ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಗೊ ಗಗನಸಖಿಯರ ಭವ್ಯ ಸ್ವಾಗತಕ್ಕೆ ಇಸ್ರೊ ಅಧ್ಯಕ್ಷ ಸೋಮನಾಥ್ ಮುಗುಳ್ನಗೆ

Published 31 ಆಗಸ್ಟ್ 2023, 12:57 IST
Last Updated 31 ಆಗಸ್ಟ್ 2023, 12:57 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–3ರ ಯಶಸ್ವಿ ನಂತರ ಪ್ರಯಾಣಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಇಂಡಿಗೊ ವಿಮಾನದ ಗಗನ ಸಖಿಯರು ಭರ್ಜರಿ ಸ್ವಾಗತ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಚಂದ್ರಯಾನ–3 ಲ್ಯಾಂಡರ್‌ ವಿಕ್ರಮ್‌ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ನಂತರ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಂಸೆಗೆ ಸೋಮನಾಥ್ ಹಾಗೂ ಅವರ ತಂಡ ಪಾತ್ರರಾಗಿದೆ. ಹೀಗಾಗಿ ಅವರು ಎಲ್ಲಿಯೇ ಹೋದರೂ ಅಲ್ಲಿ ಅದ್ಭುತ ಸ್ವಾಗತ, ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಇತ್ತೀಚೆಗೆ ಇಂಡಿಗೊ ವಿಮಾನ ಮೂಲಕ ಸಂಚರಿಸಿದ ಅವರು, ವಿಮಾನ ಪ್ರವೇಶಿಸುತ್ತಿದ್ದಂತೆ ಕ್ಯಾಬಿನ್ ಸಿಬ್ಬಂದಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಸೋಮನಾಥ್ ಅವರು ಪ್ರವೇಶಿಸುತ್ತಿದ್ದಂತೆ ಅವರನ್ನು ಸಂಭ್ರಮದಿಂದ ಸ್ವಾಗತಿಸಿದ ಗಗನಸಖಿಯರು, ಅವರನ್ನು ಆಸನದಲ್ಲಿ ಕೂರಿಸಿದರು. ನಂತರ ‘ನಮ್ಮ ರಾಷ್ಟ್ರೀಯ ಹೀರೊ’ಗೆ ನಮ್ಮ ಈ ವಿಮಾನದಲ್ಲಿ ಭವ್ಯ ಸ್ವಾಗತ. ಅವರನ್ನು ಕರತಾಡನದ ಮೂಲಕ ಎಲ್ಲರೂ ಸ್ವಾಗತಿಸೋಣ ಎಂದರು. ಹೀಗನ್ನುತ್ತಿದ್ದಂತೆ ವಿಮಾನದಲ್ಲಿದ್ದವರು ಕುತೂಹಲದಿಂದ ಸೋಮನಾಥ್ ಅವರತ್ತ ಕಣ್ಣು ಹಾಯಿಸಿ ಚಪ್ಪಾಳೆಯ ಮಳೆಗರೆದರು. 

‘ನಮ್ಮೊಂದಿಗೆ ನೀವು ಇಂದು ಪ್ರಯಾಣಿಸುತ್ತಿರುವುದೇ ಹೆಮ್ಮೆಯ ಸಂಗತಿ. ಭಾರತವನ್ನು ಹೆಮ್ಮೆಯ ರಾಷ್ಟ್ರವನ್ನಾಗಿಸಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಗಗನಸಖಿ ಸಂತಸ ವ್ಯಕ್ತಪಡಿಸಿದರು. 

ಹೀಗನ್ನುತ್ತಿದ್ದಂತೆ ಮತ್ತೊಬ್ಬ ಗಗನ ಸಖಿ ಅವರಿಗೆ ಕೆಲವೊಂದು ಉಡುಗೊರೆಗಳು ಮತ್ತು ತಮ್ಮ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಧನ್ಯವಾದ ತಿಳಿಸುವ ಪತ್ರವನ್ನು ನೀಡಿ ಸಂತಸ ವ್ಯಕ್ತಪಡಿಸಿದರು. ಈ ಅನಿರೀಕ್ಷಿತ ಸ್ವಾಗತ ಹಾಗೂ ಉಡುಗೊರೆಯನ್ನು ಮುಗುಳ್ನಗೆಯ ಮೂಲಕ ಸೋಮನಾಥ್ ಸ್ವೀಕರಿಸಿದರು. ಈ ಕುರಿತ ವಿಡಿಯೊವನ್ನು ಗಗನಸಖಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

ಗಗನಸಖಿಯ ವಿಡಿಯೊಗೆ ಪ್ರತಿಕ್ರಿಯಿಸಿರುವ ಒಬ್ಬರು, ‘ನಮ್ಮ ಅಧ್ಯಕ್ಷರಿಗೆ ಇಂಥ ಸ್ವಾಗತ ನೀಡಿದ್ದು ಸಂತಸ ತರಿಸಿದೆ. ಇಸ್ರೊ ಮೇಲಿನ ನಿಮ್ಮ ಪ್ರೀತಿಗೆ ಧನ್ಯವಾದಗಳು’ ಎಂದಿದ್ದಾರೆ.

‘ಇದೊಂದು ಅವಿಸ್ಮರಣೀಯ ಗಳಿಗೆ. ಇಂಥ ಶ್ರೇಷ್ಠ ವ್ಯಕ್ತಿಯನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ನಿಮ್ಮ ಅದೃಷ್ಟವೇ ಸರಿ’ ಎಂದು ಮತ್ತೊಬ್ಬರು ಹೇಳಿದ್ದಾರೆ.

‘ಭಾರತ ನಿಜಕ್ಕೂ ಬದಲಾಗುತ್ತಿದೆ. ನಮ್ಮ ನಿಜವಾದ ಹೀರೊವನ್ನು ಗೌರವಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಸೋಮನಾಥ್ ಅವರು ಅತ್ಯಂತ ಸರಳ ವ್ಯಕ್ತಿ’ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT