ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Maharashtra Politics | ನಾನೇ ಎನ್‌ಸಿಪಿ ಅಧ್ಯಕ್ಷ: ಶರದ್ ಪವಾರ್

ಪ್ರಫುಲ್‌ ಪಟೇಲ್, ಸುನಿಲ್‌ ತತ್ಕರೆ ಉಚ್ಚಾಟನೆ * ಶರದ್‌ ತೀರ್ಮಾನಕ್ಕೆ ಕಾರ್ಯಕಾರಿ ಸಮಿತಿ ಅಸ್ತು
Published 6 ಜುಲೈ 2023, 16:26 IST
Last Updated 6 ಜುಲೈ 2023, 16:26 IST
ಅಕ್ಷರ ಗಾತ್ರ

ನವದೆಹಲಿ: ‘ನಾನೇ ಎನ್‌ಸಿಪಿ ಅಧ್ಯಕ್ಷ. ನನಗೆ 82 ಅಥವಾ 92 ವರ್ಷ ಆಗಿರಲಿ. ಸಮರ್ಥನಿದ್ದೇನೆ’ ಎಂದು ಘೋಷಿಸಿರುವ ಹಿರಿಯ ರಾಜಕಾರಣಿ ಶರದ್‌ ಪವಾರ್, ಪಕ್ಷದಿಂದ ಪ್ರಫುಲ್‌ ಪಟೇಲ್‌, ಸುನಿಲ್ ತತ್ಕರೆ ಮತ್ತು ಶಿಂದೆ ಸಂಪುಟ ಸೇರಿರುವ ಒಂಭತ್ತು ಶಾಸಕರನ್ನು ಉಚ್ಚಾಟಿಸಿದ್ದಾರೆ.

ಒಂದೆಡೆ, ಅಜಿತ್‌ ಪವಾರ್ ಬಣ ಮಾನ್ಯತೆ ಕೋರಿ ಚುನಾವಣಾ ಆಯೋಗದ ಮೊರೆ ಹೋಗಿದ್ದರೂ, ಶರದ್ ಪವಾರ್ ಬಣವು ‘ಪಕ್ಷವನ್ನು ಸಾಂಸ್ಥಿಕ ಸಂಘಟನೆಗಳಿಂದ ಗುರುತಿಸಲಾಗುತ್ತದೆ. ಶಾಸಕಾಂಗ ಪಕ್ಷದಿಂದ ಅಲ್ಲ’ ಎಂದು ಪ್ರತಿಪಾದಿಸಿದೆ.

ಪ್ರಫುಲ್‌ ಸೇರಿ ಹಲವರನ್ನು ಉಚ್ಚಾಟಿಸುವ ಶರದ್ ಪವಾರ್ ನಿರ್ಧಾರವನ್ನು ಇಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯು ಅನುಮೋದಿಸಿದೆ. ಸಭೆಯ ವಿವರ ನೀಡಿದ ಪಕ್ಷದ ಮುಖಂಡ ಪಿ.ಸಿ.ಚಾಕೊ, ‘ಇದು ಸೇರಿ ಎಂಟು ನಿರ್ಣಯಗಳನ್ನು ಸಭೆ ಅಂಗೀಕರಿಸಿತು’ ಎಂದು ತಿಳಿಸಿದರು.

‘ಬಹುಮತ ಹೊಂದಿದ್ದೇನೆ ಎಂದು ಅಜಿತ್ ಪವಾರ್ ಹೇಳಿಕೊಂಡಿದ್ದಾರೆ. ಆದರೆ, ಸತ್ಯ ಶೀಘ್ರದಲ್ಲಿಯೇ ಬಹಿರಂಗವಾಗಲಿದೆ ಎಂದು ಶರದ್‌ ಪವಾರ್ ಸಭೆಯಲ್ಲಿ ಹೇಳಿದ್ದಾರೆ. ಎನ್‌ಸಿಪಿಯು ಶರದ್ ಪವಾರ್ ಬೆನ್ನಿಗಿದೆ’ ಎಂದು ಚಾಕೊ ತಿಳಿಸಿದರು.

ಶರದ್‌ ಪವಾರ್‌ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡುವ ನಿರ್ಣಯವನ್ನು ಸಭೆಯು ಅಂಗೀಕರಿಸಿದೆ. ಯಾರು ಯಾರೋ ನಾನೇ ಎನ್‌ಸಿಪಿ ಅಧ್ಯಕ್ಷ ಎಂದು ಹೇಳಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಲಾಗದು ಎಂದು ಹೇಳಿದರು.

ಎನ್‌ಸಿಪಿ ಸಂಘಟನೆಯು ದೃಢವಾಗಿದೆ ಮತ್ತು ನಾವೆಲ್ಲರೂ ಶರದ್ ಪವಾರ್ ಅವರ ಬೆಂಬಲಕ್ಕೆ ಇದ್ದೇವೆ. ಪಕ್ಷದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರೇ ನೇರವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಈ ಮಧ್ಯೆ, ಪ್ರಫುಲ್ ಸೇರಿ ಹಲವರನ್ನು ಉಚ್ಚಾಟಿಸಿರುವ ಕುರಿತು ಶರದ್ ಪವಾರ್ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಅಜಿತ್ ಪವಾರ್ ಅವರ ಹೆಸರನ್ನು ಯಾವುದೇ ಹಂತದಲ್ಲಿಯೂ ಉಲ್ಲೇಖಿಸಿಲ್ಲ.

ಸಭೆಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಶರದ್ ಪವಾರ್, ನಾನೇ ಎನ್‌ಸಿಪಿ ಅಧ್ಯಕ್ಷನಿದ್ದೇನೆ. ಈ ಬಗ್ಗೆ ಯಾರು ಏನೇ ಹೇಳಿದರೂ ಅದು ಸಂಪೂರ್ಣ ಸುಳ್ಳು. ಅದಕ್ಕೆ ಮಾನ್ಯತೆ ನೀಡಲಾಗದು ಎಂದರು.

ಪಕ್ಷದ ಸ್ಥಾನಮಾನ ಕುರಿತ ಪ್ರಶ್ನೆಗೆ, ‘ನಮಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇದೆ. ಅದು ಪಕ್ಷದ ಸ್ಥಾನವನ್ನು ಕಡೆಗಣಿಸಿದರೆ, ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವ ಕುರಿತು ಪಕ್ಷ ಚಿಂತನೆ ನಡೆಸಲಿದೆ’ ಎಂದು ತಿಳಿಸಿದರು.

ಆ ಸಭೆಗೆ ಕಾನೂನು ಮಾನ್ಯತೆ ಇಲ್ಲ –ಅಜಿತ್ 

ಮುಂಬೈ (ಪಿಟಿಐ): ‘ಶರದ್‌ ಪವಾರ್ ಅವರು ಕರೆದಿದ್ದ ಎನ್‌ಸಿಪಿ ಕಾರ್ಯಕಾರಿ ಸಮಿತಿ ಸಭೆಗೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪ್ರತಿಪಾದಿಸಿದ್ದಾರೆ.

’ಶರದ್‌ ಪವಾರ್ ಅವರು ನವದೆಹಲಿಯಲ್ಲಿ ಇಂದು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಸೇರಿದಂತೆ ಹಲವು ಸಮಿತಿಗಳ ಸಭೆಗಳನ್ನು ಕರೆದಿದ್ದ ವಿಷಯ ಮಾಧ್ಯಮ ವರದಿಗಳಿಂದ ನನಗೆ ಗೊತ್ತಾಗಿದೆ‘ ಎಂದು ಅವರ ಪರವಾಗಿ ನೀಡಲಾದ ಹೇಳಿಕೆಯು ತಿಳಿಸಿದೆ.

‘ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೂನ್‌ 30ರಂದೇ ಅಜಿತ್ ಪವಾರ್ ಆಯ್ಕೆಯಾಗಿದ್ದಾರೆ. ಇವರಿಗೆ ಪಕ್ಷದ ಹಲವು ಚುನಾಯಿತ ಸದಸ್ಯರು ಹಾಗೂ ಸಾಂಸ್ಥಿಕ ಘಟಕಗಳ ಬೆಂಬಲ ಇದೆ. ನಮ್ಮದೆ ನಿಜವಾದ ಎನ್‌ಸಿಪಿ ಎಂದು ಚುನಾವಣಾ ಆಯೋಗಕ್ಕೂ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ, ಪಕ್ಷದ ಹೆಸರು, ಚಿಹ್ನೆ ನಮ್ಮ ಬಣಕ್ಕೆ ಸಿಗಬೇಕಿದೆ‘ ಎಂದು ಅಜಿತ್ ಪವಾರ್ ಪರವಾಗಿ ನೀಡಲಾದ ಹೇಳಿಕೆಯಲ್ಲಿ ಪಕ್ಷ ಪ್ರತಿಪಾದಿಸಿದೆ.

ನಿಜವಾದ ಎನ್‌ಸಿಪಿ ಯಾವುದು ಎಂದು ಈಗ ಚುನಾವಣಾ ಆಯೋಗ ನಿರ್ಧರಿಸಬೇಕಾಗಿದೆ. ಅಂತಿಮವಾಗಿ ಆಯೋಗ ತೀರ್ಮಾನಿಸುವವರೆಗೂ ನಡೆಯಲಿರುವ ಕಾರ್ಯಕಾರಿ ಸಮಿತಿ ಸೇರಿದಂತೆ ಯಾವುದೇ ಸಭೆಗಳಿಗೂ ಕಾನೂನು ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆತ್ಮಾವಲೋಕನ ಮಾಡಿಕೊಳ್ಳಿ –ಬಿಜೆಪಿ ಸಲಹೆ

ನಾಗಪುರ (ಪಿಟಿಐ): ‘ಶರದ್ ಪವಾರ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿಯನ್ನು ಟೀಕಿಸುವ ಬದಲಾಗಿ ತಮ್ಮ ಕುಟುಂಬ ಹಾಗೂ ಪಕ್ಷದತ್ತ ಗಮನಹರಿಸಬೇಕು’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬವಂಕುಲೆ ಅವರು, ‘ಈಗ ಎನ್‌ಸಿಪಿ ಇಬ್ಭಾಗವಾಗಲು ಶರದ್ ಪವಾರ್ ಅವರೇ ಹೊಣೆ. ಬಿಜೆಪಿಯಲ್ಲ‘ ಎಂದು ಹೇಳಿದ್ದು, ಪೂರಕವಾಗಿ ಅಜಿತ್ ಪವಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

‘ಶರದ್ ಪವಾರ್ ಅವರು ಬಿಜೆಪಿ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂದು ನಿಮ್ಮ ಸ್ಥಿತಿ ಏನಾಗಿದೆ. ನಿಮ್ಮ ಪಕ್ಷವೇ ನಿಮ್ಮ ಜೊತೆಗಿಲ್ಲ. ಕಾರ್ಯಕರ್ತರು ದೂರವಾಗುತ್ತಿದ್ದಾರೆ. ಕೇಂದ್ರ ಅಥವಾ ಮಹಾರಾಷ್ಟ್ರ ಸರ್ಕಾರದ ಜೊತೆಗೂ ನಿಮ್ಮ ಬಾಂಧವ್ಯ ಅಷ್ಟು ಚೆನ್ನಾಗಿಲ್ಲ’ ಎಂದಿದ್ದಾರೆ.

‘ನಿಮ್ಮ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ನಿಮ್ಮ ಕುಟುಂಬವೇ ದೂರವಾಗುತ್ತಿದೆ. ಇದಕ್ಕಿಂತ ಕೆಟ್ಟದ್ದು ಏನು ನೋಡಬೇಕು?’ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ, ಬಿಜೆಪಿ ಟೀಕಿಸದೇ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ‘ ಎಂದಿದ್ದಾರೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಾಯಕತ್ವವನ್ನು ಶ್ಲಾಘಿಸಿದ ಅವರು, ಮೋದಿ ಜಗತ್ತಿನಲ್ಲಿಯೇ ದೊಡ್ಡ ನಾಯಕ. ಆದರೆ, ರಾಜಕೀಯದಲ್ಲಿ 40–50 ವರ್ಷ ಇದ್ದೂ ತಮ್ಮ ಸ್ಥಾನವನ್ನು ಪವಾರ್ ಭದ್ರಮಾಡಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

ಮುನ್ನೆಲೆಗೆ ಮತ್ತೊಬ್ಬ ‘ಪವಾರ್’ 

ಮುಂಬೈ: ಎನ್‌ಸಿಪಿಯಲ್ಲಿ ಬಂಡಾಯ ಅಲೆ ಮೂಡಿದಂತೆ, ಮತ್ತೊಬ್ಬ ‘ಪವಾರ್’ ಮುನ್ನೆಲೆಗೆ ಬಂದಿದ್ದು ಎನ್‌ಸಿಪಿ ಸ್ಥಾಪಕ ಶರದ್ ಪವಾರ್ ಪರವಾಗಿ ಬಂಡಾಯಗಾರರ ವಿರುದ್ಧ ದನಿ ಮೊಳಗಿಸಿದ್ದಾರೆ.

ಇವರು ರೋಹಿತ್ ಪವಾರ್. ಕರ್ಜತ್‌–ಜಾಮ್‌ಖೇಡ್‌ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಇವರು ಶರದ್‌ ಪವಾರ್ ಅವರ ಅಣ್ಣ, ದಿವಂಗತ ಅಪ್ಪಾಸಾಹೇಬ್ ಪವಾರ್ ಅವರ ಮೊಮ್ಮಗ. ರಾಜೇಂದ್ರ ಪವಾರ್ ಅವರ ಮಗ. ಅಜಿತ್ ಅವಾರ್ ಮತ್ತು ಸುಪ್ರಿಯಾ ಸುಳೆ ಅವರ ದಾಯಾದಿ.

ಸುಪ್ರಿಯಾ ಸುಳೆ ಹಾಗೂ ಶರದ್‌ ನೇತೃತ್ವದ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಜೊತೆಗೂಡಿ ಪಕ್ಷ ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದಾರೆ.

ಬಾರಾಮತಿ ಆಗ್ರೊ ಲಿಮಿಟೆಡ್‌ನ ಸಿಇಒ ಆಗಿರುವ ರೋಹಿತ್‌ಗೆ ರಾಜಕಾರಣ ಹೊಸದಲ್ಲ. ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾರೆ.

ಪುಣೆ ಜಿಲ್ಲಾ ಪರಿಷತ್‌ಗೆ 2017ರಲ್ಲಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದು, ಸದ್ಯ ವಿಧಾನಸಭೆಗೂ ಆಯ್ಕೆಯಾಗಿದ್ದಾರೆ. 

‘ಶರದ್‌ ಪವಾರ್ ಹೊರತುಪಡಿಸಿ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬುದು ಅವರಿಗೂ (ಬಂಡಾಯಗಾರರು) ಗೊತ್ತಿದೆ. ಅದಕ್ಕಾಗಿಯೇ ಅವರು ಶರದ್ ಅವರ ಫೋಟೊ ಬಳಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ರಾಹುಲ್‌ –ಶರದ್‌ ಭೇಟಿ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗುರುವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಶರದ್‌ ಪವಾರ್ ಅವರಿಗೆ ಬೆಂಬಲ ಸೂಚಿಸುವುದು ಭೇಟಿಯ ಉದ್ದೇಶ ಎನ್ನಲಾಗಿದೆ. 

ಅಜಿತ್ ಪವಾರ್
ಅಜಿತ್ ಪವಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT