ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ನಾಯಕತ್ವ ಒದಗಿಸಲು ಯುವ ಪೀಳಿಗೆ ಸಿದ್ಧವಾಗಲಿ: ಪ್ರಧಾನಿ ನರೇಂದ್ರ ಮೋದಿ

Published 11 ಡಿಸೆಂಬರ್ 2023, 13:33 IST
Last Updated 11 ಡಿಸೆಂಬರ್ 2023, 13:33 IST
ಅಕ್ಷರ ಗಾತ್ರ

ನವದೆಹಲಿ: ಯುವ ಪೀಳಿಗೆ ದೇಶಕ್ಕೆ ನಾಯಕತ್ವ ಒದಗಿಸಲು ಸಿದ್ಧವಾಗಬೇಕು. ಜೊತೆಗೆ, ಯಾವುದೇ ವಿಚಾರಕ್ಕಿಂತಲೂ ರಾಷ್ಟ್ರೀಯ ಹಿತಾಸಕ್ತಿಯೇ ಅವರ ಆದ್ಯತೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.

‘ಸದ್ಯದ ಅವಧಿಯು ಭಾರತದ ಪಾಲಿಗೆ ಅಮೃತ ಕಾಲ. ಇಂತಹ ಮಹತ್ವದ ಅವಧಿಯಲ್ಲಿಯೇ ದೇಶವೊಂದು ಸರ್ವಾಂಗೀಣ ಪ್ರಗತಿಯತ್ತ ಹೆಜ್ಜೆ ಹಾಕುವ ಅವಕಾಶ ಸಿಗುತ್ತದೆ. ಅಂತಹ ಅದ್ಭುತ ಅವಕಾಶ ಈಗ ಭಾರತಕ್ಕೆ ಬಂದೊದಗಿದೆ’ ಎಂದು ಮೋದಿ ಪ್ರತಿಪಾದಿಸಿದರು.

‘ವಿಕಸಿತ ಭಾರತ@2047:ಯುವ ಜನತೆಯ ಧ್ವನಿ’ ಎಂಬ ಉಪಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘2047ರ ವೇಳೆಗೆ ಭಾರತ ಯಾವ ರೀತಿ ಅಭಿವೃದ್ಧಿ ಸಾಧಿಸಿರಬೇಕು ಎಂಬ ಕುರಿತು ದೇಶದ ಯುವ ಜನತೆ ತಮ್ಮ ವಿಚಾರಗಳನ್ನು ಮಂಡಿಸಲು ಈ ಉಪಕ್ರಮವು ವೇದಿಕೆಯನ್ನು ಒದಗಿಸುತ್ತದೆ’ ಎಂದು ಹೇಳಿದ ಅವರು, ‘ದೇಶದ ಯುವ ಜನತೆಯು ‘ಬದಲಾವಣೆಯ ಪ್ರತಿನಿಧಿ’ ಹಾಗೂ ‘ಬದಲಾವಣೆಯ ಫಲಾನುಭವಿ’ಯಾಗುವ ಶಕ್ತಿ ಹೊಂದಿದ್ದಾರೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯಗಳಲ್ಲಿರುವ ರಾಜಭವನಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯಗಳ ಕುಲಪತಿಗಳು, ಶಿಕ್ಷಣ ಸಂಸ್ಥೆಗಳು ಮುಖ್ಯಸ್ಥರು ಹಾಗೂ ಬೋಧಕ ಸಿಬ್ಬಂದಿಯನ್ನು ಉದ್ಧೇಶಿಸಿ ಅವರು ವರ್ಚುವಲ್‌ ಆಗಿ ಮಾತನಾಡಿದರು.

‘ನಾವು ಎದುರಿಸಬೇಕಾದ ಪರೀಕ್ಷೆಯ ದಿನಾಂಕವನ್ನು ಘೋಷಿಸಿಯಾಗಿದೆ. ನಮ್ಮ ಮುಂದೆ ಅಮೃತ ಕಾಲದ 25 ವರ್ಷಗಳೂ ಇವೆ. ಈ ಅವಧಿಯಲ್ಲಿ ದಿನದ 24 ಗಂಟೆಯೂ ನಾವು ಕಾರ್ಯ ನಿರ್ವಹಿಸಬೇಕು. ದೇಶಕ್ಕೆ ನಾಯಕತ್ವ ಒದಗಿಸುವಂತಹ ಹಾಗೂ ಅವರ ಆದ್ಯತೆಯು ರಾಷ್ಟ್ರೀಯ ಹಿತಾಸಕ್ತಿಯೇ ಆಗಿರುವಂತಹ ಯುವ ಸಮುದಾಯವನ್ನು ಸಿದ್ಧಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

‘ದೇಶದಲ್ಲಿ ಯುವ ಜನತೆಯ ಸಂಖ್ಯೆ ದೊಡ್ಡದಿದೆ. ಅದರಲ್ಲೂ, 25–30 ವರ್ಷ ವಯೋಮಾನವನ್ನು ದುಡಿಯುವ ವಯಸ್ಸು ಎಂದು ವಿಶ್ವ ಮಟ್ಟದಲ್ಲಿ ಗುರುತಿಸಲಾಗುತ್ತದೆ. ಈ ವಿಚಾರದಲ್ಲಿಯೂ ಭಾರತವು ಮುಂದಾಳತ್ವ ವಹಿಸಲಿದೆ’ ಎಂದರು.

‌ ಮೋದಿ ಭಾಷಣದ ಪ್ರಮುಖ ಅಂಶಗಳು

  • ದೇಶದ ಅಭಿವೃದ್ಧಿಗಾಗಿ ರೂಪಿಸಿದ ಕಾರ್ಯಯೋಜನೆ ಹಾಗೂ ಯುವ ಜನತೆ ಮಧ್ಯೆ ಸಂಪರ್ಕ ಬೆಳೆಸಬೇಕು. ಈ ವಿಚಾರವಾಗಿ ವಿಶ್ವವಿದ್ಯಾಲಯಗಳು ಹಾಗೂ ಬೋಧಕರು ಚಿಂತನೆ ನಡೆಸಬೇಕು

  • ಶಿಕ್ಷಣ ಸಂಸ್ಥೆಗಳು ಯುವ ಜನತೆ ಜೊತೆ ಹೆಚ್ಚು ಸಂಪರ್ಕ ಹೊಂದಿರುತ್ತವೆ. ಹೀಗಾಗಿ ದೇಶದ ಅಭಿವೃದ್ಧಿಗಾಗಿ ಅವರ ಆಲೋಚನೆಗಳಿಗೆ ರೂಪ ಕೊಡುವ ಕೆಲಸ ಶಿಕ್ಷಣ ಸಂಸ್ಥೆಗಳಿಂದಾಗಬೇಕು

  • ಸಾರ್ವಜನಿಕ ಸಹಭಾಗಿತ್ವದಿಂದ ದೊಡ್ಡ ಕಾರ್ಯಗಳನ್ನು ಸುಲಭವಾಗಿ ಸಾಧಿಸಬಹುದು. ಸ್ವಚ್ಛ ಭಾರತ ಅಭಿಯಾನ ಡಿಜಿಟಲ್‌ ಇಂಡಿಯಾ ಕೋವಿಡ್‌ ಪಿಡುಗನ್ನು ದೇಶ ಗೆದ್ದಿರುವುದು ಇದಕ್ಕೆ ನಿದರ್ಶನ‌

  • ‘ವಿಕಸಿತ ಭಾರತ@2047:ಯುವ ಜನತೆಯ ಧ್ವನಿ’ ಉಪಕ್ರಮವು ದೇಶದ ಆರ್ಥಿಕ ಪ್ರಗತಿ ಸಾಮಾಜಿಕ ಪ್ರಗತಿ ಸುಸ್ಥಿರ ಪರಿಸರ ಹಾಗೂ ಉತ್ತಮ ಆಡಳಿತದಂತಹ ಅಂಶಗಳನ್ನು ಒಳಗೊಂಡಿದೆ

ಸಲಹೆಗಳಿಗೆ ಆಹ್ವಾನ

  • ಈ ಉಪಕ್ರಮ ಕುರಿತು ದೇಶದ ಪ್ರತಿಯೊಂದು ಕಾಲೇಜು ಹಾಗೂ ವಿಶ್ವವಿದ್ಯಾಲಯ ವಿಶೇಷ ಪ್ರಚಾರೋಂದಲನ ನಡೆಸಬೇಕು

  • ವಿಕಸಿತ ಭಾರತ ಉಪಕ್ರಮದ ಪೋರ್ಟಲ್‌ನಲ್ಲಿ ಯುವ ಜನತೆ ತಮ್ಮ ವಿಚಾರಗಳನ್ನು ಸಲಹೆ–ಸೂಚನೆಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಬೇಕು

  • ಐದು ಬೇರೆ ಬೇರೆ ವಿಷಯಗಳು ಕುರಿತು ಸಲಹೆಗಳು/ವಿಚಾರಗಳನ್ನು ಹಂಚಿಕೊಳ್ಳಬೇಕು

  • ಆಯ್ದ 10 ಅತ್ಯುತ್ತಮ ಸಲಹೆಗಳಿಗೆ ಬಹುಮಾನ ನೀಡಲಾಗುತ್ತದೆ

  • MyGov ಪೋರ್ಟಲ್‌ ಮೂಲಕವೂ ಯುವ ಸಮುದಾಯ ತಮ್ಮ ಸಲಹೆಗಳನ್ನು ನೀಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT