ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಲೋಕಸಭಾ ಚುನಾವಣೆ; ತಮಿಳುನಾಡು ಲೆಕ್ಕಾಚಾರ ಬದಲು

Published 29 ಮಾರ್ಚ್ 2024, 22:21 IST
Last Updated 29 ಮಾರ್ಚ್ 2024, 22:21 IST
ಅಕ್ಷರ ಗಾತ್ರ

ತಮಿಳುನಾಡಿನ ಮತದಾರರು ಪ್ರತಿ ಐದು ವರ್ಷಕ್ಕೊಮ್ಮೆ ರಾಜ್ಯ ಸರ್ಕಾರವನ್ನು ಬದಲಿಸುತ್ತಲೇ ಇರುತ್ತಾರೆ. ಇದಕ್ಕೆ ಕೆಲವೊಮ್ಮೆ ಅಪವಾದ ಎಂಬಂತೆ ಅದೇ ಸರ್ಕಾರ ಬಂದಿದೆಯಾದರೂ ಮತ ಪ್ರಮಾಣದಲ್ಲಿ ಜನರು ಬದಲಾವಣೆ ಬಯಸಿದ್ದು ಕಾಣುತ್ತದೆ. ಲೋಕಸಭಾ ಚುನಾವಣೆಯಲ್ಲೂ ತಮಿಳುನಾಡಿನ ಜನರು ಇದೇ ರೀತಿ ಮತದಾನ ಮಾಡುತ್ತಾರೆ. ತಮಿಳುನಾಡಿನಲ್ಲಿ ಪ್ರಾಬಲ್ಯವಿರುವುದು ದ್ರಾವಿಡ ಪಕ್ಷಗಳದ್ದೇ. ಅವುಗಳ ಮಧ್ಯೆ ಕಾಂಗ್ರೆಸ್‌ ಅಲ್ಪ ಸ್ವಲ್ಪ ನೆಲೆ ಉಳಿಸಿಕೊಂಡಿದೆ. ಬಿಜೆಪಿ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿದೆ ಎಂಬುದನ್ನು ಚುನಾವಣಾ ಫಲಿತಾಂಶದ ದತ್ತಾಂಶಗಳೇ ಹೇಳುತ್ತವೆ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಈ ಲೆಕ್ಕಾಚಾರ ತುಸು ಬದಲಾದಂತೆ ಕಾಣುತ್ತಿದೆ

ತಮಿಳುನಾಡಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಇರಲಿ ಅಥವಾ ಲೋಕಸಭಾ ಚುನಾವಣೆಯೇ ಇರಲಿ ಪೈಪೋಟಿ ಇರುವುದು ಎರಡು ದ್ರಾವಿಡ ಪಕ್ಷಗಳ ಮಧ್ಯೆ ಮಾತ್ರ. ರಾಷ್ಟ್ರೀಯ ಪಕ್ಷಗಳಿಗೆ ಅಲ್ಲಿ ನೆಲೆಯೇ ಇಲ್ಲ ಅಥವಾ ದ್ರಾವಿಡ ಪಕ್ಷಗಳ ನೆರವಿನೊಂದಿಗೆ ಅವು ಕಣಕ್ಕೆ ಇಳಿಯಬೇಕಷ್ಟೇ. ಪ್ರತಿ ಲೋಕಸಭಾ ಚುನಾವಣೆಯಲ್ಲೂ ತಮಿಳುನಾಡಿನ ಮತದಾರರು ದ್ರಾವಿಡ ಪಕ್ಷಗಳಾದ ಡಿಎಂಕೆಯನ್ನೋ ಅಥವಾ ಎಐಎಡಿಎಂಕೆಯನ್ನೋ ಬೆಂಬಲಿಸುತ್ತಾರೆ. ಈ ಎರಡು ಪಕ್ಷಗಳಲ್ಲಿ ಒಂದು ಪಕ್ಷದ ಕೈಹಿಡಿದರೆ, ಮತ್ತೊಂದು ಪಕ್ಷವನ್ನು ನೆಲಕಚ್ಚಿಸುತ್ತಾರೆ. ಈವರೆಗೆ ಇಲ್ಲಿ ನಡೆದ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳು ಈ ಎರಡು ದ್ರಾವಿಡ ಪಕ್ಷಗಳ ಜತೆಗಿನ ಮೈತ್ರಿಯಲ್ಲಿಯೇ ತಮ್ಮ ಅದೃಷ್ಟ ‍ಪರೀಕ್ಷೆಗೆ ಇಳಿದಿದ್ದವು. ಆದರೆ ಈ ಬಾರಿ ಬಿಜೆಪಿ ದ್ರಾವಿಡ ಪಕ್ಷಗಳ ಬಣಗಳನ್ನು ಬಿಟ್ಟು ತಮಿಳುನಾಡಿನಲ್ಲಿ ತೃತೀಯ ರಂಗ ರಚಿಸಲು ಮುಂದಾಗಿದೆ.

ತಮಿಳುನಾಡಿನ ರಾಜಕಾರಣದ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಹೆಚ್ಚು ಪ್ರಬಲ ಪಕ್ಷದಂತೆ ಭಾಸವಾಗುತ್ತದೆ. ಪಕ್ಷದಲ್ಲಿ ಒಳಜಗಳವಿಲ್ಲ–ಬಣ ರಾಜಕಾರಣವಿಲ್ಲ, ಆಡಳಿತ ವಿರೋಧಿ ಅಲೆ ಇಲ್ಲ, ತಮಿಳು ಮತ್ತು ದ್ರಾವಿಡ ಅಸ್ಮಿತೆಯ ಪರವಾಗಿ ನಿಲ್ಲುವ ಯಾವ ಅವಕಾಶವನ್ನೂ ಡಿಎಂಕೆ ಕಳೆದುಕೊಂಡಿಲ್ಲ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಯೇ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ನೆಚ್ಚಿನ ಪಕ್ಷವಾಗಿದೆ. ಅದೂ, ತಮಿಳುನಾಡು ಮತದಾರರು ತಮ್ಮ ಸಂಪ್ರದಾಯವನ್ನು ಮುರಿದರೆ ಮಾತ್ರ. ಏಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ–ಕಾಂಗ್ರೆಸ್‌–ಎಡಪಕ್ಷಗಳ ಮೈತ್ರಿಕೂಟವು 39ರಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಪ್ರತಿಬಾರಿ ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡುವ ಸಂಪ್ರದಾಯಕ್ಕೆ ಮತದಾರರು ಕಟ್ಟುಬಿದ್ದರೆ, ಎಐಎಡಿಎಂಕೆಯನ್ನು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಬೇಕು.

ಆದರೆ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ. ಡಿಎಂಕೆಯಷ್ಟೇ ಪ್ರಬಲ ದ್ರಾವಿಡ ಪಕ್ಷವಾಗಿದ್ದ ಎಐಎಡಿಎಂಕೆಯಲ್ಲಿ ಈಗ ಅಂತಹ ಬಲವಿಲ್ಲ. ಎಐಎಡಿಎಂಕೆಯ ಚಾಲಕ ಶಕ್ತಿಯಾಗಿದ್ದದ್ದು ಜಯಲಲಿತಾ. ಅವರ ನಿಧನದ ನಂತರ ಪಕ್ಷವು ಹಲವು ಹೋಳಾಗಿದೆ. ಒಳಜಗಳದ ಕಾರಣದಿಂದ ಉತ್ತಮ ಆಡಳಿತ ನೀಡುವಲ್ಲೂ ಪಕ್ಷ ವಿಫಲವಾಗಿತ್ತು, ಪದೇ–ಪದೇ ಮುಖ್ಯಮಂತ್ರಿ ಬದಲಾಗಿದ್ದರು. ಅದರ ಬೆನ್ನಲ್ಲೇ ನಡೆದಿದ್ದ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದ ಪಕ್ಷವು, ನೆಲಕಚ್ಚಿತ್ತು. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ದೊಡ್ಡಸಂಖ್ಯೆಯ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಇರುವುದು ಮತ್ತು ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವ ನಾಯಕತ್ವ ಇಲ್ಲದಿರುವುದು ಪಕ್ಷದ ಬಲವನ್ನು ಕುಂದಿಸಿದೆ.

ಬಿಜೆಪಿಯ ಎನ್‌ಡಿಎ ಒಟ್ಟಿಗೆ ಗುರುತಿಸಿಕೊಂಡಿದ್ದ ಎಐಎಡಿಎಂಕೆಗೆ ಅದರಿಂದಲೂ ತುಸು ಹಿನ್ನಡೆಯಾಗಿತ್ತು. ಬಿಜೆಪಿಯ ‘ಹಿಂದಿ ಹೇರಿಕೆ ನೀತಿ’ಗಳು, ದ್ರಾವಿಡ ಅಸ್ಮಿತೆ ನಿರಾಕರಣೆಯಂತಹ ನೀತಿಗಳನ್ನು ವಿರೋಧಿಸಲು ಸಾಧ್ಯವಾಗದಂತಹ ಸ್ಥಿತಿಗೆ ಎಐಎಡಿಎಂಕೆ ದೂಡಲ್ಪಟ್ಟಿತ್ತು. ತಡವಾಗಿಯಾದರೂ ಆ ಸ್ಥಿತಿಯಿಂದ ಹೊರಬರಲು ಯತ್ನಿಸಿದ ಪಕ್ಷವು, ಬಿಜೆಪಿ ಮೈತ್ರಿಯನ್ನೇ ಕಡಿದುಕೊಂಡಿತು. ಈ ಮೂಲಕ ತನ್ನ ದ್ರಾವಿಡ ಅಸ್ಮಿತೆಯನ್ನು ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಅದರ ಹಲವು ಮಿತ್ರಪಕ್ಷಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಒಂದೆರಡು ಸಣ್ಣ–ಪುಟ್ಟ ಪಕ್ಷಗಳನ್ನು ಹೊರತುಪಡಿಸಿದರೆ ಬಹುತೇಕ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುವ ಅನಿವಾರ್ಯ ಎಐಎಡಿಎಂಕೆಗೆ ಇದೆ. ಈ ಚುನಾವಣೆ ಆ ಪಕ್ಷಕ್ಕೆ ದೊಡ್ಡ ಸವಾಲು ಒಡ್ಡಿದರೂ, ಪಕ್ಷವು ಸಾಗಬೇಕಾದ ಹಾದಿಯನ್ನು ಈ ಚುನಾವಣೆ ನಿರ್ಧರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನೊಂದೆಡೆ ಡಿಎಂಕೆ ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಂಡಿದೆ. ಕಾಂಗ್ರೆಸ್‌ ಮತ್ತು ಎಡಪಕ್ಷಗಳಿಗೆ ಈ ಹಿಂದಿನಂತೆಯೇ ಹಲವು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ ನೀತಿ ಮಯ್ಯಂ ಪಕ್ಷದೊಂದಿಗೂ ಮೈತ್ರಿ ಮಾಡಿಕೊಂಡಿದೆ. ಹಲವು ಈ ಕ್ಷೇತ್ರಗಳಲ್ಲಿ ಈ ಎಲ್ಲಾ ಕ್ಷೇತ್ರಗಳ ಒಮ್ಮತದ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇವುಗಳ ಸಿದ್ಧತೆ ಅಂತಿಮ ಹಂತಕ್ಕೆ ಬಂದಿದೆ.

ಬಿಜೆಪಿ ತೃತೀಯ ರಂಗ

ಬಿಜೆಪಿ ಈ ಬಾರಿ ತಮಿಳುನಾಡಿನಲ್ಲಿ ತನ್ನ ನೆಲೆ ಪರೀಕ್ಷಿಸಲು ಮುಂದಾಗಿದೆ. ಎಐಎಡಿಎಂಕೆಯು ದೂರವಿಟ್ಟ ನಂತರ ಬಿಜೆಪಿಯು ಮತ್ತೆ ಮತ್ತೆ ಮರುಮೈತ್ರಿಗಾಗಿ ಎಡತಾಕಿತ್ತು. ಅಲ್ಲದೆ, ಎಐಎಡಿಎಂಕೆಯ ಹಲವು ನಾಯಕರು ಬಿಜೆಪಿ ಸೇರಲಿದ್ದಾರೆ ಎಂದೂ ಬಿಜೆಪಿ ನಾಯಕರು ಪದೇ–ಪದೇ ಹೇಳಿದ್ದರು. ಎಐಎಡಿಎಂಕೆ ನಾಯಕರನ್ನು ಬಿಜೆಪಿಗೆ ಬರಮಾಡಿಕೊಳ್ಳಲು ಕಾರ್ಯಕ್ರಮವನ್ನೂ ಆಯೋಜಿಸಿತ್ತು. ಆದರೆ ಅಂತಹ ಕಾರ್ಯಕ್ರಮಗಳು ರದ್ದಾದದ್ದು ಮಾತ್ರ ಗಮನಾರ್ಹ. ಹೀಗಾಗಿ ಬಿಜೆಪಿ ತಂತ್ರವನ್ನು ಬದಲಿಸಿತು.

ಬಿಜೆಪಿ ಈ ಬಾರಿ ತಂತ್ರ ಬದಲಿಸಲು ಪಕ್ಷದ ಬಗ್ಗೆ ತಮಿಳುನಾಡಿನಲ್ಲಿ ಇದ್ದ ಅಭಿಪ್ರಾಯ ಬದಲಾಗಿದ್ದೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅಣ್ಣಾಮಲೈ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು/ಕಾರ್ಯಕರ್ತರು ಡಿಎಂಕೆ ಸರ್ಕಾರದ ವಿರುದ್ಧ ದೊಡ್ಡದನಿಯಲ್ಲಿ ಮಾತನಾಡಿದ್ದರು. ಅಣ್ಣಾಮಲೈ ಜನಪ್ರಿಯತೆಯ ಕಾರಣದಿಂದ ಬಿಜೆಪಿ ಕಾರ್ಯಕ್ರಮಗಳಲ್ಲಿ ಜನರೂ ಸೇರತೊಡಗಿದರು. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆಯೂ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ರಾಜ್ಯ ಬಿಜೆಪಿಯೇ ನಡೆಸಿದ ಸಮೀಕ್ಷೆಯ ಪ್ರಕಾರ ಈ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಪಕ್ಷಕ್ಕೆ ಶೇ 20ಕ್ಕಿಂತಲೂ ಹೆಚ್ಚು ಮತಗಳು ಬರುತ್ತವೆ. ಇವುಗಳಿಂದ ಹೆಚ್ಚು ಸ್ಥಾನವನ್ನು ಗೆದ್ದುಬಿಡುತ್ತೇವೆ ಎಂಬ ಹಮ್ಮು ನಮಗಿಲ್ಲ. ಆದರೆ ನಮ್ಮ ಪಕ್ಷದ ಮತಬ್ಯಾಂಕ್‌ ವಿಸ್ತರಿಸಲಿದೆ. ಪಕ್ಷಕ್ಕೆ ಸ್ವತಂತ್ರ ನೆಲೆ ದೊರೆಯಲಿದೆ ಎಂಬುದು ರಾಜ್ಯ ಬಿಜೆಪಿ ನಾಯಕರ ಮಾತು.

ಹೀಗಿದ್ದೂ ಸಂಪೂರ್ಣ ಸ್ವತಂತ್ರವಾಗಿ ಕಣಕ್ಕೆ ಇಳಿಯುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ಉತ್ತರ ತಮಿಳುನಾಡಿನಲ್ಲಿ ನೆಲೆ ಹೊಂದಿರುವ ಪಿಎಂಕೆಯ ಜತೆಗೆ ಮೈತ್ರಿಯನ್ನು ಅಂತಿಮಗೊಳಿಸಿಕೊಂಡಿದೆ. ಎಐಎಡಿಎಂಕೆಯ ಮೈತ್ರಿಯಲ್ಲಿದ್ದ ಪಿಎಂಕೆಯನ್ನು ಅದರಿಂದ ದೂರ ಮಾಡುವ ಮೂಲಕ, ಎಐಎಡಿಎಂಕೆಯನ್ನು ದುರ್ಬಲಗೊಳಿಸಿದೆ. ಇದು ಬಿಜೆಪಿ–ಪಿಎಂಕೆ ಅಭ್ಯರ್ಥಿಗಳಿಗೆ ಅನುಕೂಲವೂ ಆಗಬಹುದು ಅಥವಾ ಅನನುಕೂಲವೂ ಆಗಬಹುದು. ಇದಲ್ಲದೇ ಎಐಎಡಿಂಎಕೆಯಿಂದ ಹೊರಬಂದ ಟಿಟಿವಿ ದಿನಕರನ್‌ ಅವರೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ, ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ಒ.ಪನೀರಸೆಲ್ವಂ ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಡಿಎಂಡಿಕೆ, ಎಐಡಿಎಂಎಂಕೆ ಜತೆಗೆ ಮೈತ್ರಿ ಮಾತುಕತೆ ನಡೆಸುತ್ತಿದೆ. ಈ ಚುನಾವಣೆಗೆ ಇಷ್ಟೆಲ್ಲಾ ಸಿದ್ಧತೆ ನಡೆಸಿದ್ದರೂ, ಬಿಜೆಪಿಯು ತಮಿಳರ ವಿರೋಧಿ ಎಂದು ಇಲ್ಲಿನ ಮತದಾರರಲ್ಲಿ ಇರುವ ಅಭಿಪ್ರಾಯವನ್ನು ತೊಡೆದುಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಹೀಗಾಗಿ ಪಕ್ಷಕ್ಕೆ ಈ ಬಾರಿ ಹೆಚ್ಚಿನ ಮತಬೆಂಬಲ ದೊರೆಯುತ್ತದೆ ಎಂದು ನಿರೀಕ್ಷಿಸಲಾಗದು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT