ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಹಾಂಗೀರ್‌ಪುರಿ: ಆರೋಪಿಗಳ ಮೇಲೆ ಇ.ಡಿ ಪ್ರಕರಣ

Last Updated 23 ಏಪ್ರಿಲ್ 2022, 20:14 IST
ಅಕ್ಷರ ಗಾತ್ರ

ನವದೆಹಲಿ: ಜಹಾಂಗೀರ್‌ಪುರಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಆರೋಪಿಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ದಾಖಲಿಸಿಕೊಂಡಿದೆ. ಪ್ರಮುಖ ಆರೋಪಿ ಮೊಹಮ್ಮದ್‌ ಅನ್ಸಾರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದೆಹಲಿ ಪೊಲೀಸ್‌ ಆಯುಕ್ತ ರಾಕೇಶ್‌ ಅಸ್ತಾನಾ ಅವರು ಆರೋಪಿಗಳ ವಿರುದ್ಧ ತನಿಖೆ ನಡೆಸುವಂತೆ ಇ.ಡಿ.ಗೆ ಇತ್ತೀಚೆಗೆ ಶಿಫಾರಸು ಮಾಡಿದ್ದರು. ಪೊಲೀಸ್‌ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು‍ ಅವರು‍ ಉಲ್ಲೇಖಿಸಿದ್ದರು. ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ ಆಧಾರದಲ್ಲಿ ಇ.ಡಿ. ತನಿಖೆ ನಡೆಯಲಿದೆ.

ಇದೇ 16ರಂದು ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ವಾಯವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಎಂಟು ಪೊಲೀಸರು ಮತ್ತು ಸ್ಥಳೀಯ ವ್ಯಕ್ತಿಯೊಬ್ಬರು ಸಂಘರ್ಷದಲ್ಲಿ ಗಾಯಗೊಂಡಿದ್ದರು. ಕಲ್ಲು ತೂರಾಟ ನಡೆದಿತ್ತು ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಅನ್ಸಾರ್‌ ಹಣದ ಕೆಲವು ವ್ಯವಹಾರ ನಡೆಸಿದ್ದಾರೆ ಮತ್ತು ಅವರ ಬಳಿ ಹಲವು ಆಸ್ತಿಗಳಿವೆ. ಜೂಜಾಟದಿಂದ ಬಂದ ಹಣದಲ್ಲಿ ಈ ಆಸ್ತಿ ಖರೀದಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ಇ.ಡಿ. ವಿಚಾರಣೆಗೆ ಒಳಪಡಿಸಲಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸುವ ಮತ್ತು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇ.ಡಿ.ಗೆ ಇದೆ.

ಹಿಂಸಾಚಾರ ಪ್ರಕರಣದಲ್ಲಿ ಈವರೆಗೆ 25 ಮಂದಿಯನ್ನು ಬಂಧಿಸಲಾಗಿದೆ. ಇಬ್ಬರು ಬಾಲಕರನ್ನೂ ವಶಕ್ಕೆ ಪಡೆಯಲಾಗಿದೆ. ಅನ್ಸಾರ್‌ ಸೇರಿ ಐವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಹಾಂಗೀರ್‌ಪುರಿಯ ನಿವಾಸಿಗಳಿಗೆ ಅಗತ್ಯ ವಸ್ತುಗಳು ಲಭ್ಯವಾಗುತ್ತಿಲ್ಲ. ಈ ಪ್ರದೇಶದಲ್ಲಿ ಹೇರಿರುವ ನಿರ್ಬಂಧದಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲಿನ ಜನರನ್ನು ಪಂಜರದಲ್ಲಿ ಇರಿಸಿದಂತೆ ಆಗಿದೆ. ಹೊರಗೆ ಬರಲು ಅವಕಾಶ ಕೊಡುತ್ತಿಲ್ಲ. ಅಗತ್ಯ ಪ್ರಮಾಣದಲ್ಲಿ ನೀರು ಕೂಡ ಲಭ್ಯವಿಲ್ಲ ಎಂದು ಜನರು ದೂರಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಕಾಕೋಲಿ ಘೋಷ್‌ ದಸ್ತಿದಾರ್‌ ಹೇಳಿದ್ದಾರೆ.

ಸತ್ಯಶೋಧನೆಗಾಗಿ ಜಹಾಂಗೀರ್‌ಪುರಿಗೆ ಭೇಟಿ ನೀಡಿದ್ದ ಟಿಎಂಸಿಯ ಮಹಿಳಾ ನಿಯೋಗದ ನೇತೃತ್ವವನ್ನು ಕಾಕೋಲಿ ವಹಿಸಿದ್ದರು.

ಜಹಾಂಗೀರ್‌ಪುರಿಯ ಸಿ ಬ್ಲಾಕ್‌ನಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಲ್ಲೆಡೆಯೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಎಲ್ಲ ನಿರ್ಬಂಧಗಳನ್ನು ಮೀರಿ ಟಿಎಂಸಿ ನಿಯೋಗವು ಜಹಾಂಗೀರ್‌ಪುರಿಗೆ ಹೋಗಿದೆ.ಅಲ್ಲಿನ ನಿವಾಸಿಗಳ ಜತೆಗೆ ಮಾತನಾಡಿದೆಎಂದು ಕಾಕೋಲಿ ಹೇಳಿದ್ದಾರೆ.

‘ಪೊಲೀಸರು ತಡೆಯುವುದಕ್ಕೆ ಮುನ್ನವೇ ನಾವು ಹಲವು ಮಂದಿಯ ಜತೆಗೆ ಮಾತನಾಡಿದ್ದೇವೆ.ಹಿಂಸಾಚಾರ ನಡೆದಾಗ
ಅಲ್ಲಿ ಇದ್ದ ಜನರನ್ನೂ ಮಾತನಾಡಿಸಿದ್ದೇವೆ. ಜನರು ಭೀತಿಯಲ್ಲಿದ್ದಾರೆ’ ಎಂದು ಅವರುತಿಳಿಸಿದ್ದಾರೆ.

‘ಜಹಾಂಗೀರ್‌ಪುರಿ ಘಟನೆಯ ಬಗ್ಗೆ ತನಿಖೆ ನಡೆಸಲು ಮಮತಾ ಬ್ಯಾನರ್ಜಿ ಅವರು ಕಳುಹಿಸಿದ್ದ ಮಹಿಳೆಯರೇ ಇದ್ದ ತಂಡವನ್ನು ಪೊಲೀಸರು ತಡೆದಿದ್ದಾರೆ. ತಂಡವು ಜನರನ್ನು ಮಾತನಾಡಿಸಿದರೆ, ಹಿಂಸಾಚಾರದ ಕುರಿತ ಸತ್ಯ ಬಯಲಿಗೆ ಬರುತ್ತದೆ ಎಂದು ಬಿಜೆಪಿ ಸರ್ಕಾರ ಹಾಗೂ ದೆಹಲಿ ಪೊಲೀಸರು ಭಯಗೊಂಡಿದ್ದಾರೆ’ ಎಂದು ನಿಯೋಗದಲ್ಲಿದ್ದ ಅಪೂರೂಪ ಪೊದ್ದಾರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT