ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಎಫ್ಎಸ್‌ ಈಗ ಪ್ರಜಾಸತ್ತಾತ್ಮಕವಾಗುತ್ತಿದೆ: ಮಣಿ ಶಂಕರ್‌ ಅಯ್ಯರ್

ವಿದೇಶಾಂಗ ಸೇವೆ ಪ್ರಬಲ ಜಾತಿಗೆ ಸೀಮಿತ ಎಂಬ ಭಾವನೆ ಇತ್ತು: ಮಣಿ ಶಂಕರ್‌ ಅಯ್ಯರ್
Published 29 ಮೇ 2024, 13:51 IST
Last Updated 29 ಮೇ 2024, 13:51 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಈ ಹಿಂದೆ ‘ಪ್ರಬಲ ಜಾತಿಯವರ ಸೇವೆ’ ಎನಿಸಿತ್ತು. ಕಾಲ ಬದಲಾಗಿದ್ದು, ಈ ಸೇವೆ ಈಗ ಹೆಚ್ಚು ಪ್ರಜಾಸತ್ತಾತ್ಮಕವಾಗುತ್ತಿದೆ’ ಎಂದು ಮಾಜಿ ರಾಜತಾಂತ್ರಿಕ ಹಾಗೂ ಕಾಂಗ್ರೆಸ್‌ ಮುಖಂಡ ಮಣಿ ಶಂಕರ್‌ ಅಯ್ಯರ್ ಹೇಳಿದ್ದಾರೆ.

ಇಲ್ಲಿನ ಫಾರಿನ್‌ ಕರೆಸ್ಪಾಂಡೆಂಟ್ಸ್‌ ಕ್ಲಬ್‌ನಲ್ಲಿ ಮಂಗಳವಾರ ನಡೆದ ಲೇಖಕ ಕಲ್ಲೋಲ ಭಟ್ಟಾಚಾರ್ಯ ಅವರ ‘ನೆಹರೂಸ್ ಫಸ್ಟ್‌ ರಿಕ್ರ್ಯೂಟ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ವತಂತ್ರ ಭಾರತದ ಆರಂಭಿಕ ದಿನಗಳ ರಾಜತಾಂತ್ರಿಕರ ಅನುಭವಗಳನ್ನು ಈ ಕೃತಿ ಕಟ್ಟಿಕೊಡುತ್ತದೆ. 

ತಮ್ಮದು ‘ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಮಾಡಿದ ಕೊನೆಯ ಐಎಫ್‌ಎಸ್‌ ನೇಮಕಾತಿ’ ಎಂದು ಕರೆದುಕೊಳ್ಳುವ ಅಯ್ಯರ್‌, ‘ಮೊದಲ ತಲೆಮಾರು ನೇಮಕಾತಿ ವ್ಯವಸ್ಥೆ ಹೊಂದಿದ್ದ ಕೆಟ್ಟ ಗುಣಲಕ್ಷಣಗಳಿಂದ ದೇಶ ಈಗ ಮುಕ್ತವಾಗಿದೆ’ ಎಂದು ವಿಶ್ಲೇಷಿಸಿದರು. 

‘ನನ್ನ ಮೊದಲ ಪೀಳಿಗೆ ಹಾಗೂ 21ನೇ ಶತಮಾನದವರೆಗೆ ಐಎಫ್‌ಎಸ್‌ ಎಂಬುದು ಪ್ರಬಲ ಜಾತಿಯವರು ಮಾಡಬಹುದಾದ ಸೇವೆ ಎಂದೆನಿಸಿತ್ತು. ಮೆಕಾಲೆ ಸಂತತಿಗಳಿಗಾಗಿಯೇ ರೂಪಿಸಲಾದ ಸೇವೆ ಎಂದೂ ಹೇಳಲಾಗುತ್ತಿತ್ತು. ಈಗ ಕಾಲ ಬದಲಾಗಿದೆ’ ಎಂದರು.

‘ಈಗ ಐಎಫ್‌ಎಸ್‌ ಎಂಬುದು ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಹಿಂದಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯಲ್ಲಿದ್ದಾರೆ. ದೇಶದ ವೈವಿಧ್ಯದ ಕಂಪನ್ನು ನಾವೀಗ ಕಾಣಬಹುದಾಗಿದ್ದು, ಇದು ಒಳ್ಳೆಯ ಬೆಳವಣಿಗೆ’ ಎಂದು ಪ್ರತಿಪಾದಿಸಿದರು.

ಐಎಫ್‌ಎಸ್‌ ಅಧಿಕಾರಿಯಾಗಿ ಆರಂಭಿಕ ದಿನಗಳಲ್ಲಿ ವಿವಿಧ ದೇಶಗಳಿಗೆ ಭೇಟಿ ನೀಡಿದಾಗ ಆದ ಅನುಭವಗಳನ್ನು ಮೆಲುಕು ಹಾಕಿದ ಅವರು, ‘ಆರಂಭದಲ್ಲಿ ನನಗೆ ಹಿಂದಿ ಮಾತ್ರ ಚೆನ್ನಾಗಿ ಮಾತನಾಡಲು ಬರುತ್ತಿತ್ತು. ನಂತರ, ಒಂದು ವರ್ಷದ ಅವಧಿಯಲ್ಲಿ ಅನೇಕ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವುದನ್ನು ಕಲಿತೆ’ ಎಂದು ವಿವರಿಸಿದರು.

‘ಮೊದಲು ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಗೆ ನೇಮಕಗೊಳ್ಳುತ್ತಿದ್ದರು. ಈಗ, ಮಹಿಳೆಯರು ಕೂಡ ಈ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

‘ಈಗ ವಿದೇಶಾಂಗ ಸೇವೆಯಲ್ಲಿರುವ ವ್ಯಕ್ತಿ ವಿದೇಶಿಯರನ್ನು ಮದುವೆಯಾಗಬಹುದಾಗಿದೆ. ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಈ ಹಿಂದೆ, ವಿದೇಶಿ ಮಹಿಳೆಯನ್ನು ಮದುವೆಯಾಗುವ ಅಧಿಕಾರಿ ಸೇವೆಯಿಂದ ನಿವೃತ್ತಿಯಾಗಬೇಕಿತ್ತು. ನನ್ನ ಬ್ಯಾಚ್‌ನ ಅಧಿಕಾರಿ ಶಿವಕುಮಾರ್‌ ದಾಸ್ ಎಂಬುವವರು ಜೆಕ್‌ ಮಹಿಳೆಯನ್ನು ಮದುವೆಯಾದ ಕಾರಣ ಅವರನ್ನು ವಿಶ್ವಸಂಸ್ಥೆ ಕಚೇರಿಯಿಂದ ವರ್ಗಾವಣೆ ಮಾಡಲಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT