ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಮೈತ್ರಿಕೂಟದ ನಾಯಕರು ಜಾತಿ ಹೆಸರಿನಲ್ಲಿ ಜನರನ್ನು ಪ್ರಚೋದಿಸುತ್ತಾರೆ: ಮೋದಿ

Published 23 ಫೆಬ್ರುವರಿ 2024, 14:03 IST
Last Updated 23 ಫೆಬ್ರುವರಿ 2024, 14:03 IST
ಅಕ್ಷರ ಗಾತ್ರ

ವಾರಾಣಸಿ: ವಿರೋಧಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ದ ನಾಯಕರು ಜಾತಿಯ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದರು.

ದಲಿತರು ಮತ್ತು ಬುಡಕಟ್ಟು ಸಮುದಾಯದವರು ಉನ್ನತ ಸ್ಥಾನಗಳನ್ನು ಅಲಂಕರಿಸುವುದನ್ನು ಸಹಿಸಲೂ ಅವರಿಗೆ ಆಗುತ್ತಿಲ್ಲ ಎಂದು ಟೀಕಿಸಿದ ಪ್ರಧಾನಿ, ದ್ರೌಪದಿ ಮುರ್ಮು ಸ್ಪರ್ಧಿಸಿದ್ದ ರಾಷ್ಟ್ರಪತಿ ಚುನಾವಣೆಯನ್ನು ಉಲ್ಲೇಖಿಸಿದರು.

ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಸಂತ ರವಿದಾಸ್‌ ಅವರ 647ನೇ ಜನ್ಮದಿನೋತ್ಸವ ಹಾಗೂ ಸಾರ್ವಜನಿಕ ಸಭೆ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡಿದರು.

ಜಾತಿ ಹೆಸರಿನಲ್ಲಿ ಜನರನ್ನು ಪ್ರಚೋದಿಸುವುದರಿಂದಲೂ ಮನುಷ್ಯತ್ವಕ್ಕೆ ಪೆಟ್ಟು ಬೀಳಲಿದೆ. ‘ಇಂಡಿಯಾ’ ನಾಯಕರು ಜಾತಿ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುವ ಹಾಗೂ ದಲಿತರು, ವಂಚಿತರ ಪರ ಯೋಜನೆಗಳನ್ನು ವಿರೋಧಿಸುವುದರಲ್ಲಿ ನಿರತರಾಗಿದ್ದಾರೆ. ಇದನ್ನು ದಲಿತರು, ಹಿಂದುಳಿದ ವರ್ಗದ ಜನರು ಅರಿತುಗೊಳ್ಳಬೇಕಾಗಿದೆ ಎಂದು ಹೇಳಿದರು.

ಇದೇ ಜನರು ಜಾತಿ ಕಲ್ಯಾಣದ ಹೆಸರಿನಲ್ಲಿ ಇಂದು ಕುಟುಂಬ ಹಿತಾಸಕ್ತಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಶೌಚಾಲಯ ಕಟ್ಟುವ ಕಾರ್ಯ ಆರಂಭವಾದಾಗ ಅಣಕವಾಡಿದರು. ಡಿಜಿಟಲ್‌ ಇಂಡಿಯಾ, ಜನ್‌ಧನ್‌ ಖಾತೆಗಳ ಬಗ್ಗೆಯೂ ವ್ಯಂಗ್ಯವಾಗಿ ಮಾತನಾಡಿದರು ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

ಈ ಪರಿವಾರವಾದಿ ಪಕ್ಷಗಳಿಗೆ ತಮ್ಮ ಕುಟುಂಬ ಹೊರತುಪಡಿಸಿ ಯಾವುದೇ ದಲಿತ, ಬುಡಕಟ್ಟು ಜನರು ಉನ್ನತ ಸ್ಥಾನ ಅಲಂಕರಿಸುವುದು ಬೇಕಾಗಿಲ್ಲ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಆಗುವುದನ್ನು ವಿರೋಧಿಸಿದ್ದರು. ದಲಿತರು, ಹಿಂದುಳಿದ ವರ್ಗದವರು, ಬುಡಕಟ್ಟು ಜನರನ್ನು ವೋಟ್‌ಬ್ಯಾಂಕ್ ಆಗಿಯೇ ನೋಡಲು ಇವರು ಬಯಸುತ್ತಾರೆ ಎಂದರು.

‘ಪ್ರತಿ ಕಾಲಘಟ್ಟದಲ್ಲೂ ಸಂತರು ಸಮಾಜವನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ, ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ‘ ಎಂದು ಹೇಳಿದರು.

ಸಂತ ರವಿದಾಸ್‌ ವ್ಯಕ್ತಿತ್ವ ಸ್ಮರಿಸಿದ ಅವರು, ರವಿದಾಸ್‌ ಅವರು ಸಮಾಜಕ್ಕೆ ಸ್ವಾತಂತ್ರದ ಅರ್ಥ ನೀಡಿದ ಅವರು ಸಾಮಾಜಿಕ ಅಂತರವನ್ನು ಕುಗ್ಗಿಸಲು ಒತ್ತು ನೀಡಿದರು ಎಂದು ಹೇಳಿದರು.

ಸ್ವತಃ ಪ್ರಜ್ಞೆ ಇಲ್ಲದ ವ್ಯಕ್ತಿ: ರಾಹುಲ್‌ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ಟೀಕೆ

ವಾರಾಣಸಿ : ‘ಸ್ವತಃ ಪ್ರಜ್ಞೆಯಲ್ಲಿ ಇಲ್ಲದವರು ಯುವಜನರು ಮತ್ತಿನಲ್ಲಿ ಇದ್ದಾರೆ’ ಎಂದು ಟೀಕಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ವಾರಾಣಸಿಯ ರಸ್ತೆಗಳಲ್ಲಿ ಮದ್ಯವ್ಯಸನಿ ವ್ಯಕ್ತಿಗಳು ಇರುವುದನ್ನು ಗಮನಿಸಿದ್ದೇನೆ’ ಎಂಬ ರಾಹುಲ್‌ಗಾಂಧಿ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ಅವರ ಹೆಸರನ್ನು ಉಲ್ಲೇಖಿಸಿದೇ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿಯನ್ನು ಉಲ್ಲೇಖಿಸಿದ ಅವರು ‘ಕಳೆದ 10 ವರ್ಷಗಳಲ್ಲಿ ವಾರಾಣಸಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ವೇಗ ಪಡೆದುಕೊಂಡಿವೆ. ನಾನು ಎಂದಿಗೂ ಸಣ್ಣ ರೈತರು ವ್ಯಾಪಾರಿಗಳ ರಾಯಭಾರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT