ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೋಕ್ಸಿ ‍ಪೌರತ್ವ: ಆಕ್ಷೇಪಿಸದ ಭಾರತ

ವಿದೇಶಾಂಗ ಸಚಿವಾಲಯ ವ್ಯತಿರಿಕ್ತ ಮಾಹಿತಿ ನೀಡಿಲ್ಲ: ಆ್ಯಂಟಿಗುವಾ
Last Updated 3 ಆಗಸ್ಟ್ 2018, 17:46 IST
ಅಕ್ಷರ ಗಾತ್ರ

ನವದೆಹಲಿ: ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿಗೆ 2017ರಲ್ಲಿ ಆ್ಯಂಟಿಗುವಾ ‍ಪೌರತ್ವ ನೀಡುವ ಸಂದರ್ಭದಲ್ಲಿ ಭಾರತ‌ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎನ್ನುವುದು ವರದಿಯಾಗಿದೆ.

ಚೋಕ್ಸಿ ಅವರ ಪೌರತ್ವ ಅರ್ಜಿ ಜತೆ ಸ್ಥಳೀಯ ಪೊಲೀಸರಿಂದ ಅನುಮೋದನೆ ಪಡೆದ ಪ್ರಮಾಣಪತ್ರವನ್ನು ನಿಯಮಾವಳಿಗಳ ಅನ್ವಯ ಲಗತ್ತಿಸಲಾಗಿತ್ತು. ಈ ಪ್ರಮಾಣಪತ್ರವನ್ನು ವಿದೇಶಾಂಗ ಇಲಾಖೆಯ ಮುಂಬೈನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಸಹ ದೃಢೀಕರಿಸಿತ್ತು. ಆದರೆ, ಯಾವುದೇ ರೀತಿಯ ವ್ಯತಿರಿಕ್ತಮಾಹಿತಿ ನೀಡಿರಲಿಲ್ಲ ಎಂದು ಆ್ಯಂಟಿಗುವಾದ ‘ದಿ ಡೇಲಿ ಅಬ್ಸರ್ವರ್‌’ ವರದಿ ಮಾಡಿದೆ.

ಒಂದು ವೇಳೆ, ವ್ಯತಿರಿಕ್ತ ವರದಿ ನೀಡಿದ್ದರೆ ಚೋಕ್ಸಿಗೆ ಆ್ಯಂಟಿಗುವಾ ಮತ್ತು ಬರ‍್ಬುದಾ ಸೇರಿದಂತೆವಿದೇಶಕ್ಕೆ ಪ್ರಯಾಣ ಮಾಡುವ ಅವಕಾಶ ದೊರೆಯುತ್ತಿರಲಿಲ್ಲ ಎಂದು ತಿಳಿಸಿದೆ.

ಚೋಕ್ಸಿ ಕುರಿತು ಆ್ಯಂಟಿಗುವಾದ ಅಧಿಕಾರಿಗಳು ಸಹ ಇಂಟರ್‌ಪೋಲ್‌ ಸೇರಿದಂತೆ ಹಲವು ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಿದ್ದರು.‌

ಪೌರತ್ವದ ಅರ್ಜಿಗೆ ಅನುಮೋದನೆ ನೀಡುವ ಪ್ರಕ್ರಿಯೆ ಸಂದರ್ಭದಲ್ಲಿ ಚೋಕ್ಸಿ ವಿರುದ್ಧ ವಾರಂಟ್‌ ಜಾರಿಯಾಗಿದ್ದರೆ ಇಂಟರ್‌ಪೋಲ್‌ಗೆ ಮಾಹಿತಿ ನೀಡಬೇಕಾಗಿತ್ತು. ಇದರಿಂದ ಆ ಮಾಹಿತಿಯು ರಾಷ್ಟ್ರೀಯ ಅಪರಾಧ ದತ್ತಾಂಶದಲ್ಲಿ ಸೇರುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ಚೋಕ್ಸಿ, ಈಗ ಆ್ಯಂಟಿಗುವಾದಲ್ಲಿ ನೆಲೆಸಿದ್ದಾರೆ. ಜನವರಿ 4ರಂದು ಭಾರತದಿಂದ ಪರಾರಿಯಾದ ಚೋಕ್ಸಿಗೆ ಕಳೆದವರ್ಷದ ನವೆಂಬರ್‌ನಲ್ಲಿ ಪೌರತ್ವ ನೀಡಲಾಗಿದೆ.

‘ಸಾಕ್ಷ್ಯಾಧಾರಗಳ ಕೊರತೆ ಎಂದಿದ್ದ ಸೆಬಿ’
ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) 2014 ಮತ್ತು 2017ರಲ್ಲಿ ಚೋಕ್ಸಿ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಆ್ಯಂಟಿಗುವಾದ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸೆಬಿ, ಒಂದು ಪ್ರಕರಣವನ್ನು ’ತೃಪ್ತಿಕರವಾಗಿ ಮುಕ್ತಾಯಗೊಳಿಸಲಾಗಿದೆ’. ಇನ್ನೊಂದು ಪ್ರಕರಣಕ್ಕೆ ’ ಸಾಕ್ಷ್ಯಾಧಾರಗಳ ಕೊರತೆ ಇದೆ’ ಎಂದು ತಿಳಿಸಿತ್ತು.

‘ಮೋದಿ ಸರ್ಕಾರ ಶಾಮೀಲು’
ಮೆಹುಲ್‌ ಚೋಕ್ಸಿ ವಿದೇಶಕ್ಕೆ ಪರಾರಿಯಾಗುವಲ್ಲಿ ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರವೂ ಶಾಮೀಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಆ್ಯಂಟಿಗುವಾದಿಂದ ದೊರೆತಿರುವ ಅಘಾತಕಾರಿ ಮಾಹಿತಿಯಿಂದ ಚೋಕ್ಸಿಗೆ ಮೋದಿ ಸರ್ಕಾರ ಪರೋಕ್ಷ ಸಮ್ಮತಿ ನೀಡಿರುವುದು ಸಾಬೀತಾಗಿದೆ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ತಿಳಿಸಿದ್ದಾರೆ.

‘ಲೂಟಿ ಮಾಡಿ ಪರಾರಿಯಾಗುವಂತೆ ನೋಡಿಕೊಳ್ಳುವುದು ಮೋದಿ ಸರ್ಕಾರದ ಪ್ರಮುಖ ನೀತಿಯಾಗಿದೆ. ಈ ಮೆಗಾ ಹಗರಣವನ್ನು ಮೋದಿ ಸರ್ಕಾರ ಹೇಗೆ ಮಾಡಿದೆ ಎನ್ನುವುದನ್ನು ಆ್ಯಂಟಿಗುವಾದಿಂದ ಬಹಿರಂಗವಾಗಿದೆ’ ಎಂದು ದೂರಿದ್ದಾರೆ.

’ಚೋಕ್ಸಿ ವಿರುದ್ಧ ದೂರುಗಳಿದ್ದರೂ ವಿದೇಶಾಂಗ ಇಲಾಖೆ ಯಾವ ಕಾರಣಕ್ಕೆ ಕ್ಲೀನ್‌ಚಿಟ್‌ ನೀಡಿದೆ?. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಚೋಕ್ಸಿ ವಿರುದ್ಧ ವಾರಂಟ್‌ಗಾಗಿ ಇಂಟರ್‌ಪೋಲ್‌ ಅನ್ನು ಏಕೆ ಸಂಪರ್ಕಿಸಲಿಲ್ಲ? ಇಂಟರ್‌ಪೋಲ್‌ಗೆ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಈ ಸಂಸ್ಥೆಗಳು ವಿಫಲವಾಗಿಲ್ಲವೇ? ಪ್ರಧಾನಿ ಕಚೇರಿಯು ಯಾವುದೇ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ನೀರವ್‌ ಮೋದಿ ಹಸ್ತಾಂತರಿಸಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿಯನ್ನು ನಮಗೆ ಹಸ್ತಾಂತರಿಸಿ ಎಂದು ಭಾರತ ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT