ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನಲ್ಲಿ ಭಾರತೀಯನೊಬ್ಬ ಇಳಿಯುವವರೆಗೆ ಚಂದ್ರಯಾನ ಮುಂದುವರಿಕೆ: ಇಸ್ರೊ ಅಧ್ಯಕ್ಷ

Published 17 ಏಪ್ರಿಲ್ 2024, 14:13 IST
Last Updated 17 ಏಪ್ರಿಲ್ 2024, 14:13 IST
ಅಕ್ಷರ ಗಾತ್ರ

ಅಹಮದಾಬಾದ್‌: ಚಂದಿರನ ಅಂಗಳದಲ್ಲಿ ದೇಶದ ಗಗನಯಾನಿಯೊಬ್ಬ ಇಳಿಯುವವರೆಗೂ ಬಾಹ್ಯಾಕಾಶ ಕಾರ್ಯಕ್ರಮ ‘ಚಂದ್ರಯಾನ’ ಸರಣಿಯನ್ನು ಮುಂದುವರಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್‌.ಸೋಮನಾಥ್ ಬುಧವಾರ ಹೇಳಿದ್ದಾರೆ.

ಭಾರತೀಯ ಗಗನಯಾನ ಸಂಸ್ಥೆ (ಎಎಸ್‌ಐ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಚಂದ್ರಯಾನ–3 ಯಶಸ್ವಿಯಾಗಿದ್ದು, ದತ್ತಾಂಶ ಸಂಗ್ರಹ ಕಾರ್ಯ ಮುಗಿದಿದೆ. ಈ ಬಾಹ್ಯಾಕಾಶ ಕಾರ್ಯಕ್ರಮ ಕುರಿತ ವೈಜ್ಞಾನಿಕ ವರದಿ ಪ್ರಕಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗ, ಭಾರತೀಯ ಗಗನಯಾತ್ರಿಯೊಬ್ಬರು ಚಂದ್ರನ ಅಂಗಳದಲ್ಲಿ ಇಳಿಯುವವರೆಗೆ ಈ ಕಾರ್ಯಕ್ರಮವನ್ನು ಮುಂದುವರಿಸಲು ಬಯಸಿದ್ದೇವೆ’ ಎಂದು ಹೇಳಿದರು.

‘ಗಗನಯಾನಿಯೊಬ್ಬರನ್ನು ಚಂದ್ರನಲ್ಲಿಗೆ ಕಳುಹಿಸುವ ಮುನ್ನ, ಗಗನನೌಕೆಯನ್ನು ಚಂದ್ರನ ಮೇಲೆ ಇಳಿಸಿ, ನಂತರ ಭೂಮಿಗೆ ಮರಳಿ ತರುವುದು ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ನಾವು ಕರಗತ ಮಾಡಿಕೊಳ್ಳಬೇಕಿದೆ. ಈ ತಾಂತ್ರಿಕ ಕಾರ್ಯಗಳನ್ನು ಮುಂದಿನ ಚಂದ್ರಯಾನದಲ್ಲಿ ಕೈಗೆತ್ತಿಕೊಳ್ಳಲು ಪ್ರಯತ್ನಿಸಲಿದ್ದೇವೆ’ ಎಂದರು.

ಭಾರತದ ಮೊದಲ ಮಾನವ ಸಹಿತ ಗಗನಯಾನ ಕುರಿತ ಪ್ರಶ್ನೆಗೆ, ‘ಯಾವುದೇ ಸಿಬ್ಬಂದಿ ಇರದ ಗಗನನೌಕೆಯ ಪರೀಕ್ಷಾರ್ಥ ಉಡ್ಡಯನ ಹಾಗೂ ಇತರ ಪರೀಕ್ಷೆಗಳನ್ನು ಈ ವರ್ಷ ನಡೆಸಲಾಗುವುದು’ ಎಂದು ಉತ್ತರಿಸಿದರು.

‘ಏಪ್ರಿಲ್‌ 24ರಂದು ಏರ್‌ಡ್ರಾಪ್‌ ಪರೀಕ್ಷೆಯನ್ನು ನಡೆಸಲಾಗುವುದು. ಮುಂದಿನ ವರ್ಷ ಮಾನವ ರಹಿತ ಎರಡು ಗಗನಯಾತ್ರೆಯನ್ನು ನಡೆಸಲಾಗುವುದು. ಎಲ್ಲವೂ ಸರಿ ಎಂಬುದು ಖಾತ್ರಿಯಾದರೆ, ಮುಂದಿನ ವರ್ಷಾಂತ್ಯಕ್ಕೆ ಮಾನವ ಸಹಿತ ಗಗನಯಾನವನ್ನು ಕಾರ್ಯರೂಪಕ್ಕೆ ತರಲಾಗುವುದು’ ಎಂದು ಸೋಮನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT