ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಡಿ.ಸಿಗಳಿಗೆ ಸುಮ್ಮನೆ ತೊಂದರೆ ಕೊಡಬೇಡಿ: ಇ.ಡಿಗೆ ಸುಪ್ರೀಂ ಕೋರ್ಟ್‌

Published 6 ಮೇ 2024, 11:14 IST
Last Updated 6 ಮೇ 2024, 11:14 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ತಮಿಳುನಾಡಿನ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವೃಥಾ ತೊಂದರೆ ನೀಡಬೇಡಿ ಎಂದು ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.

ಜಿಲ್ಲಾಧಿಕಾರಿಗಳನ್ನು ಇ.ಡಿ ಕಚೇರಿಯಲ್ಲಿ ರಾತ್ರಿ 8.30ರವರೆಗೂ ಇರಿಸಲಾಗುತ್ತಿದೆ ಎಂದು ವಕೀಲರು ಕೋರ್ಟ್‌ಗೆ ಹೇಳಿದರು. ಇದಕ್ಕೆ ಕೋರ್ಟ್ ಈ ರೀತಿ ಪ್ರತಿಕ್ರಿಯಿಸಿದೆ.

ಪ‍್ರಕರಣದ ತನಿಖೆಗೆ ಜಿಲ್ಲಾಧಿಕಾರಿಗಳು ತಮ್ಮ ಮುಂದೆ ಹಾಜರಾಗುತ್ತಿಲ್ಲ ಎಂದು ಇ.ಡಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಏ.2ರಂದು ತಿಳಿಸಿದ್ದರು. ಏಪ್ರಿಲ್‌ 25ರ ಒಳಗೆ ಖುದ್ದಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿತ್ತು.

ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್ ಮಿಶ್ರಾ ಅವರಿದ್ದ ಪೀಠ ಇಂದು ವಿಚಾರಣೆ ಮುಂದುವರಿಸಿತು. ಜಿಲ್ಲಾಧಿಕಾರಿಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕ‍ಪಿಲ್ ಸಿಬಲ್, ವಿಚಾರಣೆಗೆ ಹಾಜರಾಗಿರುವುದನ್ನು ಪೀಠದ ಗಮನಕ್ಕೆ ತಂದರು.

ಜಿಲ್ಲಾಧಿಕಾರಿಗಳು ವಿಚಾರಣೆ ಹಾಜರಾಗಿದ್ದರೂ, ಯಾವುದೇ ದಾಖಲೆಗಳನ್ನು ನಮಗೆ ಸಲ್ಲಿಸಿಲ್ಲ ಎಂದು ಇ.ಡಿ ಪರ ವಕೀಲರ ಹೇಳಿದರು. ಆದರೆ ಸಮನ್ಸ್‌ನಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಸಿಬಲ್ ಹೇಳಿದರು.

ಯಾವೆಲ್ಲಾ ದಾಖಲೆಗಳು ಜಿಲ್ಲಾಧಿಕಾರಿಗಳು ಸಲ್ಲಿಸಿಲ್ಲ ಎನ್ನುವುದನ್ನು ನಿಖರವಾಗಿ ತಿಳಿಸಿ ಎಂದು ಇ.ಡಿ ಪರ ವಕೀಲರಿಗೆ ಕೋರ್ಟ್‌ ಸೂಚಿಸಿತು.

‘ಅವರು (ಜಿಲ್ಲಾಧಿಕಾರಿಗಳು) ಬೆಳಿ‌ಗ್ಗೆ 11 ಗಂಟೆಗೆ ಬಂದಿದ್ದಾರೆ. ರಾತ್ರಿ 8.30ರವರೆಗೂ ಕೂರಿಸಿದ್ದಾರೆ’ ಎಂದು ಸಿಬಲ್ ಕೋರ್ಟ್‌ ಗಮನಕ್ಕೆ ತಂದರು.

‘ನೀವು ಹೀಗೆ ಮಾಡುವಂತಿಲ್ಲ’ ಎಂದು ಇ.ಡಿ ಪರ ವಕೀಲರಿಗೆ ಸೂಚಿಸಿದ ಕೋರ್ಟ್ ಅವರಿಗೆ ವೃಥಾ ತೊಂದರೆ ಕೊಡಬೇಡಿ ಎಂದಿತು.

ಸಮನ್ಸ್‌ನಲ್ಲಿ ಕೇಳಲಾದ ಯಾವ ದಾಖಲೆಯನ್ನು ಈ ಅಧಿಕಾರಿಗಳು ಸಲ್ಲಿಸಿಲ್ಲ ಎನ್ನುವುದರ ಬಗ್ಗೆ ವರದಿ ನೀಡಿ ಎಂದು ನಿರ್ದೇಶಿಸಿದ ನ್ಯಾಯಾಲಯ ಜೂನ್‌ಗೆ ವಿಚಾರಣೆಯನ್ನು ಮುಂದೂಡಿತು.

ಪ್ರಕರಣ ಸಂಬಂಧ ವೆಲ್ಲೂರು, ತಿರುಚಿರಾಪಳ್ಳಿ, ಕರೂರು, ತಾಂಜಾವೂರು ಹಾಗೂ ಅರಿಯಲೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಿಚಾರಣೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT