ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ ಮೈತ್ರಿಗೆ ಇರುವುದೇ ಎರಡಂಶ: ನಡ್ಡಾ ವಾಗ್ದಾಳಿ

‘ಸನಾತನ ಸಂಸ್ಕೃತಿ ಮೇಲೆ ದಾಳಿ, ಮಾಧ್ಯಮಗಳಿಗೆ ಬೆದರಿಕೆ’
Published 14 ಸೆಪ್ಟೆಂಬರ್ 2023, 14:43 IST
Last Updated 14 ಸೆಪ್ಟೆಂಬರ್ 2023, 14:43 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸನಾತನ ಸಂಸ್ಕೃತಿ ಮೇಲೆ ದಾಳಿ ಮತ್ತು ಮಾಧ್ಯಮಗಳ ಮೇಲೆ ದಬ್ಬಾಳಿಕೆ ನಡೆಸುವ ಎರಡಂಶಗಳ ಮೇಲೆ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ರಚಿಸಿಕೊಂಡಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳಲ್ಲಿ ತುರ್ತುಪರಿಸ್ಥಿತಿ ಕಾಲದ ಮನಸ್ಥಿತಿ ಇನ್ನೂ ಜೀವಂತವಾಗಿದೆ ಎಂದು ನಡ್ಡಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹೇಳಿಕೆ ಹಂಚಿಕೊಂಡು, ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

‘ಐ.ಎನ್‌.ಡಿ.ಐ. ಮೈತ್ರಿಕೂಟವು ತಮ್ಮ ಹುನ್ನಾರಗಳನ್ನು ತಕ್ಷಣ ನಿಲ್ಲಿಸಬೇಕು. ಬದಲಿಗೆ ರಚನಾತ್ಮಕ ಕೆಲಸ ಮತ್ತು ಜನರ ಸೇವೆಗೆ ಒತ್ತು ನೀಡಬೇಕು. ಇಲ್ಲವಾದಲ್ಲಿ ಅದು ಸಾಗುತ್ತಿರುವ ಅಸ್ಪಷ್ಟತೆಯ ಹಾದಿ ಇನ್ನಷ್ಟು ಸ್ಪಷ್ಟವಾಗುತ್ತದೆ’ ಎಂದು ನಡ್ಡಾ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಮೈತ್ರಿಕೂಟವು ಸನಾತನ ಸಂಸ್ಕೃತಿ ಮೇಲೆ ದಾಳಿ ಮತ್ತು ಮಾಧ್ಯಮಗಳ ಮೇಲೆ ದಬ್ಬಾಳಿಕೆಯನ್ನು ನಡೆಸುವ ಎರಡು ಕೆಲಸಗಳನ್ನು ಮಾತ್ರ ಮಾಡುತ್ತಿದೆ. ಮಾಧ್ಯಮಗಳನ್ನು ಬೆದರಿಸುವ ಮತ್ತು ಭಿನ್ನ ಅಭಿಪ್ರಾಯದವರನ್ನು ಮೌನವಾಗಿಸುವಂತಹ ಅನೇಕ ನಿದರ್ಶನಗಳ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆ. ಪತ್ರಕರ್ತರ ಮೇಲೆ ವೈಯಕ್ತಿಕವಾಗಿ ಎಫ್‌ಐಆರ್‌ ದಾಖಲಿಸುವುದು, ನಾಜಿ ಶೈಲಿಯಲ್ಲಿ ಯಾರನ್ನು ಗುರಿಯಾಗಿಸಬೇಕೆಂ‌ದು ಪಟ್ಟಿ ಮಾಡುವ ಮೂಲಕ ಮಾಧ್ಯಮಗಳನ್ನು ಕಾಂಗ್ರೆಸ್‌ ಬೆದರಿಸುತ್ತಿದೆ ಎಂದು ನಡ್ಡಾ ಆರೋಪಿಸಿದ್ದಾರೆ.

ಸುದ್ದಿವಾಹಿನಿಗಳ ಪೈಕಿ ಯಾವ ನಿರೂಪಕರು ನಡೆಸಿಕೊಡುವ ಕಾರ್ಯಕ್ರಮಗಳಿಗೆ ‘ಇಂಡಿಯಾ’ದ ಅಂಗಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸಬಾರದು ಎಂಬುದರ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಮಾಧ್ಯಮ ಕುರಿತ ಉಪಸಮಿತಿಗೆ ನೀಡಲು ಸಮನ್ವಯ ಸಮಿತಿ ನಿರ್ಧರಿಸಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿಕೆ ನೀಡಿದ ಬೆನ್ನಲ್ಲೇ ನಡ್ಡಾ ಅವರು ಈ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT