ಜೈಪುರ: ಭಾರತದಲ್ಲಿನ ಪ್ರಜಾಪ್ರಭುತ್ವದ ಸಮಸ್ಯೆ ಮತ್ತು ಸವಾಲುಗಳು, ಶ್ರೀಮಂತರು ಹಾಗೂ ಕಂಪನಿಗಳು ದೇಣಿಗೆ ನೀಡುವ ವ್ಯವಸ್ಥೆಯಲ್ಲಿನ ವೈರುಧ್ಯಗಳು, ದೇಶ ವಿಭಜನೆಯ ನೋವಿನ ಕಥೆಗಳ ಕುರಿತು ಜೈಪುರ ಸಾಹಿತ್ಯ ಉತ್ಸವದ ಎರಡನೆಯ ದಿನ ಚರ್ಚೆಗಳು ನಡೆದವು.

ಪ್ರಜಾಪ್ರಭುತ್ವ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಅಶ್ವನಿ ಕುಮಾರ್, ‘ಜನಪ್ರಿಯತೆ ಮತ್ತು ಬಹುಸಂಖ್ಯೆಯನ್ನು ಆಧರಿಸಿದ ಪ್ರಜಾಪ್ರಭುತ್ವದಲ್ಲಿ ತತ್ವಗಳು ಕಡೆಗಣಿಸಲ್ಪಟ್ಟಿದ್ದು, ಪ್ರಜಾಪ್ರಭುತ್ವ ಪತನಗೊಳ್ಳುತ್ತಿದೆ’ ಎಂದರು.

‘ಸುಪ್ರೀಂ ಕೋರ್ಟ್ ಅನೇಕ ಅದ್ಭುತ ತೀರ್ಪುಗಳನ್ನು ನೀಡಿದೆ. ಆದರೆ, ಅವು ಜಾರಿಯಾಗುವಂತೆ ಮಾಡುವಲ್ಲಿ ಸೋತಿದೆ. ಅಂದರೆ, ಪ್ರಜಾಸತ್ತೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳಿಂದ ಹೆಚ್ಚಿನ ಬದಲಾವಣೆಯೇನೂ ಸಾಧ್ಯವಾಗದು. ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುವುದರಲ್ಲಿ ಪ್ರಜಾಪ್ರಭುತ್ವದ ಯಶಸ್ಸು ಇದೆ’ ಎಂದರು.

‘ಪ್ರಜಾಪ್ರಭುತ್ವವು ನಿರಂತರ ವಿಕಾಸಗೊಳ್ಳುವ ವ್ಯವಸ್ಥೆಯಾಗಿದ್ದು, ಇದೊಂದರಿಂದಲೇ ಸಂಪೂರ್ಣ ಸಮಾನತೆ ತರಲು ಸಾಧ್ಯವಿಲ್ಲ. ಭಾರತದ ಪ್ರಜಾಪ್ರಭುತ್ವದ ಯಶಸ್ಸಿನ ಬೇರುಗಳು ರಾಜಪ್ರಭುತ್ವದಲ್ಲಿವೆ’ ಎಂದು ಸಾಮಾಜಿಕ ಚರಿತ್ರೆಕಾರ ಮತ್ತು ಕವಿ ಬದ್ರಿನಾರಾಯಣ್ ಅಭಿಪ್ರಾಯಪಟ್ಟರು.

ಭಿನ್ನ ನಿಲುವು ಮಂಡಿಸಿದ ಲೇಖಕಿ ರೂಹಿ ತಿವಾರಿ, ‘ಸಮಾಜ, ರಾಜಕಾರಣದ ಅಂಚಿನಲ್ಲಿರುವ ಮಹಿಳೆಯರು ಲಿಂಗಸೂಕ್ಷ್ಮತೆಯಿಂದಲೇ ಮತ ಚಲಾಯಿಸುವ ಸ್ಥಿತಿಯಲ್ಲಿದ್ದು, ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಅಡ್ಡಿಯಾಗಿದೆ’ ಎಂದರು.

ದೇಣಿಗೆ ನೀಡಿಕೆ ಹೆಚ್ಚಾಗಲಿ: ಭಾರತದಲ್ಲಿ ಶ್ರೀಮಂತರು ಮತ್ತು ಕಂಪನಿಗಳು ನೀಡುವ ಸಿಎಸ್ಆರ್ ಮತ್ತು ದೇಣಿಗೆ ವ್ಯವಸ್ಥೆಯಲ್ಲಿನ ವೈರುಧ್ಯಗಳ ಬಗೆಗಿನ ಗೋಷ್ಠಿಯಲ್ಲಿ ಭಾಗವಹಿಸಿದ್ದ ಟಾಟಾ ಟ್ರಸ್ಟ್ ಸಿಇಒ ಸಿದ್ದಾರ್ಥ ಶರ್ಮಾ, ‘ಜನರಿಂದ ಬಂದದ್ದು ಜನರಿಗೇ ಹೋಗಬೇಕು ಎನ್ನುವುದು ಜೆಆರ್ಡಿ ಟಾಟಾ ಅವರ ನಂಬಿಕೆಯಾಗಿತ್ತು. ದೇಶದ ಒಟ್ಟು ದೇಣಿಗೆಯಲ್ಲಿ ಟಾಟಾ ಟ್ರಸ್ಟ್ ಪಾಲು ಶೇ 10 ರಿಂದ ಶೇ 15ರಷ್ಟು ಇದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಬಳಸುವ, ತಳಮಟ್ಟದಲ್ಲಿ ಕೆಲಸ ಮಾಡುವ ವ್ಯವಸ್ಥೆಯ ಕೊರತೆ ಇದೆ’ ಎಂದರು.

ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾಂತಾ ಸಿಂಗ್, ‘ದೇಣಿಗೆಯನ್ನು ಬಳಸುವಾಗ ಲಿಂಗ ಸಮಾನತೆ, ಅಂಗವೈಕಲ್ಯ, ವಲಸೆಯಂಥ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ’ ಎಂದರು.

ಸಂವಾದದಲ್ಲಿ ಭಾಗವಹಿಸಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ತರ್ ಡುಫ್ಲೊ, ‘ದೇಣಿಗೆ ನೀಡಲು ಗಾಢ ಪ್ರೀತಿ ಇರಬೇಕು. ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚುತ್ತಿರುವ ಭಾರತದ ಅನಪೇಕ್ಷಿತ ಬೆಳವಣಿಗೆಯ ಕಾಲದಲ್ಲಿ ದೇಣಿಗೆ ನೀಡುವುದು ಹೆಚ್ಚಾಗಬೇಕು’ ಎಂದರು.

ಕಂಪನಿಗಳು ದೇಣಿಗೆ ನೀಡುವಾಗ ಅಭಿವೃದ್ಧಿ ಕಾರ್ಯಗಳಿಗೆ ನೀಡುತ್ತಿವೆಯೇ ವಿನಾ ಅವುಗಳ ಪರಿಣಾಮಕಾರಿ ಜಾರಿಗೆ ಅಗತ್ಯವಾದ ಜ್ಞಾನ, ಸಾಮರ್ಥ್ಯ ನಿರ್ಮಾಣವನ್ನು ನಿರ್ಲಕ್ಷಿಸುತ್ತಿವೆ ಎನ್ನುವ ಅಭಿಪ್ರಾಯ ಗೋಷ್ಠಿಯಲ್ಲಿ ವ್ಯಕ್ತವಾಯಿತು

ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಯಾವ ಭೂಭಾಗವೂ ಸುರಕ್ಷಿತವಲ್ಲ. ಈ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆಯು ಬಲಿಷ್ಠವಾಗಬೇಕು ಎನ್ನುವ ಅಭಿಪ್ರಾಯ ‘ಗಾಯಗೊಂಡ ಜಗತ್ತಿನಲ್ಲಿ ಶಾಂತಿಯ ದಾರಿಗಳು ಗೋಷ್ಠಿಯಲ್ಲಿ ವ್ಯಕ್ತವಾಯಿತು.

ಕಾದಂಬರಿಗಳ ಬರವಣಿಗೆಗೆ ಸಂಬಂಧಿಸಿದ ಗೋಷ್ಠಿಯಲ್ಲಿ ಲೇಖಕರಾದ ರುಚಿರ್ ಜೋಷಿ ಮತ್ತು ರಾಹುಲ್ ಭಟ್ಟಾಚಾರ್ಯ ಅವರೊಂದಿಗೆ ನಂದಿನಿ ನಾಯರ್ ಸಂವಾದ ನಡೆಸಿದರು. ಜೋಷಿ ಅವರ ‘ಗ್ರೇಟ್ ಈಸ್ಟ್ರನ್ ಹೋಟೆಲ್’ ಹಾಗೂ ಭಟ್ಟಾಚಾರ್ಯ ಅವರ ‘ರೈಲ್ ಸಾಂಗ್’ ಕಾದಂಬರಿಗಳು ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಲೋಕದ ಚಿತ್ರಣವನ್ನು ನೀಡುತ್ತವೆ ಎಂದರು.

ಗಡಿಯಲ್ಲಿ ಗಾಯಕಿಯರ ಪಾರ್ಟಿ

‘ದೇಶ ವಿಭಜನೆಯ ಕಾಲದ ಅವ್ಯಕ್ತ ಕಥೆಗಳು’ ಗೋಷ್ಠಿಯಲ್ಲಿ ಪಾಕಿಸ್ತಾನದ ಗಾಯಕಿ ನೂರ್ ಜಹಾನ್ ಅವರಿಗೆ ಸಂಬಂಧಿಸಿದ ಎರಡು ಘಟನೆಗಳನ್ನು ಹಂಚಿಕೊಳ್ಳಲಾಯಿತು.

ಮುಂಬೈಗೆ ಬಂದಿದ್ದ ಅವರು ತಾನು ದೇಶವಿಭಜನೆಯ ಪೂರ್ವದಲ್ಲಿ ವಾಸವಿದ್ದ ಮನೆಗೆ ಅಸ್ಪಷ್ಟ ನೆನಪಿನಿಂದಲೇ ಕಾರು ಚಾಲಕನಿಗೆ ದಾರಿ ತೋರಿಸಿದ್ದನ್ನು, ಮನೆಯನ್ನು ಕಂಡು ಸಂಭ್ರಮಿಸಿದ್ದನ್ನು ಸಿನಿಮಾ ವಿಮರ್ಶಕಿ ಭಾವನಾ ಸೋಮಯ್ಯ ನೆನಪಿಸಿಕೊಂಡರು.

ಅದಕ್ಕೆ ಧ್ವನಿಗೂಡಿಸಿದ ಲೇಖಕಿ ಕಿಶ್ವರ್ ದೇಸಾಯಿ, ಅಮೃತಸರದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ತಮ್ಮ ತಂದೆಯನ್ನು ಕಾಡಿಬೇಡಿ ಲತಾ ಮಂಗೇಶ್ಕರ್ ಅವರು ಮತ್ತು ನೂರ್ ಜಹಾನ್ ಅವರು ಗಡಿಯಲ್ಲಿ ಭೇಟಿ ಮಾಡಿ ಜತೆಗೆ ಕಾಲ ಕಳೆದಿದ್ದರು, ಪಾರ್ಟಿ ಮಾಡಿದ್ದರು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.