ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೀಗ ಭಾರತೀಯಳೆ ಎನಿಸುತ್ತಿದೆ– ಪಾಕ್‌ನಿಂದ ಪ್ರೀತಿ ಹುಡುಕಿ ಬಂದ ಮಹಿಳೆ ಹೇಳಿದ್ದೇನು?

Published 9 ಜುಲೈ 2023, 10:03 IST
Last Updated 9 ಜುಲೈ 2023, 10:03 IST
ಅಕ್ಷರ ಗಾತ್ರ

ನೋಯ್ಡಾ: ಪ್ರೀತಿ ಹುಡುಕಿ ನಾಲ್ಕು ಮಕ್ಕಳೊಂದಿಗೆ ವೀಸಾ ಇಲ್ಲದೆ ನೇಪಾಳದಿಂದ ಭಾರತಕ್ಕೆ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‌ ಅವರಿಗೆ ಜಾಮೀನು ದೊರಕಿದ್ದು, ಸಚಿನ್‌ ಮೀನಾ ಅವರೊಂದಿಗೆ ಹೊಸ ಜೀವನ ಆರಂಭಿಸಲು ಉತ್ಸುಕರಾಗಿದ್ದಾರೆ.

ಜಾಮೀನು ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೀಮಾ, ‘ನನ್ನ ಪತಿ ಹಿಂದು, ನಾನೂ ಹಿಂದು, ನಾನೀಗ ಭಾರತೀಯಳೆಂಬ ಭಾವನೆ ಮೂಡುತ್ತಿದೆ‘ ಎಂದಿದ್ದಾರೆ.

ಪ್ರೀತಿ ಹುಟ್ಟಿದ್ದು ಹೇಗೆ?

ಕೊರೊನಾ ಲಾಕ್‌ ಡೌನ್ ಸಮಯದಲ್ಲಿ ಪಬ್‌ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾದ 30 ವರ್ಷದ ಸೀಮಾ ಮತ್ತು 25 ವರ್ಷದ ಸಚಿನ್‌ ನಡುವೆ ಪ್ರೀತಿ ಚಿಗುರಿತ್ತು. ಕಳೆದ ಮಾರ್ಚ್‌ನಲ್ಲಿ ಅವರು ಮದುವೆಯೂ ಆಗಿದ್ದರು. ಅದು ಅವರ ಮೊದಲ ಭೇಟಿಯಾಗಿತ್ತು. ‘ಸಚಿನ್‌ ಅವರನ್ನು ಮೊದಲು ಭೇಟಿಯಾಗುವ ಪ್ರಯಾಣ ಕಷ್ಟಕರವಾಗಿತ್ತು, ನಾನು ಬಹಳ ಹೆದರಿದ್ದೆ ಕೂಡ. ಮೊದಲು ಕರಾಚಿಯಿಂದ ದುಬೈಗೆ ತೆರಳಿ 11 ಗಂಟೆಗಳ ಬಳಿಕ ನೇಪಾಳಕ್ಕೆ ಬಂದು, ಅಲ್ಲಿಂದ ಪೊಖರಾಗೆ ತಲುಪಿ ಸಚಿನ್‌ ಅವರನ್ನು ಸೇರಿಕೊಂಡೆ‘ ಎನ್ನುತ್ತಾರೆ ಸೀಮಾ.

ಬಳಿಕ ಸೀಮಾ ಪಾಕಿಸ್ತಾನಕ್ಕೆ ತೆರಳಿದ್ದು, ಸಚಿನ್‌ ಕೂಡ ಭಾರತಕ್ಕೆ ವಾಪಸ್ಸಾಗಿದ್ದರು. ಪತಿಯೊಂದಿಗೆ ಭಿನ್ನಾಪ್ರಾಯ ಹೊಂದಿದ್ದ ಸೀಮಾ, ₹12 ಲಕ್ಷಕ್ಕೆ ನಿವೇಶನವೊಂದನ್ನು ಮಾರಿ ತನಗೆ ಮತ್ತು ನಾಲ್ಕು ಮಕ್ಕಳಿಗೆ ನೇಪಾಳಕ್ಕೆ ವಿಮಾನದ ಟಿಕೆಟ್‌ ಮತ್ತು ವೀಸಾವನ್ನು ಪಡೆದಿದ್ದರು.

ಕಠ್ಮಂಡುವಿನಿಂದ ದೆಹಲಿಗೆ ಬಂದ ಸೀಮಾ ಹಾಗೂ ಮಕ್ಕಳಿಗೆ ನೋಯ್ಡಾದಲ್ಲಿ ಉಳಿದುಕೊಳ್ಳಲು ಸಚಿನ್‌ ವ್ಯವಸ್ಥೆ ಮಾಡಿದ್ದರು. ಆದರೆ ಜುಲೈ 4 ರಂದು  ಅಕ್ರಮವಾಗಿ  ಭಾರತ ಪ್ರವೇಶಿದ್ದಕ್ಕೆ ಸೀಮಾ ಅವರನ್ನು ಪೊಲೀಸರು ಬಂಧಿಸಿದ್ದು, ವಲಸಿಗರಿಗೆ ಅಕ್ರಮವಾಗಿ ವಸತಿ ನೀಡಿದ್ದಕ್ಕೆ ಸಚಿನ್ ಅವರ ಮೇಲೆ ಪ್ರಕರಣ ದಾಖಲು ಮಾಡಿದ್ದರು.

ಇದೀಗ ಶನಿವಾರ ಸೀಮಾ ಅವರಿಗೆ ಜಾಮೀನು ಸಿಕ್ಕಿದೆ. ಈ ಬಗ್ಗೆ ಮಾತನಾಡಿದ ಸೀಮಾ, ‘ತಿಂಗಳುಗಳ ಕಾಲ ಜೈಲಿನಲ್ಲಿಯೇ ಇರುತ್ತೇನೆಂದು ಭಾವಿಸಿದ್ದೆ, ಜಾಮೀನು ಸಿಕ್ಕಿದ್ದನ್ನು ಕೇಳಿ ಸಂತೋಷದಿಂದ ಕಿರುಚಿದೆ‘ ಎಂದು ಖುಷಿ ಹಂಚಿಕೊಂಡಿದ್ದಾರೆ.

ಅತ್ತ ಸೀಮಾ ಅವರ ಪತಿ ಗುಲ್ಹಾಮ್‌ ಹೈದರ್‌, ಹೆಂಡತಿಯನ್ನು ಸೇರಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ವಿಡಿಯೊ ಮೂಲಕ  ಮನವಿ ಮಾಡಿದ್ದಾರೆ. ಆದರೆ ಸೀಮಾ, ವಾಪಸ್‌ ಗುಲ್ಹಾಮ್‌ ಹೈದರ್‌ ಬಳಿ ಹೋಗುವುದಿಲ್ಲ, ಮತ್ತೆ ಪಾಕಿಸ್ತಾನಕ್ಕೆ ಹೋದರೆ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT