ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಕಾರ: ಭಾರತ, ಬಾಂಗ್ಲಾದೇಶ ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೇಖ್‌ ಹಸೀನಾ ಸಭೆ
Published 22 ಜೂನ್ 2024, 14:46 IST
Last Updated 22 ಜೂನ್ 2024, 14:46 IST
ಅಕ್ಷರ ಗಾತ್ರ

ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶನಿವಾರ ಸಭೆ ನಡೆಸಿದರು. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯೂ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು.

ಕಡಲ ಗಡಿ ರಕ್ಷಣೆ ಹಾಗೂ ಸಾಗರ ಆರ್ಥಿಕತೆಯಲ್ಲಿ ಸಹಕಾರ, ಡಿಜಿಟಲ್‌ ಕ್ಷೇತ್ರದಲ್ಲಿ ಬಾಂಧವ್ಯ ವೃದ್ಧಿ, ಎರಡೂ ದೇಶಗಳ ನಡುವಿನ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು.

‘ಉಭಯ ದೇಶಗಳ ನಡುವೆ ಭವಿಷ್ಯದಲ್ಲಿ ಸಹಕಾರ ವೃದ್ಧಿ ಗಮನದಲ್ಲಿಟ್ಟುಕೊಂಡು ನಾವು ಯೋಜನೆಯೊಂದನ್ನು ರೂಪಿಸಿದ್ದೇವೆ. ಪರಿಸರ ಸ್ನೇಹಿ ಯೋಜನೆಗಳಲ್ಲಿ ಪಾಲುದಾರಿಕೆ, ಬಾಹ್ಯಾಕಾಶ, ಡಿಜಿಟಲ್ ಪಾಲುದಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಈ ಯೋಜನೆಗಳಿಂದ ಎರಡೂ ದೇಶಗಳ ಯುವ ಸಮುದಾಯಕ್ಕೆ ಪ್ರಯೋಜನವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಭಾರತ ನಮ್ಮ ಪ್ರಮುಖ ನೆರೆಯ ದೇಶ ಮಾತ್ರವಲ್ಲ, ನಮ್ಮ ನಂಬಿಕಸ್ಥ ಮಿತ್ರರಾಷ್ಟ್ರವಾಗಿದೆ’ ಎಂದು ಶೇಖ್‌ ಹಸೀನಾ ಹೇಳಿದ್ದಾರೆ.

‘ಭಾರತದೊಂದಿಗಿನ ಬಾಂಧವ್ಯಕ್ಕೆ ಬಾಂಗ್ಲಾದೇಶ ಹೆಚ್ಚು ಮಹತ್ವ ನೀಡುತ್ತದೆ. 1971ರ ವಿಮೋಚನಾ ಯುದ್ಧದ ಬಳಿಕ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಭಾರತ ನೀಡಿದ ಕೊಡುಗೆಯನ್ನು ಕೃತಜ್ಞತೆಯೊಂದಿಗೆ ನಾನು ನೆನಪಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

‘ರಕ್ಷಣೆ, ವ್ಯಾಪಾರ, ಸಂಪರ್ಕ, ಎರಡು ದೇಶಗಳ ಮೂಲಕ ಹರಿಯುವ ನದಿಗಳ ನೀರು ಹಂಚಿಕೆ, ಇಂಧನ ಹಾಗೂ ಪ್ರಾದೇಶಿಕ ಸಹಕಾರದಂತಹ ವಿಚಾರಗಳ ಕುರಿತು ರಚನಾತ್ಮಕ ಚರ್ಚೆ ನಡೆಸಿದೆವು’ ಎಂದೂ ಹಸೀನಾ ಹೇಳಿದ್ದಾರೆ.

ಗೌರವ: ಪ್ರಧಾನಿ ಮೋದಿ ಅವರೊಂದಿಗಿನ ಸಭೆಗೂ ಮುನ್ನ, ಹಸೀನಾ ಅವರು ರಾಜಘಾಟ್‌ಗೆ ತೆರಳಿ, ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು. ನಂತರ, ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ವಿಧ್ಯುಕ್ತ ಸ್ವಾಗತ ಕೋರಲಾಯಿತು.

ಚೀನಾ ದೂರವಿಡುವ ಉದ್ದೇಶ

ಭಾರತೀಯ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಬಾಂಗ್ಲಾದೇಶದಲ್ಲಿ ಬಲವಾಗಿ ಕೇಳಿಬರುತ್ತಿದ್ದರೂ ಆ ದೇಶದೊಂದಿಗೆ ಹಲವು ಒಪ್ಪಂದಗಳಿಗೆ ಭಾರತ ಸಹಿ ಹಾಕಿರುವುದು ಮಹತ್ವದ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಚೀನಾ ನೀಡುವ ಕಡಿಮೆ ಬಡ್ಡಿ ದರದ ಸಾಲ ಪಡೆಯದಂತೆ ಬಾಂಗ್ಲಾದೇಶವನ್ನು ಮನವೊಲಿಸುವುದು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಾಂಗ್ಲಾದೇಶ ಚೀನಾವನ್ನು ಅವಲಂಬಿಸದಂತೆ ಮಾಡುವ ಕಾರ್ಯತಂತ್ರದ ಭಾಗವಾಗಿ ಭಾರತ ಹಲವು ಒಪ್ಪಂದಗಳಿಗೆ ಸಹಿ ಹಾಕಿದೆ. ತೀಸ್ತಾ ನದಿ ನೀರು ನಿರ್ವಹಣೆಗೆ ಸಂಬಂಧಿಸಿದ ಯೋಜನೆ ಅನುಷ್ಠಾನಕ್ಕಾಗಿ ಚೀನಾ ನೆರವನ್ನು ಪಡೆಯದಂತೆ ಮಾಡುವಲ್ಲಿ ಭಾರತ ಯಶ ಕಂಡಿದೆ ಎಂದೇ ಹೇಳಲಾಗುತ್ತಿದೆ. ಭಾರತೀಯ ತಂತ್ರಜ್ಞರನ್ನು ಒಳಗೊಂಡ ತಂಡವೊಂದು ಶೀಘ್ರವೇ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ತೀಸ್ತಾ ನದಿ ನೀರು ನಿರ್ವಹಣೆಗೆ ಭಾರತ ಯಾವ ರೀತಿ ಹಣಕಾಸು ನೆರವು ನೀಡಲು ಸಾಧ್ಯ ಎಂಬ ಬಗ್ಗೆ ಪರಿಶೀಲನೆ ನಡೆಸಲಿದೆ. ರಕ್ಷಣಾ ಕ್ಷೇತ್ರದಲ್ಲಿ ಬಾಂಗ್ಲಾದೇಶವು ಚೀನಾ ನೆರವನ್ನು ಪಡೆಯುತ್ತಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸುತ್ತಲೇ ಇದೆ. 2016ರಿಂದ ಈ ವರೆಗೆ ಬಾಂಗ್ಲಾದೇಶ ಚೀನಾದಿಂದ ಎರಡು ಜಲಾಂತರ್ಗಾಮಿಗಳನ್ನು ಖರೀದಿಸಿದೆ. ಕಾಕ್ಸ್‌ ಬಜಾರ್‌ ಬಳಿಯ ಪೆಕುವಾ ಎಂಬಲ್ಲಿ ಚೀನಾ ಜಲಾಂತರ್ಗಾಮಿ ನೆಲೆಯನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕೂಡ ಭಾರತದ ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕಾಗಿ ಚೀನಾದಿಂದ ಕಡಿಮೆ ಬಡ್ಡಿದರದಲ್ಲಿ ಶತಕೋಟಿ ಡಾಲರ್ ಸಾಲ ಪಡೆಯುವ ಉದ್ದೇಶವನ್ನು ಬಾಂಗ್ಲಾದೇಶ ಹೊಂದಿದೆ. 5 ಶತಕೋಟಿ ಡಾಲರ್‌ ಸಾಲ ನೀಡಲು ಚೀನಾ ಒಲವು ತೋರಿದೆ. ಆದರೆ ಚೀನಾದ ಸಾಲದ ಸುಳಿಗೆ ಸಿಲುಕದಂತೆ ಶೇಖ್‌ ಹಸೀನಾ ನೇತೃತ್ವದ ಸರ್ಕಾರಕ್ಕೆ ಭಾರತ ಎಚ್ಚರಿಕೆ ನೀಡುತ್ತಲೇ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT