾಗೂ ತಂದೆಯಾಗಿ ನಾನು ಇದನ್ನಷ್ಟೇ ಬಯಸುವುದು. ಈ ಕುರಿತು ನಾನು ನಿನ್ನೆ ಕೇರಳದ ಮುಖ್ಯಮಂತ್ರಿ ಅವರ ಜತೆಗೆ ಮಾತನಾಡಿದ್ದೇನೆ’ ಎಂದರು.  

ಅತ್ಯಾಚಾರ ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಭಾವುಕರಾದ ಶಾಸಕ ಅನ್ವರ್, ‘ಮಗುವನ್ನು ಜೀವಂತವಾಗಿ ರಕ್ಷಿಸಬಹುದೆಂಬ ಆಶಾವಾದ ಹೊಂದಿದ್ದೆವು. ಈ ಪರಿಸ್ಥಿತಿ ಎದುರಾಗಬಹುದು ಎಂದು ಭಾವಿಸಿರಲಿಲ್ಲ’ ಎಂದರು.

ಬಿಜೆಪಿಯ ಕೇರಳ ಘಟಕದ ಅಧ್ಯಕ್ಷೆ ಕೆ. ಸುರೇಂದ್ರನ್ ಅವರು, ‘ವಲಸೆ ಕಾರ್ಮಿಕರಲ್ಲಿರುವ ಅಪರಾಧ ಮನೋಭಾವದ ಜನರನ್ನು ಗುರುತಿಸುವ ವ್ಯವಸ್ಥೆ ಆಗಬೇಕಿದೆ. ಕೆಲ ವಲಸೆ ಕಾರ್ಮಿಕರು ಮಾದಕ
ದ್ರವ್ಯಗಳನ್ನು ಬಳಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. 

ಘಟನೆಯ ಬಳಿಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿರುವ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್, ‘ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಪೊಲೀಸರು ಲೋಪ ಎಸಗಿದ್ದಾರೆ’ ಎಂದೂ ಆರೋಪಿಸಿದೆ.

ಆದರೆ, ಈ ಆರೋಪವನ್ನು ನಿರಾಕರಿಸಿರುವ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಅವರು, ‘ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಾವುದೇ ಲೋಪಗಳಾಗಿಲ್ಲ’ ಎಂದಿದ್ದಾರೆ. 

‘ಬಾಲಕಿಯನ್ನು ಪೋಷಕರ ಜತೆಗೆ ಒಂದುಗೂಡಿಸುವ ನಮ್ಮೆಲ್ಲ ಪ್ರಯತ್ನಗಳು ವಿಫಲವಾದವು’ ಎಂದು ಕೇರಳ ಪೊಲೀಸರು ಶನಿವಾರ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿ ಕ್ಷಮೆ ಕೋರಿದ್ದಾರೆ.

ಜನರ ಕಂಬನಿ 

ಮಗುವಿನ ಮೃತದೇಹವಿರಿಸಿದ್ದ ಶಾಲೆಗೆ ಭಾನುವಾರ ನೂರಾರು ಜನ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಆರೋಪಿಗೆ ಕಠಿಣಶಿಕ್ಷೆ ವಿಧಿಸಬೇಕು, ಮರಣದಂಡನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ನೂರಾರು ಜನರ ಸಮ್ಮುಖದಲ್ಲಿ ಬಾಲಕಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವಾಗ ಹೆಚ್ಚಿನ ಜನರು ಕಣ್ಣೀರಾಗಿದ್ದರು ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. 

‘ಈ ದೌರ್ಜನ್ಯವನ್ನು ಸಹಿಸಲಾಗದು. ಈ ಘಟನೆಯನ್ನು ಕೇಳಿದ ಬಳಿಕ ನನಗೆ ಸರಿಯಾಗಿ ನಿದ್ದೆ ಕೂಡಾ ಮಾಡಲಾಗುತ್ತಿಲ್ಲ. ನಮ್ಮ ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಿದೆ. ಈ ರೀತಿಯ ಘಟನೆ ಮತ್ತೆ ಆಗಬಾರದು’ ಎಂದು ಮಹಿಳೆಯೊಬ್ಬರು ಆಗ್ರಹಿಸಿದರು.

****

ಈ ಘಟನೆಯ ಬಳಿಕ ಎಲ್ಲೆಡೆ ಪೋಷಕರು ಭಯಭೀತರಾಗಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಸರ್ಕಾರ ಮತ್ತು ಪೊಲೀಸರು ಮತ್ತಷ್ಟು ಎಚ್ಚರ ವಹಿಸಬೇಕಿದೆ

-ಅನ್ವರ್ ಸಾದಾತ್‌, ಕಾಂಗ್ರೆಸ್ ಶಾಸಕ

****

ಬಾಲಕಿಯನ್ನು ಕೊಂದಂತೆಯೇ ನಿಷ್ಕರುಣೆಯಿಂದ  ಅವನನ್ನೂ ಕೊಲ್ಲಬೇಕು. ಒಂದು ವೇಳೆ ಸರ್ಕಾರದಿಂದ ಇದು ಸಾಧ್ಯವಾಗದಿದ್ದಲ್ಲಿ ಆತನನ್ನು ಸಾರ್ವಜನಿಕರ ಕೈಗೆ ಒಪ್ಪಿಸಲಿ 

-ಸಂತ್ರಸ್ತ ಮಗುವಿನ ತಾಯಿ

****

4 ದಿನಗಳಲ್ಲಿ ಎರಡು ಅತ್ಯಾಚಾರ

ಸತ್ನಾ (ಮಧ್ಯಪ್ರದೇಶ): ಸತ್ನಾ ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 

ಇದು ಕಳೆದ ನಾಲ್ಕು ದಿನಗಳಲ್ಲಿ ನಡೆದ ಎರಡನೇ ಅತ್ಯಾಚಾರ ಪ್ರಕರಣವಾಗಿದೆ. ಶುಕ್ರವಾರ ಮಧ್ಯಾಹ್ನ ಬಾಲಕಿ ಬಹಿರ್ದೆಸೆಗೆ ತೆರಳಿದ್ದಾಗ ಅತ್ಯಾಚಾರ ನಡೆದಿದ್ದು, ಘಟನೆಯ ಕುರಿತು ಬಾಲಕಿಯ ಕುಟುಂಬದ ಸದಸ್ಯರು ರಾಮ್‌ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿ ವಿಜಯ್ ಸಾಕೇತ್‌ನನ್ನು ಶನಿವಾರ ಬಂಧಿಸಲಾಗಿದೆ. 

ಸತ್ನಾ ಜಿಲ್ಲೆಯ ಮೈಹರ್ ಪಟ್ಟಣದ ಪ್ರಸಿದ್ಧ ದೇವಸ್ಥಾನವೊಂದರ ಟ್ರಸ್ಟ್‌ನ ಇಬ್ಬರು ನೌಕರರು ಗುರುವಾರ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದರು. ಬಳಿಕ ಬಾಲಕಿಯನ್ನು ಹೀನಾಯವಾಗಿ ಥಳಿಸಿದ್ದರು. 

ಆರೋಪಿಗಳಾದ ರವೀಂದ್ರ ಕುಮಾರ್ ಮತ್ತು ಅತುಲ್ ಬಂದೋಪಾಧ್ಯಾಯ ಅವರನ್ನು ಬಂಧಿಸಲಾಗಿತ್ತು. ಘಟನೆಯ ಬಳಿಕ ಸ್ಥಳೀಯ ಆಡಳಿತವು ಆರೋಪಿಗಳ ಮನೆಗಳನ್ನು ಕೆಡವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT