ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಹಫೀಜ್ ಸಯೀದ್ ಹಸ್ತಾಂತರಕ್ಕೆ ಪಾಕ್‌ಗೆ ಮನವಿ ಸಲ್ಲಿಸಲಾಗಿದೆ: ಬಾಗ್ಚಿ

Published 29 ಡಿಸೆಂಬರ್ 2023, 11:27 IST
Last Updated 29 ಡಿಸೆಂಬರ್ 2023, 11:27 IST
ಅಕ್ಷರ ಗಾತ್ರ

ನವದೆಹಲಿ: ಲಷ್ಕರ್ ಇ ತಯಬಾ ಮುಖ್ಯಸ್ಥ(ಎಲ್‌ಇಟಿ) ಹಾಗೂ 26/11 ಮುಂಬೈ ದಾಳಿ ಸೇರಿ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾರತಕ್ಕೆ ಬೇಕಾಗಿರುವ ಉಗ್ರ, ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಭಾರತ, ಪಾಕಿಸ್ತಾನವನ್ನು ಒತ್ತಾಯಿಸಿದೆ.

ಹಸ್ತಾಂತರ ಮನವಿ ಜೊತೆಗೆ ಕೆಲವು ಅಗತ್ಯ ದಾಖಲೆ ಪತ್ರಗಳನ್ನೂ ಸಹ ಪಾಕಿಸ್ತಾನಕ್ಕೆ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

‘ಹಫೀಜ್‌ ಪುತ್ರ ತಲ್ಹಾ ಸಯೀದ್ ಪಾಕಿಸ್ತಾನದ ಸಂಸತ್‌ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂಬ ವರದಿಗಳನ್ನು ಭಾರತ ಗಮನಿಸಿದೆ. ಅದು ಆ ದೇಶದ ಆಂತರಿಕ ವಿಚಾರ. ಆ ದೇಶದಲ್ಲಿ ಭಯೋತ್ಪಾದಕ ಸಂಘಟನೆಗಳು ಮುಖ್ಯವಾಹಿನಿಯಲ್ಲಿರುವುದು ಹೊಸದೇನಲ್ಲ ಮತ್ತು ಅದು ಅಲ್ಲಿ ದೀರ್ಘಾವಧಿಯಿಂದಲೂ ರಾಷ್ಟ್ರದ ನೀತಿಯಾಗಿದೆ’ ಎಂದು ಬಾಗ್ಚಿ ಹೇಳಿದರು.

‘ಇಂತಹ ಬೆಳವಣಿಗೆಗಳು ಪ್ರಾದೇಶಿಕ ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ನಮ್ಮ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಎಲ್ಲ ಬೆಳವಣಿಗೆಗಳ ಮೇಲೆ ನಾವು ನಿಗಾ ಇಡುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ತಿಳಿಸಿದರು.

ನಿಷೇಧಿತ ಸಂಘಟನೆ ಎಲ್‌ಇಟಿಯಲ್ಲಿ ಹಫೀಜ್‌ ನಂತರದ ಸ್ಥಾನದಲ್ಲಿ ಆತನ ಪುತ್ರ ತಲ್ಹಾ ಸಯೀದ್‌ ಇದ್ದು, ಸಂಘಟನೆಯ ಚಟುವಟಿಕೆ ನಿಭಾಯಿಸುತ್ತಿದ್ದಾನೆ. 

ಹಫೀಜ್ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿರುವ ಅಮೆರಿಕ, ಅವನ ಬಗ್ಗೆ ಸುಳಿವು ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.

ಭಯೋತ್ಪಾದಕ ಹಫೀಜ್ ಸಯೀದ್ ಬೆಂಬಲಿತ ಪಕ್ಷವು ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ನಡೆಯಲಿರುವ ನ್ಯಾಷನಲ್ ಅಸೆಂಬ್ಲಿ ಮತ್ತು ಪ್ರಾದೇಶಿಕ ಶಾಸನ ಸಭೆಗಳ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದಡಿ ಹಫೀಜ್ ಸಯೀದ್‌ಗೆ ಹಲವು ವರ್ಷಗಳ ಜೈಲು ಶಿಕ್ಷೆಯಾಗಿದ್ದು, 2019ರಿಂದಲೂ ಜೈಲಿನಲ್ಲೇ ಇದ್ದಾನೆ.

ಪಾಕಿಸ್ತಾನ ಮರ್ಕಾಜಿ ಮುಸ್ಲಿಂ ಲೀಗ್‌(ಪಿಎಂಎಂಎಲ್) ರಾಜಕೀಯ ಪಕ್ಷವನ್ನು ಹಫೀಜ್ ಸಯೀದ್ ಸ್ಥಾಪಿಸಿದ್ದು, ಪಕ್ಷದ ಚಿಹ್ನೆಯಾಗಿ ಕುರ್ಚಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಹಫೀಜ್ ಸಯೀದ್ ಮಗ ತಲ್ಹಾ ಸಯೀದ್, ಲಾಹೋರ್‌ನ ಎನ್‌ಎ–127 ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT