ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾದಕವಸ್ತು ಎಲ್ಲೆಡೆ ಲಭ್ಯ ಎಂದ ಗೋವಾ ಸಚಿವ; ಇಕ್ಕಟ್ಟಿಗೆ ಸಿಲುಕಿದ ಸಾವಂತ್ ಸರ್ಕಾರ

Published 16 ಆಗಸ್ಟ್ 2024, 3:04 IST
Last Updated 16 ಆಗಸ್ಟ್ 2024, 3:04 IST
ಅಕ್ಷರ ಗಾತ್ರ

ಪಣಜಿ: ಮಾದಕವಸ್ತು ಎಲ್ಲೆಡೆ ಸಿಗುತ್ತಿದೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗೋವಾ ಕಾನೂನು ಸಚಿವ ಅಲೆಕ್ಸೊ ಸಿಕ್ವೇರಾ ಹೇಳಿದ್ದಾರೆ.

ಸಚಿವರ ಈ ಹೇಳಿಕೆಯು ಸರ್ಕಾರದ ವಿರುದ್ಧ ಗುಡುಗಲು ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ಆದರೆ, ಟೀಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಅಲೆಕ್ಸೊ ಅವರು ಗೋವಾದ ಬಗ್ಗೆ ಮಾತನಾಡಿಲ್ಲ ಎಂದಿದ್ದಾರೆ.

ಅಲೆಕ್ಸೊ ಅವರು ದೇಶದ 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಮಡಗಾಂವ್‌ನಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದರು. ಗೋವಾದಲ್ಲಿ ವಾರ್ಷಿಕವಾಗಿ ಆಯೋಜಿಸುವ ಸನ್‌ಬರ್ನ್‌ ಇಡಿಎಂ (ಎಲೆ‌ಕ್ಟ್ರಾನಿಕ್‌ ಡ್ಯಾನ್ಸ್‌ ಮ್ಯೂಸಿಕ್‌) ಉತ್ಸವಕ್ಕೆ ಬೆಂಬಲ ಸೂಚಿಸಿದ ಅವರು ಮಾದಕ ವಸ್ತು ಬಳಕೆ ಕುರಿತು ಹೇಳಿಕೆ ನೀಡಿ ಟೀಕೆಗೊಳಗಾಗಿದ್ದಾರೆ.

ಮಾದಕವಸ್ತು ಎಲ್ಲೆಡೆ ಸಿಗುತ್ತಿದೆ. ಅದಕ್ಕಾಗಿ ಸನ್‌ಬರ್ನ್‌ ಇಡಿಎಂ ಉತ್ಸವಕ್ಕೆ ಬರಬೇಕಾಗಿಲ್ಲ. ಮಾದಕವಸ್ತು ಮಾರಾಟ ಮಾಡುತ್ತಿರುವವರನ್ನು ಪತ್ತೆ ಹಚ್ಚುವುದು ಹಾಗೂ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಸಮಾಜದ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಮುನ್ನಡೆಯೋಣ ಮತ್ತು ಯಾವುದೇ ರೀತಿಯ ಮಾದಕವಸ್ತು ಮಾರಾಟವಾಗದಂತೆ ನೋಡಿಕೊಳ್ಳೋಣ ಎಂದು ಹೇಳಿದ್ದಾರೆ.

ಇದು ವಿವಾದ ಸೃಷ್ಟಿಸಿದೆ. ಮಾದಕವಸ್ತು ಲಭ್ಯತೆ ಬಗ್ಗೆ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಸಾವಂತ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಾಪ್ರಹಾರ ಮಾಡಿವೆ.

'ಮಾದಕವಸ್ತು ಎಲ್ಲೆಡೆ ಸಿಗುತ್ತಿದೆ ಎಂದರೆ, ಪೆಡ್ಲರ್‌ಗಳನ್ನು ನಿಯಂತ್ರಣದಲ್ಲಿಡಬೇಕಾದ ನಿಮ್ಮನ್ನೂ ಒಳಗೊಂಡಂತೆ ವ್ಯವಸ್ಥೆಯನ್ನೇ ಬದಲಿಸಬೇಕಾದ ಸಮಯ ಇದಾಗಿದೆ' ಎಂದು ಎಎಪಿ ಗುಡುಗಿದೆ.

'ಕಾನೂನು ಸಚಿವ ಅಲೆಕ್ಸೊ ಸಿಕ್ವೇರಾ ಅವರು ಮಾದಕವಸ್ತು ಎಲ್ಲೆಡೆ ಸಿಗುತ್ತದೆ ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಹಾಗೂ ಸಾವಂತ್‌ ಆಡಳಿತದಲ್ಲಿ ಪೊಲೀಸ್‌ ವ್ಯವಸ್ಥೆ ವಿಫಲವಾಗಿದೆ ಎನ್ನುವ ಮೂಲಕ ಬಿಜೆಪಿ ಸರ್ಕಾರವನ್ನು ಬಯಲಿಗೆಳೆದಿದ್ದಾರೆ. ಪ್ರಧಾನಿಯವರೇ, ಇದು ಬಿಜೆಪಿಯು ಗೋವಾವನ್ನು ಸ್ವಾವಲಂಬಿಯಾಗಿಸುವ ರೀತಿಯೇ' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಾವಂತ್‌, ಸಚಿವರು ಬಾಯಿತಪ್ಪಿ ಈ ಹೇಳಿಕೆ ನೀಡಿದ್ದಾರೆ. ಪ್ರಪಂಚದಾದ್ಯಂತ ಮಾದಕವಸ್ತು ಸಿಗುತ್ತಿದೆ ಎಂಬುದು ಅವರ ಮಾತಿನ ಅರ್ಥ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT