ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Census: ಸೆಪ್ಟೆಂಬರ್‌ನಿಂದ ಜನಗಣತಿ?

ಪ್ರಧಾನಿ ಕಚೇರಿಯಿಂದ ಹಸಿರು ನಿಶಾನೆ ನಿರೀಕ್ಷೆಯಲ್ಲಿ ಅಧಿಕಾರಿಗಳು
Published : 21 ಆಗಸ್ಟ್ 2024, 23:52 IST
Last Updated : 21 ಆಗಸ್ಟ್ 2024, 23:52 IST
ಫಾಲೋ ಮಾಡಿ
Comments

ನವದೆಹಲಿ: ಕೇಂದ್ರ ಸರ್ಕಾರ ಇದೇ ಸೆಪ್ಟೆಂಬರ್‌ನಲ್ಲಿ ಜನಗಣತಿ ಕಾರ್ಯ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ಬುಧವಾರ ಹೇಳಿವೆ.

ವ್ಯಾಪಕ ಟೀಕೆ ನಂತರ, ತಮ್ಮ ಮೂರನೇ ಅವಧಿಯಲ್ಲಿ ಜನಗಣತಿ ನಡೆಸುವ ಮೂಲಕ ಮಹತ್ವದ ದತ್ತಾಂಶ ಸಂಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

ಜನಗಣತಿ ಕಾರ್ಯ ಆರಂಭಕ್ಕಾಗಿ ಪ್ರಧಾನಿ ಕಚೇರಿಯಿಂದ ಹಸಿರು ನಿಶಾನೆಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರೀಕ್ಷೆಯಂತೆ, ಮುಂದಿನ ತಿಂಗಳು ಜನಗಣತಿ ಆರಂಭಗೊಂಡಲ್ಲಿ, ಪೂರ್ಣ ಪ್ರಕ್ರಿಯೆ ಮುಗಿಯಲು ಅಂದಾಜು 18 ತಿಂಗಳು ಬೇಕಾಗುತ್ತದೆ ಎಂದು ಈ ವಿಚಾರವಾಗಿ ಮಾಹಿತಿ ಇರುವ ಅಧಿಕೃತ ಎರಡು ಮೂಲಗಳು ಹೇಳಿವೆ.

ವರ್ಷಾಂತ್ಯಕ್ಕೆ ಐದು ರಾಜ್ಯಗಳ ವಿಧಾನಸಭೆ ಗಳಿಗೆ ಚುನಾವಣೆಗಳು ನಡೆಯಲಿವೆ. ಹೀಗಾಗಿ, ದೇಶದಾದ್ಯಂತ ಜನಗಣತಿಯನ್ನು ಹೇಗೆ ನಡೆಸಲಾಗುತ್ತದೆ ಎಂಬ ಬಗ್ಗೆ ಪ್ರಶ್ನೆಗಳೂ ಎದುರಾಗಿವೆ.

ಜನಗಣತಿಯನ್ನು ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಕೋವಿಡ್‌–19 ಪಿಡುಗಿನ ಕಾರಣ 2021ರಲ್ಲಿ ನಡೆದಿರಲಿಲ್ಲ.  

ಕೋವಿಡ್‌–19 ಪಿಡುಗು ಕೊನೆಗೊಂಡು ಸಹಜಸ್ಥಿತಿ ಕಂಡುಬಂದಿದ್ದರೂ ಜನಗಣತಿ ನಡೆಸಲು ಸರ್ಕಾರ ಮುಂದಾಗಿರಲಿಲ್ಲ. ಈ ಕಾರ್ಯ ಆರಂಭಿಸುವಲ್ಲಿ ವಿಳಂಬವಾಗುತ್ತಿರುವ ಕುರಿತು ಹಲವು ಆರ್ಥಿಕ ತಜ್ಞರು ಅಸಮಾಧಾನ–ಟೀಕೆ ಹೊರಹಾಕಿದ್ದರು.

ಸದ್ಯ ಲಭ್ಯವಿರುವ ದತ್ತಾಂಶಗಳು ಹಾಗೂ ಜಾರಿಯಲ್ಲಿರುವ ಯೋಜನೆಗಳನ್ನು 2011ರ ಜನಗಣತಿ ಪ್ರಕಾರ ಇದ್ದ ಜನಸಂಖ್ಯೆಗೆ ಅನುಗುಣವಾಗಿ ರೂಪಿಸಲಾಗಿದೆ. 

‘ಚೀನಾ ಹಿಂದಿಕ್ಕಿದ ಭಾರತ’: ಜನಸಂಖ್ಯೆ ವಿಚಾರದಲ್ಲಿ ಚೀನಾ ಹಿಂದಿಕ್ಕುವ ಮೂಲಕ ಭಾರತ ಜಗತ್ತಿನ ಅತಿಹೆಚ್ಚು ಜನಸಂಖ್ಯಾಬಾಹುಳ್ಯದ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ವಿಶ್ವಸಂಸ್ಥೆ ಕಳೆದ ವರ್ಷ ಬಿಡುಗಡೆ ಮಾಡಿದ್ದ ವರದಿಯಲ್ಲಿ ಹೇಳಿದೆ.

2026ರಲ್ಲಿ ವರದಿ ಬಿಡುಗಡೆ?

ಮುಂದಿನ ತಿಂಗಳು ಆರಂಭಗೊಳ್ಳಲಿದೆ ಎನ್ನಲಾದ ಜನಗಣತಿ ಕಾರ್ಯದ ಮುಂದಾಳತ್ವವನ್ನು ಗೃಹ ಸಚಿವಾಲಯ ಮತ್ತು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ವಹಿಸಿಕೊಂಡಿವೆ.

15 ವರ್ಷಗಳ ಅವಧಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ಕ್ರೋಡೀಕೃತ ವರದಿಯನ್ನು 2026ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಈ ಸಚಿವಾಲಯಗಳು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಗಣತಿ ಕಾರ್ಯ ಆರಂಭ ಹಾಗೂ ಇದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಈ ಎರಡೂ ಸಚಿವಾಲಯಗಳಿಗೆ ಇ–ಮೇಲ್‌ ಕಳುಹಿಸಲಾಗಿತ್ತು. ಆದರೆ, ಅವುಗಳಿಂದ ಪ್ರತಿಕ್ರಿಯೆ ಸಿಗಲಿಲ್ಲ ಎಂದು ರಾಯಿಟರ್ಸ್‌ ಹೇಳಿದೆ.

ಜನಗಣತಿಯ ಹಿನ್ನೋಟ

  • 1872ರಲ್ಲಿ ಮೊದಲ ಜನಗಣತಿ ನಡೆದಿತ್ತು. ಇದಾದ ನಂತರ, ಹತ್ತು ವರ್ಷಗಳಿಗೊಮ್ಮೆಯಂತೆ 15 ಜನಗಣತಿ ನಡೆಸಲಾಗಿದೆ

  • ಸ್ವತಂತ್ರ ಭಾರತದಲ್ಲಿ ಮೊದಲ ಜನಗಣತಿ 1951ರಲ್ಲಿ ನಡೆದಿತ್ತು

  • ಕೊನೆಯ ಜನಗಣತಿ 2011ರಲ್ಲಿ ನಡೆದಿದೆ

  • ಕೋವಿಡ್‌–19 ಪಿಡುಗಿನ ಕಾರಣ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಮುಂದೂಡಲಾಗಿತ್ತು

  • ಸ್ವಾತಂತ್ರ್ಯ ನಂತರ, ಎಸ್‌ಸಿ/ಎಸ್‌ಟಿಗಳನ್ನು ಹೊರತುಪಡಿಸಿ, ಇತರ ಜಾತಿಗಳ ಗಣತಿಯು ಜನಗಣತಿಯ ಭಾಗವಾಗಿಲ್ಲ

  • 1931ರಲ್ಲಿ ಜನಗಣತಿ ವೇಳೆ ನಡೆಸಲಾಗಿದ್ದ ಜಾತಿಗಣತಿಯೇ ಕೊನೆಯದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT