ನವದೆಹಲಿ: ಖಾಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟುರುಗಳ ಕೈವಾಡವಿದೆ ಎಂಬ ಕೆನಡಾ ಸರ್ಕಾರದ ಆರೋಪವನ್ನು ಭಾರತದ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ಈ ಆರೋಪಗಳು ಅಸಂಬದ್ಧ ಮತ್ತು ಪ್ರಚೋದಕಾರಿಯಾಗಿವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ ಮಧ್ಯಾಹ್ನ ನಡೆದ ಕೆನಡಾದ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದ ಪ್ರಧಾನಿ ಜಸ್ಟಿನ್ ಟ್ರೂಡೊ, ‘ಖಾಲಿಸ್ತಾನಿ ಉಗ್ರನ ಹತ್ಯೆಗೆ ಸಂಬಂಧಿಸಿದಂತೆ ಭಾರತದ ಸರ್ಕಾರದ ಏಜೆಂಟರುಗಳ ಕೈವಾಡವಿದೆ ಎಂಬುವುದಕ್ಕೆ ನಮ್ಮ ಸರ್ಕಾರದ ಬಳಿ ಸಾಕ್ಷಿಗಳಿವೆ’ ಎಂದಿದ್ದರು.ಇದರ ಬೆನ್ನಲ್ಲೆ ‘ಭಾರತದ ಹಿರಿಯ ಗುಪ್ತಚರ ಅಧಿಕಾರಿಯನ್ನು ಉಚ್ಚಾಟನೆ ಮಾಡಲಾಗಿದೆ’ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ತಿಳಿಸಿದ್ದರು.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದೆ.
‘ಖಾಲಿಸ್ತಾನಿ ಉಗ್ರನ ಹತ್ಯೆಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಕೆನಡಾದ ಪ್ರಧಾನಿ ಹೇಳಿಕೆಯನ್ನು ಗಮನಿಸಿದ್ದೇವೆ. ಕೆನಡಾದ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಹೇಳಿಕೆಯನ್ನು ನಾವು ತಿರಸ್ಕರಿಸುತ್ತಿದ್ದೇವೆ. ಕೆನಡಾದಲ್ಲಿ ನಡೆದ ಯಾವುದೇ ಹಿಂಸಾಚಾರದಲ್ಲಿ ಭಾರತದ ಪಾತ್ರವಿದೆ ಎಂಬ ಆರೋಪವು ಅಸಂಬದ್ಧ ಮತ್ತು ಪ್ರಚೋದನಕಾರಿಯಾಗಿದೆ. ಭಾರತವು ಕಾನೂನಿನ ಮೇಲೆ ಬಲವಾದ ನಂಬಿಕೆಯನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ’ ಎಂದು ತಿಳಿಸಿದೆ.
‘ಇಂತಹ ಆಧಾರರಹಿತ ಆರೋಪಗಳು ಕೆನಡಾದಲ್ಲಿ ಆಶ್ರಯ ಪಡೆದಿರುವ ಮತ್ತು ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಖಾಲಿಸ್ತಾನಿ ಭಯೋತ್ಪಾದಕರ ಗಮನವನ್ನು ಬೇರೆಡೆ ಸೆಳೆಯುವ ಸಾಧ್ಯತೆಯಿದೆ. ಉಗ್ರಗಾಮಿಗಳ ವಿಷಯದಲ್ಲಿ ಕೆನಡಾ ಸರ್ಕಾರದ ಮೌನ ಆತಂಕಾರಿಯಾಗಿದೆ. ಕೆನಡಾದ ರಾಜಕೀಯ ವ್ಯಕ್ತಿಗಳು ಭಯೋತ್ಪಾದಕರ ಮೇಲೆ ಬಹಿರಂಗವಾಗಿ ಸಹಾನುಭೂತಿ ತೋರುತ್ತಿರುವುದು ಕೂಡ ಆಘಾತಕಾರಿಯಾಗಿದೆ. ಕೊಲೆ, ಮಾನವ ಕಳ್ಳಸಾಗಣೆ ಸೇರಿದಂತೆ ಹಲವಾರು ಕಾನೂನುಬಾಹಿರ ಚಟುವಟಿಕೆಗಳಿಗೆ ಕೆನಡಾದಲ್ಲಿ ಜಾಗ ನೀಡುತ್ತಿರುವ ವಿಷಯ ಹೊಸದೇನಲ್ಲ. ಇಂತಹ ವಿಚಾರಗಳಿಗೆ ಭಾರತ ಸರ್ಕಾರವನ್ನು ಸಿಲುಕಿಸುವುದನ್ನು ನಾವು ಖಂಡಿಸುತ್ತೇವೆ. ಭಾರತ ವಿರೋಧಿ ಕ್ರಮಗಳ ವಿರುದ್ಧ ತ್ವರಿತ ಮತ್ತು ಪರಿಣಾಮಕಾರಿ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ನಾವು ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ತಿಳಿಸಿದೆ.
ಓದಿ: ಕೆನಡಾ: ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಗುಂಡಿಕ್ಕಿ ಹತ್ಯೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.