ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೈಸರ್ಗಿಕ ಅನಿಲ: 6 ವರ್ಷದಲ್ಲಿ ₹5.57 ಲಕ್ಷ ಕೋಟಿ ಹೂಡಿಕೆ: ಪ್ರಧಾನಿ ಮೋದಿ

‘ಇಂಡಿಯಾ ಎನರ್ಜಿ ವೀಕ್‌’ನಲ್ಲಿ ಪ್ರಧಾನಿ ಹೇಳಿಕೆ
Published 6 ಫೆಬ್ರುವರಿ 2024, 15:47 IST
Last Updated 6 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ಬೆತುಲ್‌: ದೇಶೀಯವಾಗಿ ನೈಸರ್ಗಿಕ ಅನಿಲ ಉತ್ಪಾದನೆಯನ್ನು ಹೆಚ್ಚಿಸಲು ಭಾರತವು ಮುಂದಿನ ಐದರಿಂದ ಆರು ವರ್ಷಗಳಲ್ಲಿ ಸುಮಾರು ₹5.57 ಲಕ್ಷ ಕೋಟಿಯನ್ನು ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

‘ಇಂಡಿಯಾ ಎನರ್ಜಿ ವೀಕ್‌’ನಲ್ಲಿ ಮಾತನಾಡಿದ ಅವರು, ಸರ್ಕಾರ ಕೈಗೊಂಡಿರುವ ಸುಧಾರಣೆಗಳಿಂದಾಗಿ ದೇಶೀಯ ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಏರಿಕೆಯಾಗಿದೆ. ದೇಶದ ಒಟ್ಟಾರೆ ಇಂಧನದಲ್ಲಿ ನೈಸರ್ಗಿಕ ಅನಿಲದ ಪಾಲು ಶೇ 6.3ರಷ್ಟಿದೆ. ಅದನ್ನು 2030ರ ವೇಳೆಗೆ ಶೇ 15ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

2070ರ ವೇಳೆಗೆ ದೇಶದಲ್ಲಿ ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದನ್ನು ಸಾಧಿಸಲು ಭಾರತವು ನೈಸರ್ಗಿಕ ಅನಿಲ ಉತ್ಪಾದನೆಗೆ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.

ವಿದ್ಯುತ್‌ ಉತ್ಪಾದನೆ, ರಸಗೊಬ್ಬರ ತಯಾರಿಕೆ, ವಾಹನಗಳನ್ನು ಓಡಿಸಲು, ಅಡುಗೆಗಾಗಿ ನೈಸರ್ಗಿಕ ಅನಿಲವನ್ನು ಬಳಸಬಹುದಾಗಿದೆ. ಇದು ಇತರ ಇಂಧನಗಳಿಗಿಂತ ಕಡಿಮೆ ಮಾಲಿನ್ಯಕಾರವೂ ಆಗಿರುವುದರಿಂದ, ಕೇಂದ್ರ ಹೆಚ್ಚಿನ ಒಲವು ಹೊಂದಿದೆ ಎಂದರು.

ಎಥೆನಾಲ್‌ ಬಳಕೆಗೆ ಉತ್ತೇಜನ:

ಭಾರತವು ಜೈವಿಕ ಇಂಧನ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಪೆಟ್ರೋಲ್‌ನಲ್ಲಿ ಎಥೆನಾಲ್‌ ಮಿಶ್ರಣಕ್ಕೆ ಉತ್ತೇಜನ ನೀಡುತ್ತಿದೆ. 2014ರಲ್ಲಿ ಶೇ 1.5ರಷ್ಟಿದ್ದ ಮಿಶ್ರಣವನ್ನು ಶೇ 12ಕ್ಕೆ ಏರಿಸಲಾಗಿದೆ. ಜಗತ್ತಿನ ಶೇ 17ರಷ್ಟು ಜನಸಂಖ್ಯೆಯನ್ನು ಭಾರತ ಹೊಂದಿದ್ದರೂ, ದೇಶದ ಇಂಗಾಲ ಹೊರಸೂಸುವಿಕೆ ಪಾಲು ಶೇ 4ರಷ್ಟಿದೆ ಎಂದು ಪ್ರಧಾನಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT