ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಧ್ಯೆ ತೀರ್ಪು ಪ್ರಶ್ನಿಸಿ ಮೊದಲ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

Last Updated 2 ಡಿಸೆಂಬರ್ 2019, 11:28 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಜಮಾತ್‌ ಉಲೇಮಾ ಇ ಹಿಂದ್‌ ಸಂಘಟನೆಯು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಸಂಘಟನೆಯ ಮುಖ್ಯಸ್ಥ ಮೌಲಾನ ಅರ್ಷದ್‌ ಮದನಿ ಅವರು ಈ ವಿಚಾರ ತಿಳಿಸಿದ್ದಾರೆ.

‘ಅಯೋಧ್ಯೆ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಇಡೀ ಸಮುದಾಯದ ಸಮ್ಮತಿ ಇದೆ. ಇದರ ವಿರುದ್ಧ ಇರುವವರು ಕೆಲವರಷ್ಟೇ. ಮರು ಪರಿಶೀಲನೆ ಕೋರುವ ಹಕ್ಕನ್ನು ಕೋರ್ಟ್‌ ಎಲ್ಲರಿಗೂ ನೀಡಿದ್ದು, ಅದರಂತೆ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಬೇಕಾಗಿದೆ,’ ಎಂದು ಮದನಿ ಹೇಳಿದ್ದಾರೆ.

‌‘ದೇಗುಲವೊಂದನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಲಾಯಿತು ಎಂಬುದು ಪ್ರಕರಣದ ಪ್ರಮುಖಾಂಶ. ಆದರೆ, ಮಂದಿರ ನಾಶ ಮಾಡಿ ಮಸೀದಿ ಕಟ್ಟಿದ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್‌ ಹೇಳಿದೆ. ಹಾಗೆಂದ ಮೇಲೆ ಜಾಗ ನಮ್ಮದೇ ಎಂದು ಸಾಬೀತಾಯಿತು. ಆದರೆ, ಅಂತಿಮ ತೀರ್ಪಿನಲ್ಲಿ ಇದಕ್ಕೆ ವ್ಯತಿರಿಕ್ತವಾದ ತೀರ್ಪು ಪ್ರಕಟವಾಗಿದೆ. ಇದೇನೆಂದು ಅರ್ಥವಾಗುತ್ತಿಲ್ಲ. ಹೀಗಾಗಿ ನಾವು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದೇವೆ,’ ಎಂದು ಅವರು ಹೇಳಿದ್ದಾರೆ.

ತೀರ್ಪಿನ ಸಂಬಂಧ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆ ಬೇಡವೇ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲು ಜಮಾತ್‌ ಸಂಘಟನೆಯು ತಜ್ಞರು, ಧರ್ಮ ಗುರುಗಳನ್ನೊಳಗೊಂಡ ಐವರ ಸಮಿತಿಯನ್ನು ರಚಿಸಿತ್ತು. ಜಮಾತ್‌ ಸಂಘಟನೆಯ ಮುಖ್ಯಸ್ಥ ಮೌಲಾನಾ ಅರ್ಷದ್‌ ಮದನಿ ಅವರ ನೇತೃತ್ವದ ಸಮಿತಿಯು ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಅಂತಿಮ ತೀರ್ಮಾನಕ್ಕೆ ಬಂದಿದೆ.

ಅಯೋಧ್ಯೆಯ 2.77 ಎಕರೆ ಜಮೀನನ್ನು ಮಂದಿರ ನಿರ್ಮಾಣಕ್ಕಾಗಿ ರಾಮ ಲಲ್ಲಾಕ್ಕೆ ನೀಡಿರುವ ಸುಪ್ರೀಂ ಕೋರ್ಟ್‌, ಅಯೋಧ್ಯೆಯ ಸೂಕ್ತ ಸ್ಥಳದಲ್ಲಿ ಸುನ್ನಿ ವಕ್ಫ್‌ ಬೋರ್ಡ್‌ಗೆ 5 ಎಕರೆ ಜಮೀನು ನೀಡಲು ಕೇಂದ್ರ ಸರ್ಕಾರಕ್ಕೆ ಆದೇಶಿಸಿ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು.

ಈ ತೀರ್ಪನ್ನು ಪ್ರಶ್ನಿಸದಿರಲು ಸುನ್ನಿ ವಕ್ಫ್‌ ಬೋರ್ಡ್‌ ನಿರ್ಧರಿಸಿದ್ದರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT