ಶ್ರೀನಗರ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ದನಿ ಅಡಗಿಸಲು ಯತ್ನಿಸುತ್ತಿದೆ. ಇದಕ್ಕಾಗಿ ಅದು ನನ್ನ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ಶುಕ್ರವಾರ ಆರೋಪಿಸಿದ್ದಾರೆ.
ಗಾಂದರಬಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಮಾಡಿರುವ ಆರೋಪಗಳು, ಚುನಾವಣಾ ಕಣ ಮತ್ತಷ್ಟು ತುರುಸಿನಿಂದ ಕೂಡಿರಲಿದೆ ಎಂಬ ಸೂಚನೆ ನೀಡಿದೆ.
ಗಾಂದರಬಲ್ ಕ್ಷೇತ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರು ಈ ಆರೋಪಗಳನ್ನು ಮಾಡಿದ್ದಾರೆ.
‘ಒಂದಲ್ಲ ಒಂದು ರೀತಿಯ ತಂತ್ರ ಬಳಸಿ, ಕೇಂದ್ರ ಸರ್ಕಾರ ನನ್ನನ್ನು ತುಳಿಯಲು ಯತ್ನಿಸುತ್ತಿರುವ ಕುರಿತು ಮೊದಲಿನಿಂದಲೂ ನನಗೆ ಗೊತ್ತಿತ್ತು. ಆದರೆ, ದೆಹಲಿಯಲ್ಲಿ ಆಡಳಿತ ನಡೆಸುವವರು ಈ ಮಟ್ಟಕ್ಕೆ ಹೋಗುತ್ತಾರೆ ಎಂಬುದಾಗಿ ಅಂದಾಜಿಸಿರಲಿಲ್ಲ’ ಎಂದಿದ್ದಾರೆ.
‘ಲೋಕಸಭಾ ಚುನಾವಣೆ ವೇಳೆ, ಬಾರಾಮುಲ್ಲಾ ಕ್ಷೇತ್ರದಲ್ಲಿ ಶೇಖ್ ಅಬ್ದುಲ್ ರಶೀದ್ ನನ್ನ ವಿರುದ್ಧ ಸ್ಪರ್ಧಿಸಿದ್ದರು. ಜೈಲಿನಲ್ಲಿದ್ದುಕೊಂಡೇ ನಾಮಪತ್ರ ಸಲ್ಲಿಸಿದ್ದ ರಶೀದ್, ಧ್ವನಿಮುದ್ರಿತ ಭಾಷಣಗಳ ಮೊರೆ ಹೋಗಿದ್ದರು. ತಮ್ಮ ಮಾತಿನಲ್ಲಿ ಭಾವನಾತ್ಮಕ ವಿಷಯಗಳನ್ನೇ ಪ್ರಸ್ತಾಪಿಸಿ ಮತ ಕೇಳಿದ್ದ ಅವರು, ನನ್ನ ಸೋಲಿಸಿದರು’ ಎಂದು ಒಮರ್ ಹೇಳಿದ್ದಾರೆ.
‘ಲೋಕಸಭಾ ಚುನಾವಣೆಯ ಫಲಿತಾಂಶ ಆತಂಕಕಾರಿ ಎಂದು ನಾನು ಭಾವಿಸಿರಲಿಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಗಾಂದರಬಲ್ ಕ್ಷೇತ್ರದಿಂದ ಸ್ಪರ್ಧಿಸಲು ನಾನು ತೀರ್ಮಾನಿಸಿದ ನಂತರ ಕಂಡುಬರುತ್ತಿರುವ ಬೆಳವಣಿಗೆಗಳು ನನ್ನ ಚಿಂತನೆಯನ್ನು ಬದಲಾಯಿಸುವಂತೆ ಮಾಡಿವೆ’ ಎಂದು ಹೇಳಿದ್ದಾರೆ.
‘ಜೈಲಿನಲ್ಲಿರುವ ಸರ್ಜಾನ್ ಅಹ್ಮದ್ ವಾಗೇ ಅಲಿಯಾಸ್ ಬರ್ಕತಿ ಎಂಬ ವ್ಯಕ್ತಿ ನನ್ನ ವಿರುದ್ಧ ಸ್ಪರ್ಧಿಸಲಿದ್ದಾನೆ ಎಂಬ ಬಗ್ಗೆ ವರದಿಗಳು ಬಂದಿವೆ. ಹೀಗಾಗಿ, ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆಯೇ ಎಂದು ಪ್ರಶ್ನಿಸುವಂತಾಗಿದೆ’ ಎಂದು ಒಮರ್ ಹೇಳಿದ್ದಾರೆ.
‘ರಶೀದ್, ಸ್ಥಳೀಯರೇ ಆಗಿರುವ ಕಾರಣ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲೆ. ವಿಧಾನಸಭಾ ಚುನಾವಣೆಯಲ್ಲಿ, ಜೈನಾಪೊರಾ–ಶೋಪಿಯಾನ್‌ದವರಾದ ಬರ್ಕತಿ ಅವರನ್ನು ಗಾಂದರಬಲ್‌ನಿಂದ ಕಣಕ್ಕಿಳಿಸುತ್ತಿರುವುದು ಏಕೆ? ಸೆರೆವಾಸದಲ್ಲಿರುವ ಸ್ಥಳೀಯ ವ್ಯಕ್ತಿಯೊಬ್ಬ ಇವರಿಗೆ ಸಿಗಲಿಲ್ಲವೇ?’ ಎಂದಿದ್ದಾರೆ.
‘ಈ ವಿಚಾರ ಕುರಿತು ನನ್ನ ಕೆಲ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿರುವೆ. ನನ್ನ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪಿತೂರಿ ಇದೆ ಎಂಬುದನ್ನು ಸಾಬೀತು ಮಾಡುವುದಾಗಿ ಅವರಿಗೆ ತಿಳಿಸಿದ್ಧೇನೆ’ ಎಂದು ಹೇಳಿದ್ದಾರೆ.
‘ನಾನು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದರೆ ಅದರಲ್ಲಿ ನನ್ನ ಅಥವಾ ನನ್ನ ಕುಟುಂಬದ ಸ್ವಾರ್ಥ ಏನೂ ಇರುವುದಿಲ್ಲ. ನನ್ನ ಹೋರಾಟ ಏನಿದ್ದರೂ ಜಮ್ಮು–ಕಾಶ್ಮೀರದ ಪರವಾಗಿ ಇರುತ್ತದೆ. ಬಿಜೆಪಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೇ ನನ್ನ ವಿರುದ್ಧ ಅದು ಪಿತೂರಿ ನಂತರ ಪಿತೂರಿ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.
ನನ್ನ ದನಿ ಅಡಗಿಸಲು ನಡೆಸಿದಷ್ಟು ಪ್ರಯತ್ನವನ್ನು ಜಮ್ಮು–ಕಾಶ್ಮೀರದ ಇತರ ಯಾವ ರಾಜಕೀಯ ವ್ಯಕ್ತಿಯ ಸದ್ದಡಗಿಸಲು ಕೇಂದ್ರ ಸರ್ಕಾರ ಮಾಡುತ್ತಿಲ್ಲ.–ಒಮರ್ ಅಬ್ದುಲ್ಲಾ, ಎನ್‌ಸಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.