ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗುಗಳ ಮೇಲೆ ದಾಳಿ: ಭಾರತೀಯ ನೌಕಾಪಡೆ ಕಣ್ಗಾವಲು ಹೆಚ್ಚಳ

Published 31 ಡಿಸೆಂಬರ್ 2023, 16:08 IST
Last Updated 31 ಡಿಸೆಂಬರ್ 2023, 16:08 IST
ಅಕ್ಷರ ಗಾತ್ರ

ನವದೆಹಲಿ: ಸರಕು ಸಾಗಣೆ ಹಡಗುಗಳ ಮೇಲೆ ಈಚೆಗೆ ನಡೆದ ದಾಳಿಯ ಕಾರಣದಿಂದ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರ ಮತ್ತು ಏಡನ್‌ ಕೊಲ್ಲಿಯಲ್ಲಿ ಯುದ್ಧನೌಕೆಗಳನ್ನು ನಿಯೋಜಿಸಿ ಕಣ್ಗಾವಲು ಗಣನೀಯವಾಗಿ ಹೆಚ್ಚಿಸಿದೆ. 

ವಿಶಾಲ ವ್ಯಾಪ್ತಿಯ ಕಣ್ಗಾವಲಿಗೆ ಗಸ್ತು ವಿಮಾನ ಮತ್ತು ಡ್ರೋನ್‌ಗಳನ್ನು ನಿಯೋಜಿಸಿದ್ದು, ಕರಾವಳಿ ಕಾವಲು ಪಡೆಗಳ ಜತೆ ಸಮನ್ವಯ ಸಾಧಿಸಿ ಒಟ್ಟಾರೆ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ.

‘ಕಳೆದ ಕೆಲವು ವಾರಗಳಲ್ಲಿ ಕೆಂಪು ಸಮುದ್ರ, ಏಡನ್ ಕೊಲ್ಲಿ ಮತ್ತು ಮಧ್ಯ/ಉತ್ತರ ಅರಬ್ಬಿ ಸಮುದ್ರದಲ್ಲಿ ಅಂತರರಾಷ್ಟ್ರೀಯ ಹಡಗು ಮಾರ್ಗಗಳ ಮೂಲಕ ಸಾಗುವ ಸರಕು ಸಾಗಣೆ ಹಡಗುಗಳ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿವೆ’ ಎಂದು ನೌಕಾಪಡೆ ಪ್ರಕಟಣೆ ತಿಳಿಸಿದೆ.

‘ಹೀಗಾಗಿ, ಯುದ್ಧನೌಕೆಗಳನ್ನು ಒಳಗೊಂಡ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ಸರಕು ಸಾಗಣೆ ಹಡಗುಗಳ ಮೇಲೆ ಯಾವುದೇ ದಾಳಿ ನಡೆದರೆ ತಕ್ಷಣವೇ ನೆರವಿಗೆ ಧಾವಿಸುವಂತೆ ಸೂಚಿಸಲಾಗಿದೆ. ಹಡಗುಗಳ ಸುರಕ್ಷತೆ ಖಾತರಿಪಡಿಸಿಕೊಳ್ಳಲು ನೌಕಾಪಡೆ ಬದ್ಧವಾಗಿದೆ’ ಎಂದು ಹೇಳಿದೆ.

ಸೌದಿ ಅರೇಬಿಯಾದಿಂದ ಮಂಗಳೂರಿಗೆ ಕಚ್ಚಾ ತೈಲ ಸಾಗಿಸುತ್ತಿದ್ದ ಎಂವಿ ಚೆಮ್‌ ಪ್ಲುಟೊ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ಡಿ.23ರಂದು ಡ್ರೋನ್‌ ದಾಳಿ ನಡೆದಿತ್ತು. ಭಾರತಕ್ಕೆ ಬರುತ್ತಿದ್ದ ಎಂವಿ ಸಾಯಿಬಾಬಾ ಹಡಗನ್ನು ಗುರಿಯಾಗಿಸಿ ದಕ್ಷಿಣ ಕೆಂಪು ಸಮುದ್ರದಲ್ಲಿ ಹುತಿ ಬಂಡುಕೋರರು ದಾಳಿ ನಡೆಸಿದ್ದರು. 

ಇಸ್ರೇಲ್-ಹಮಾಸ್ ಸಂಘರ್ಷ ಶುರುವಾದ ಬಳಿಕ ಇರಾನ್ ಬೆಂಬಲಿತ ಹುತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT